Advertisement

ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳಿಗೆ “ಟಾರ್ಗೆಟ್‌’

09:31 AM Oct 10, 2017 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಗಳಾಗಬಯಸುವ ಆಕಾಂಕ್ಷಿಗಳಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, “ಮನೆ ಮನೆಗೆ ಕುಮಾರಣ್ಣ’ ತಲುಪಿಸುವ ಟಾರ್ಗೆಟ್‌ ನೀಡಿದ್ದಾರೆ. 

Advertisement

ಹೌದು, ಜೆಡಿಎಸ್‌ ಸಮ್ಮಿಶ್ರ ಸರ್ಕಾರದ 20 ತಿಂಗಳ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಅವರು ಮಾಡಿದ ಸಾಧನೆ ಸೇರಿ ಜೆಡಿಎಸ್‌ನ ಕಾರ್ಯಕ್ರಮಗಳ ಕುರಿತ ಕೈಪಿಡಿ ಮತದಾರರ ಮನೆ ಬಾಗಿಲಿಗೆ ತಲುಪಿಸುವ ಹೊಣೆಗಾರಿಕೆಯನ್ನು ಆಕಾಂಕ್ಷಿಗಳಿಗೆ ವಹಿಸಲಾಗಿದೆ. ಈ ಕೆಲಸದಲ್ಲಿ ವಿಫ‌ಲರಾಗುವವರಿಗೆ ವಿಧಾನಸಭೆ ಟಿಕೆಟ್‌ ಕೊಡುವುದಿಲ್ಲ. ಒಂದೊಮ್ಮೆ ಈಗಾಗಲೇ ಅಭ್ಯರ್ಥಿ ಎಂದು ಗುರುತಿಸಿದ್ದರೂ ಮುಲಾಜಿಲ್ಲದೆ ಬದಲಾಯಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. “ಮನೆ ಮನೆಗೆ ಕುಮಾರಣ್ಣ’ ಅಭಿಯಾನವನ್ನು ಆಕಾಂಕ್ಷಿಗಳು ಸರಿಯಾಗಿ ಮಾಡಿದ್ದಾರೋ ಇಲ್ಲವೋ ಎಂಬುದರ ಬಗ್ಗೆ ಆ ಕ್ಷೇತ್ರದ ಪಕ್ಷದ ಪದಾಧಿಕಾರಿಗಳು ವರದಿ ಸಲ್ಲಿಸಬೇಕು. ಆ ವರದಿ ಆಧಾರದ ಮೇಲೆ ಟಿಕೆಟ್‌ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಅಭಿಯಾನದ ಮೇಲೆ ನಿಗಾ: ಸುದ್ದಿಗೋಷ್ಠಿ ಯಲ್ಲಿ ಸೋಮವಾರ ಮಾತನಾಡಿದ ಅವರು, ತುಮಕೂರಿನಲ್ಲಿ”ಮನೆ ಮನೆಗೆ ಕುಮಾರಣ್ಣ’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಇದೇ ರೀತಿ 224 ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಪ್ರಾರಂಭಿಸಬೇಕು. ವಿಫ‌ಲ ಆದರೆ ಟಿಕೆಟ್‌ ಕೊಡುವುದಿಲ್ಲ, ಅಭ್ಯರ್ಥಿ ಬದಲಾಯಿಸಲಾಗುವುದು. ಯಾರ್ಯಾರು ಎಷ್ಟರ ಮಟ್ಟಿಗೆ ಅಭಿಯಾನ ಯಶಸ್ವಿ ಮಾಡಲಿದ್ದಾರೆ ಎಂಬುದರ
ಬಗ್ಗೆ ನಾನೂ ಸಹ ನಿಗಾ ವಹಿಸುವೆ ಎಂದು ಹೇಳಿದರು. 

ಡಿಸೆಂಬರ್‌ 15 ರೊಳಗೆ ರಾಜ್ಯದ 224 ಕ್ಷೇತ್ರಗಳಲ್ಲಿ ಅಭಿಯಾನ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಆ ನಂತರ ಡಿಸೆಂಬರ್‌ ಅಂತ್ಯಕ್ಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಇದಕ್ಕೂ ಮುನ್ನ ನವೆಂಬರ್‌ ತಿಂಗಳಲ್ಲಿ ಬೆಂಗಳೂರು  ಸೇರಿದಂತೆ ರಾಜ್ಯದ ವಿವಿಧೆಡೆ ಹಿಂದುಳಿದ ವರ್ಗಗಳ ಸಮಾವೇಶ, ಅಲ್ಪಸಂಖ್ಯಾತರ ಸಮಾವೇಶ, ರೈತರ ಸಮಾವೇಶ, ಎಸ್‌ಸಿ-ಎಸ್‌ಟಿ ಸಮಾವೇಶ ನಡೆಸಲಾಗುವುದು. ಬೆಂಗಳೂರಿನಲ್ಲಿ 28 ಕ್ಷೇತ್ರಗಳ ಪೈಕಿ ಹೆಚ್ಚು ಕ್ಷೇತ್ರ ಗೆಲ್ಲಲು ಹೋರಾಟ ನಡೆದಿದೆ. ಈಗಾಗಲೇ 12 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯೂ ಸಿದ್ಧವಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಎಷ್ಟು ಗೆಲ್ಲುತ್ತೋ ಅಷ್ಟೇ ಪ್ರಮಾಣದ ಸೀಟು ನಾವೂ
ಗೆಲೆವೆ. ಇದು ಚಾಲೆಂಜ್‌ ಎಂದು ಹೇಳಿದರು. 

ಮೀಸಲಾತಿ ಪ್ರಮಾಣ ಶೇ.70ರಷ್ಟು ಹೆಚ್ಚಿಸುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹುಡುಗಾಟ ಆಡುವುದು ಬೇಡ.ಆಂಧ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ಇಂತಹ ಪ್ರಯತ್ನಕ್ಕೆ ಸುಪ್ರೀಂಕೋರ್ಟ್‌ ತಳ್ಳಿಹಾಕಿದ ನಿದರ್ಶನಗಳು ಇದ್ದರೂ ಪ್ರಚಾರಕ್ಕಾಗಿ ಇಂತಹ ಮಾತುಗಳು ಸಲ್ಲ. ಮೀಸಲಾತಿ ಪ್ರಮಾಣ ಹೆಚ್ಚಳ ಬಗ್ಗೆ ಹೇಳಲಿ ಎಂದು ನಮಗೆ ಸವಾಲು ಹಾಕುವುದು ಬೇಡ. ಸಾಮಾಜಿಕ ನ್ಯಾಯದ ವಿಚಾರದಲ್ಲಿ ನರೇಂದ್ರ ಮೋದಿ, ಸೋನಿಯಾಗಾಂಧಿ ಅವರೊಂದಿಗೆ ನಾನು ಬಹಿರಂಗ ಚರ್ಚೆಗೆ ಸಿದ್ಧ.
 ●ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

Advertisement
Advertisement

Udayavani is now on Telegram. Click here to join our channel and stay updated with the latest news.

Next