ಬೆಂಗಳೂರು: ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ದುಪ್ಪಟ್ಟು ಮೀನು ಉತ್ಪಾದನೆ ಗುರಿ ಹೊಂದಲಾಗಿದೆ ಎಂದು ಮೀನುಗಾರಿಕೆ ಸಚಿವ ಅಂಗಾರ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಒಳನಾಡು ಮೀನುಗಾರಿಕೆಯಡಿ 4 ಸಾವಿರ ಮೆಟ್ರಿಕ್ ಟನ್ ಉತ್ಪಾದನೆ ಯಾಗುತ್ತಿದ್ದು, ಅದೇ ರೀತಿ ಸಮುದ್ರ ಮೀನುಗಾರಿಕೆಯಡಿ ಮೂರು ಲಕ್ಷ ಟನ್ ಉತ್ಪಾದನೆಯಾಗುತ್ತಿದೆ. ಇದನ್ನು ದುಪ್ಪಟ್ಟುಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.
ಒಳನಾಡು ಮೀನುಗಾರಿಕೆಯಡಿ ಸ್ವ ಸಹಾಯ ಸಂಘಗಳು ಜತೆಗೂಡಿ ಕೆರೆ, ನದಿಗಳಲ್ಲಿ ಮೀನುಗಾರಿಕೆ ಮಾಡಲು 5ರಿಂದ 10 ಕೋಟಿ ರೂ.ವರೆಗೆ ನೆರವು ಒದಗಿಸಲಾಗುವುದು. ಪ್ರತಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅಗತ್ಯ ಉಪಕರಣ ಮತ್ತಿತರ ಸೌಲಭ್ಯ ಒದಗಿಸಲಾಗುವುದು ಎಂದರು.
ಆಯಾ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಒಳನಾಡು ಮೀನುಗಾರಿಕೆಗೆ ಬೇಕಾದ ನೆರವು ಕಲ್ಪಿಸಲು ಅಧಿಕಾರಿ ಗಳಿಗೂ ಸೂಚನೆ ನೀಡಲಾಗಿದೆ. ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯ ಬೇಡಿಕೆ ಇದೆ. ಬಹುಮುಖ್ಯವಾಗಿ ತಾಯಿ ಮೀನು ಬೇಡಿಕೆ ಇದೆ, ಆ ಬಗ್ಗೆ ಗಮನಹರಿಸಲಾಗಿದೆ. ಮೀನು ಮರಿ, ಬಲೆ ಹಾಗೂ ಇತರ ಉಪಕರಣ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಮೀನುಗಾರಿಕೆಗೆ ಉತ್ತೇಜನ ನೀಡಲು ಕೇಂದ್ರ ಸರಕಾರದ ಮತ್ಸé ಸಂಪದ ಯೋಜನೆಯಡಿ ಅನುದಾನ ಲಭ್ಯವಿದೆ. ತಾಲೂಕು ಮಟ್ಟದಲ್ಲಿ ಇದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಪ್ರಸ್ತುತ ಸುಳ್ಯದಲ್ಲಿ 24, ಪುತ್ತೂರಿನಲ್ಲಿ 12 ಮಂದಿ ಮುಂದೆ ಬಂದಿದ್ದಾರೆ. ಇದೇ ರೀತಿ ರಾಜ್ಯದ ಎಲ್ಲ ತಾಲೂಕುಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಇಷ್ಟು ಪ್ರಮಾಣದ ಮೀನು ಉತ್ಪಾದನೆ ಯಾದರೂ ನಮ್ಮ ಬೇಡಿಕೆ ಆರು ಲಕ್ಷ ಮೆಟ್ರಿಕ್ ಟನ್‌ಗಳಷ್ಟಿದೆ. ಪ್ರಸ್ತುತ ಮೀನು ಉತ್ಪಾದನೆಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಈ ಮೊದಲು ಒಂಬತ್ತನೇ ಸ್ಥಾನದಲ್ಲಿತ್ತು. ನಾವು ಮೊದಲ ಸ್ಥಾನಕ್ಕೆ ಬರುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.