Advertisement

ಕೆಸುವು ಅಂದ್ರೆ ಹಸಿವು

05:01 PM Oct 29, 2020 | |

ನಮ್ಮ ಅಡುಗೆಯಲ್ಲಿ  ಕೆಸುವಿನ ಗೆಡ್ಡೆಯ ಉಪಯೋಗ ಕಡಿಮೆ. ಆದರೆ ವಿರಳವಾಗಿ ಬಳಸುವ ಈ ಗೆಡ್ಡೆಯಲ್ಲಿ ಅತ್ಯಧಿಕ ಫೈಬರ್‌ ಅಂಶವಿದೆ. ಇದು ಜೀರ್ಣ ಕ್ರಿಯೆಗೆ ಅನುಕೂಲ ಮಾಡುತ್ತದೆ. ಕೊಬ್ಬಿನಂಶ ಇರದ ಕಾರಣ, ಮಧುಮೇಹ ಮತ್ತು ತೀವ್ರ ರಕ್ತದೊತ್ತಡ ಇರುವವರಿಗೂ ಇದು ಒಳ್ಳೆಯ ಆಹಾರ. ತೂಕ ಕಡಿಮೆ ಮಾಡುವಲ್ಲೂ ಸಹಕಾರಿ. ವಿಟಮಿನ್‌, ಫೈಬರ್‌, ಫಾಲಿಕ್‌ ಆ್ಯಸಿಡ್‌ ಹೇರಳವಾಗಿರುವ ಕೆಸುವಿನ ಗೆಡ್ಡೆಯ ಕೆಲ ರೆಸಿಪಿ ಇಲ್ಲಿದೆ.. 

Advertisement

1. ಕೆಸುವಿನ ಗೆಡ್ಡೆ ಗೊಜ್ಜು
ಬೇಕಾಗುವ ಸಾಮಗ್ರಿ: ಕೆಸುವಿನ ಗಡ್ಡೆ 5-6,  ಬ್ಯಾಡಗಿ ಮೆಣಸು 8, ಎಣ್ಣೆ, ಕೊತ್ತಂಬರಿ ಬೀಜ- 2 ಚಮಚ, ಕಡ್ಲೆ ಬೇಳೆ- 2 ಚಮಚ, ಮೆಂತ್ಯೆ- 1 ಚಮಚ, ಜೀರಿಗೆ -1 ಚಮಚ,  ಸಾಸಿವೆ, ಅರಿಶಿನ- 1 ಚಮಚ, ಇಂಗು, ಉಪ್ಪು ರುಚಿಗೆ ತಕ್ಕಷ್ಟು, ತೆಂಗಿನ ತುರಿ – ಅರ್ಧ ಕಪ್‌, ಹುಣಸೆ ಹಣ್ಣು- ಲಿಂಬೆ ಗಾತ್ರ,  ಬೆಲ್ಲ ರುಚಿಗೆ ತಕ್ಕಷ್ಟು, ಕರಿಬೇವು.

ಮಾಡುವ ವಿಧಾನ: ಕೆಸುವಿನ ಗೆಡ್ಡೆಯನ್ನು ತೊಳೆದು ಕುಕ್ಕರ್‌ನಲ್ಲಿ ಎರಡು ವಿಷಲ್‌ ಕೂಗಿಸಿ. ಬೆಂದ ಕೆಸುವಿನ ಗೆಡ್ಡೆಯ ಸಿಪ್ಪೆ ತೆಗೆದು ಎರಡು ಭಾಗ ಮಾಡಿ. ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಕಡ್ಲೆಬೇಳೆ, ಉದ್ದಿನ ಬೇಳೆ, ಮೆಂತ್ಯೆ, ಜೀರಿಗೆ, ಸಾಸಿವೆ, ಮೆಣಸಿನಕಾಯಿಯನ್ನು ಒಂದೊಂದೇ ಹಾಕಿ ಫ್ರೈ ಮಾಡುತ್ತಾ ಬನ್ನಿ. ಸ್ವಲ್ಪ ಫ್ರೈ ಆದ ಮೇಲೆ, ಕರಿಬೇವು ಹಾಕಿ ಹೊಂಬಣ್ಣ ಬರುವವರೆಗೆ ಫ್ರೈ ಮಾಡಿ. ಈಗ ಕೊತ್ತಂಬರಿ ಬೀಜ ಹಾಕಿ. ನಂತರ ಮಿಕ್ಸಿಗೆ ಕಾಯಿತುರಿ ಹಾಕಿ, ಫ್ರೈ ಮಾಡಿದ ಮಸಾಲೆ ಮಿಕ್ಸ್ ಮಾಡಿ, ನೀರು ಹಾಕಿ ಸ್ವಲ್ಪ ತರಿತರಿಯಾಗಿ ರುಬ್ಬಿ. ಈಗ ಮಸಾಲೆ ರೆಡಿ.
ಇನ್ನೊಂದು ಬಾಣಲೆಗೆ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿ ಇದಕ್ಕೆ ಬಿಡಿಸಿಟ್ಟ ಕೆಸುವಿನ ಗೆಡ್ಡೆ ಹಾಕಿ ಫ್ರೈ ಮಾಡಿ. ಫ್ರೈ ಮಾಡುವಾಗಲೇ ಅರಿಶಿನ ಮತ್ತು ಹುಣಸೆಹಣ್ಣು ಹಾಕಿ. ಕೆಸುವಿನ ಲೋಳೆ ಅಂಶ ಹೋಗುವವರೆಗೆ ಫ್ರೈ ಆಗಲಿ. ನಂತರ ರುಬ್ಬಿದ ಮಸಾಲೆ, ನೀರು ಹಾಕಿ. ಹದ ಸ್ವಲ್ಪ ಗಟ್ಟಿಯಾಗೇ ಇರಲಿ. ಈಗ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ. ಸಾಸಿವೆ ಇಂಗಿನ ಒಗ್ಗರಣೆ ಕೊಡಬಹುದು.

2. ಕೆಸುವಿನ ಗೆಡ್ಡೆಯ ಖಾರದ ಕಡ್ಡಿ
ಬೇಕಾಗುವ ಸಾಮಗ್ರಿ:
ಕೆಸುವಿನ ಗೆಡ್ಡೆ 10, ಅಕ್ಕಿ ಹಿಟ್ಟು 1 ಕಪ್‌, ಜೀರಿಗೆ ಪುಡಿ 1 ಚಮಚ, ಉಪ್ಪು, ಇಂಗು, ಅಚ್ಚ ಖಾರದ ಪುಡಿ, ಎಣ್ಣೆ.

ಮಾಡುವ ವಿಧಾನ: ಕೆಸುವಿನ ಗೆಡ್ಡೆಯನ್ನು ತೊಳೆದು ಕುಕ್ಕರ್‌ನಲ್ಲಿ ಬೇಯಿಸಿ. ಬೆಂದ ಕೆಸುವಿನ ಗೆಡ್ಡೆಯ ಸಿಪ್ಪೆ ತೆಗೆದು ನುರಿದು, ಅದಕ್ಕೆ ಜೀರಿಗೆ ಪುಡಿ, ಇಂಗು, ಅಚ್ಚ ಖಾರದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಈಗ ಅಕ್ಕಿ ಹಿಟ್ಟು ಹಾಕಿ ಕಲಸಿ. ಕೆಸುವಿನ ಗೆಡ್ಡೆಯಲ್ಲಿ ನೀರಿನ ಅಂಶ ಇರುವುದರಿಂದ ಪುನಃ ನೀರು ಹಾಕುವುದು ಬೇಡ. ಎಷ್ಟು ಅಕ್ಕಿ ಹಿಟ್ಟು ಹಿಡಿಯುತ್ತದೋ ಅಷ್ಟು ಹಾಕಿ, ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಈಗ ಚಕ್ಕುಲಿ ಒರಳಿಗೆ ಸ್ವಲ್ಪ ಎಣ್ಣೆ ಸವರಿ ಹಿಟ್ಟನ್ನು ಒಳಗೆ ತುಂಬಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ.

Advertisement

3. ಕೆಸುವಿನ ಗೆಡ್ಡೆಯ ಡ್ರೈ ಪಲ್ಯ
ಬೇಕಾಗುವ ಸಾಮಗ್ರಿ:
ಕೆಸುವಿನ ಗೆಡ್ಡೆ 10, ಖಾರದ ಪುಡಿ 2 ಚಮಚ, ಜೀರಿಗೆ ಮತ್ತು ದನಿಯಾ ಪುಡಿ 1 ಚಮಚ, ಇಂಗು, ಅರಿಶಿನ, ಉಪ್ಪು, ಅಕ್ಕಿ ಹಿಟ್ಟು 2 ದೊಡ್ಡ ಚಮಚ, ಹುಳಿ ಪುಡಿ (ಆಮ್‌ಚೂರ್‌ ಪುಡಿ) ಮೊಸರು, ಎಣ್ಣೆ.

ಮಾಡುವ ವಿಧಾನ: ಕೆಸುವಿನ ಗೆಡ್ಡೆಯನ್ನು ಕುಕ್ಕರ್‌ನಲ್ಲಿ ಸ್ವಲ್ಪ ಗಟ್ಟಿಯಾಗಿ ಬೇಯಿಸಿಕೊಳ್ಳಿ. ನಂತರ ಸಿಪ್ಪೆ ತೆಗೆದು ಗೋಲಾಕಾರದ ಸ್ಲೆ„ಸ್‌ ಮಾಡಿ. ಇನ್ನೊಂದು ಪಾತ್ರೆಯಲ್ಲಿ ಖಾರದ ಪುಡಿ, ಜೀರಿಗೆ, ದನಿಯಾ ಪುಡಿ, ಇಂಗು, ಉಪ್ಪು, ಹಳದಿ, ಹುಳಿಪುಡಿ, ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ ಸ್ವಲ್ಪ ಮೊಸರು ಹಾಕಿ. ಕೆಸುವಿನ ಗೆಡ್ಡೆಯ ಸ್ಲೆ„ಸ್‌ ಅನ್ನು ಮಿಶ್ರಣದಲ್ಲಿ ಉರುಳಿಸಿ. ಈಗ ತವಾದಲ್ಲಿ ಎಣ್ಣೆ ಹಾಕಿ, ಸಣ್ಣ ಉರಿಯಲ್ಲಿ ಎರಡೂ ಕಡೆ ಎಣ್ಣೆ ಹಾಕುತ್ತಾ ಬೇಯಿಸಿ. ಇದನ್ನು ಊಟದ ಜೊತೆಗೆ ಸೈಡ್‌ ಡಿಶ್‌ ಆಗಿ ಮೆಲ್ಲಬಹುದು.

4. ಕೆಸುವಿನ ಗೆಡ್ಡೆ ಬೋಂಡ
ಬೇಕಾಗುವ ಸಾಮಗ್ರಿ:
ಕೆಸುವಿನ ಗೆಡ್ಡೆ 10, ಈರುಳ್ಳಿ 2, ಹಸಿಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು, ಇಂಗು, ಉಪ್ಪು, ಕಡಲೆ ಹಿಟ್ಟು 1/2 ಕಪ್‌,  ಅಕ್ಕಿ ಹಿಟ್ಟು 1/2ಕಪ್‌,  ಓಮ, ಜೀರಿಗೆ ಪುಡಿ, ಖಾರದ ಪುಡಿ, ಕರಿಯಲು ಎಣ್ಣೆ.

ಮಾಡುವ ವಿಧಾನ: ಮೊದಲು ಕೆಸುವಿನ ಗೆಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು, ಸಣ್ಣದಾಗಿ ಹೆಚ್ಚಿ. ನಂತರ ಈರುಳ್ಳಿ, ಹಸಿಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪನ್ನು ಹೆಚ್ಚಿಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ, ಉದ್ದಿನ ಬೇಳೆ, ಸಾಸಿವೆ, ಇಂಗು ಹಸಿಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿ ಫ್ರೈ  ಮಾಡಿ. ಅದಕ್ಕೆ ಉಪ್ಪು ಮತ್ತು ಹುಳಿಪುಡಿಯನ್ನು ಮಿಕ್ಸ್ ಮಾಡಿ, ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಿ. ಕೆಸುವಿನ ಗೆಡ್ಡೆಯ ಲೋಳೆ ಅಂಶ ಹೋಗಲಿ. ಸ್ವಲ್ಪ ಆರಿದ ಮೇಲೆ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಇನ್ನೊಂದು ಪಾತ್ರೆಗೆ ಅಕ್ಕಿಹಿಟ್ಟು, ಕಡಲೆಹಿಟ್ಟು, ಓಮ, ಜೀರಿಗೆ ಪುಡಿ,ಉಪ್ಪು, ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ. ದೋಸೆ ಹಿಟ್ಟಿನ ಹದಕ್ಕೆ ನೀರು ಹಾಕಿ ಅರ್ಧ ಗಂಟೆ ಬಿಡಿ. ನಂತರ ಮೇಲೆ ಮಾಡಿಟ್ಟ ಉಂಡೆಗಳನ್ನು ಈ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ.

ಪ್ರೇಮಾ ಲಿಂಗದಕೋಣ

Advertisement

Udayavani is now on Telegram. Click here to join our channel and stay updated with the latest news.

Next