ಮುಂಬೈ: ಟಾಟಾ ಸನ್ಸ್ ಸಂಸ್ಥೆಯ ಮುಖ್ಯಸ್ಥ ಎನ್.ಚಂದ್ರಶೇಖರನ್ ಅವರು ಮುಂಬೈನಲ್ಲಿ ಬರೋಬ್ಬರಿ 98 ಕೋಟಿ ರೂ. ಮೌಲ್ಯದ ಡುಪ್ಲೆಕ್ಸ್ ಮನೆಯನ್ನು ಖರೀದಿಸಿದ್ದಾರೆ.
ಕಳೆದ 5 ವರ್ಷಗಳಿಂದ ಅದೇ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಅವರು ಇದೀಗ ಅದೇ ಮನೆಯನ್ನು ತಮ್ಮ ಸ್ವಂತದ್ದಾಗಿಸಿಕೊಂಡಿದ್ದಾರೆ.
ದಕ್ಷಿಣ ಮುಂಬೈನ ಜಸ್ಲೋಕ್ ಆಸ್ಪತ್ರೆಯ ಸನಿಹದಲ್ಲೇ ಮನೆಯಿದೆ. ಮನೆಯಲ್ಲಿ ಒಟ್ಟು 28 ಮಹಡಿಗಳಿದ್ದು, ಚಂದ್ರಶೇಖರನ್ ಅವರು 11 ಮತ್ತು 12ನೇ ಮಹಡಿಯಲ್ಲಿ ವಾಸವಿರಲಿದ್ದಾರೆ. ಅಂದ ಹಾಗೆ 2017ರಲ್ಲಿ ಅವರು ಟಾಟಾದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಈ ಮನೆಯಲ್ಲಿ ಬಾಡಿಗೆಗೆ ವಾಸ ಆರಂಭಿಸಿದ್ದರು. ಮೂರು ತಿಂಗಳ ಹಿಂದಷ್ಟೇ ಟಾಟಾ ಸಂಸ್ಥೆಯು ಮುಂದಿನ 5 ವರ್ಷಕ್ಕೆ ಚಂದ್ರಶೇಖರನ್ ಅವರನ್ನೇ ಮುಖ್ಯಸ್ಥರನ್ನಾಗಿ ಮುಂದುವರಿಸುವುದಾಗಿ ಘೋಷಿಸಿದೆ. ಅದೇ ಬೆನ್ನಲ್ಲೇ ಅವರು ಮನೆಯನ್ನು ಸ್ವಂತ ಮಾಡಿಕೊಂಡಿದ್ದಾರೆ.
ಕೋಟಿ ಕೋಟಿ ಸಂಬಳ:
ಭಾರತದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವವರಲ್ಲಿ ಒಬ್ಬರು ಚಂದ್ರಶೇಖರನ್ ಅವರು. 2021ರ ಆರ್ಥಿಕ ವರ್ಷದಲ್ಲಿ ಚಂದ್ರಶೇಖರನ್ ಅವರಿಗೆ ಸಂಸ್ಥೆ ಬರೋಬ್ಬರಿ 91 ಕೋಟಿ ರೂ. ಸಂಬಳ ಕೊಟ್ಟಿದೆ.