Advertisement

ತಾರಾನುಭವ

03:45 PM Apr 27, 2018 | |

“ಒಂದು ವಯಸ್ಸು ದಾಟಿದ ಮೇಲೂ ವಿಭಿನ್ನ ಪಾತ್ರಗಳು ಹುಡುಕಿಕೊಂಡು ಬರೋದನ್ನು ಪುಣ್ಯ ಎಂದು ಭಾವಿಸುತ್ತೇನೆ …’ ಹೀಗೆ ಹೇಳಿ ನಕ್ಕರು ತಾರಾ. ಅವರ ಮಾತಲ್ಲಿ ವಿಭಿನ್ನ ಪಾತ್ರಗಳು ಹುಡುಕಿಕೊಂಡು ಬರುವ ಖುಷಿ ಇತ್ತು. ಕೇವಲ ತಾಯಿ ಪಾತ್ರಗಳಿಗೆ ಸೀಮಿತವಾಗದೇ, ಟೈಟಲ್‌ ರೋಲ್‌ಗ‌ಳು ಕೂಡಾ ಸಿಗುತ್ತಿರುವ ಬಗ್ಗೆ ಹೆಮ್ಮೆಯೂ ಇತ್ತು. ತಾರಾ ಅವರು ಚಿತ್ರರಂಗಕ್ಕೆ ಬಂದು ಮೂವತ್ತು ವರ್ಷ ದಾಟಿದೆ. ಈ ಮೂವತ್ತು ವರ್ಷದಲ್ಲಿ ಅವರು ಸಾಕಷ್ಟು ವಿಭಿನ್ನ ಪಾತ್ರಗಳನ್ನು ಮಾಡಿದ್ದಾರೆ.

Advertisement

ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನಾಯಕಿಯಿಂದ ಆರಂಭವಾದ ಅವರ ಜರ್ನಿ ತಾಯಿ ಪಾತ್ರವರೆಗೂ ಸಾಗಿ ಬಂದಿದೆ.  “ಹಿರಿಯ ನಟಿ’ ಎನಿಸಿಕೊಂಡರೆ ಬಹುತೇಕರು ಸಿನಿಮಾ, ಧಾರಾವಾಹಿಗಳಲ್ಲಿ ಕೇವಲ ತಾಯಿ, ಅತ್ತೆ ಪಾತ್ರಗಳಿಗೆ ಮಾತ್ರ ಸೀಮಿತವಾಗಬೇಕಾಗುತ್ತದೆ. ಆದರೆ, ತಾರಾ ಮಾತ್ರ ಆ ವಿಷಯದಲ್ಲಿ ಅದೃಷ್ಟವಂತೆ. ತಾಯಿ ಪಾತ್ರಗಳ ಜೊತೆಗೆ ಅವರಿಗೆ ಸಾಕಷ್ಟು ಹೊಸ ಬಗೆಯ, ವಿಭಿನ್ನ ಎಂದು ಕರೆಸಿಕೊಳ್ಳುವ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ.

ಅವರನ್ನೇ ಪ್ರಧಾನ ಪಾತ್ರವಾಗಿಟ್ಟುಕೊಂಡು ಟೈಟಲ್‌ ರೋಲ್‌ಗ‌ಳು ಕೂಡಾ ತಾರಾ ಅವರಿಗೆ ಸಿಗುತ್ತಿವೆ. ಇದೇ ಕಾರಣದಿಂದ ಅವರು, ವಿಭಿನ್ನ ಪಾತ್ರಗಳು ಸಿಗುತ್ತಿರೋದು ಪುಣ್ಯ ಎಂದಿದ್ದು. ತಮಗೆ ಸಿಗುತ್ತಿರುವ ಪಾತ್ರಗಳ ಬಗ್ಗೆ ತಾರಾ ಖುಷಿಯಿಂದ ಮಾತನಾಡುತ್ತಾರೆ. “ಕಲಾವಿದೆಯಾಗಿ ನಾನು ತುಂಬಾ ಖುಷಿಯಾಗಿದ್ದೇನೆ. ವಿಭಿನ್ನಪಾತ್ರಗಳು ಹುಡುಕಿಕೊಂಡು ಬರುತ್ತಿವೆ. ನಾಯಕಿಯಾಗಿದ್ದಾಗ ಸಾಕಷ್ಟು ವೆರೈಟಿ ಪಾತ್ರಗಳನ್ನು ಮಾಡಿದ್ದೆ. ಆದರೆ, ಈಗ ಈ ವಯಸ್ಸಲ್ಲೂ ಹೊಸ ಬಗೆಯ ಪಾತ್ರಗಳು ಸಿಗುತ್ತಿವೆ.

ಒಂದು ವಯಸ್ಸು, ಅನುಭವ ದಾಟಿದ ಮೇಲೆ ಈಗಲೂ ವಿಭಿನ್ನ ಪಾತ್ರಗಳು ಹುಡುಕಿಕೊಂಡು ಬರೋದು ಪುಣ್ಯ ಎಂದು ಭಾವಿಸುತ್ತೇನೆ. ನಾವು ಕಲಾವಿದರು ಜೋಳಿಗೆ ಇಟ್ಕೊಂಡಿರೋ ತರಹ. ಪಾತ್ರಗಳು ಬಂದು ಬೀಳುತ್ತಷ್ಟೇ, ಅದನ್ನು ಭಕ್ತಿಯಿಂದ ಸ್ವೀಕಾರ ಮಾಡಬೇಕು’ ಎಂದು ತಮಗೆ ಸಿಗುತ್ತಿರುವ ಪಾತ್ರಗಳ ಬಗ್ಗೆ ಖುಷಿಯಿಂದ ಮಾತಾನಾಡುತ್ತಾರೆ ತಾರಾ. ತಾರಾ ಅವರಿಗೆ ಹಳ್ಳಿಯ ಮುಗ್ಧ ಹೆಣ್ಣಿನ ಪಾತ್ರದ ಜೊತೆಗೆ ಸಖತ್‌ ಮಾಡರ್ನ್ ಆಗಿರುವಂತಹ ಪಾತ್ರಗಳು ಸಿಗುತ್ತಿವೆ. ಆ ಖುಷಿ ಅವರಿಗಿದೆ. ಚಿತ್ರರಂಗಕ್ಕೆ ಬರುವ ಹೊಸಬರು ಕೂಡಾ ತಾರಾ ಅವರಿಗೆ ಹೊಸ ಬಗೆಯ ನೀಡುತ್ತಿದ್ದಾರಂತೆ.

“ಹೊಸಬರ ಮೇಲೆ ನನಗೆ ಖುಷಿ ಇದೆ, ಗೌರವವಿದೆ. ಈಗ ಚಿತ್ರರಂಗಕ್ಕೆ ಬರುವ ಹೊಸಬರು ಎಲ್ಲಾ ವಿಷಯಗಳಲ್ಲೂ ತಯಾರಿ ನಡೆಸಿಕೊಂಡೇ ಬರುತ್ತಾರೆ. ನಾವೆಲ್ಲಾ ಸಿನಿಮಾಕ್ಕೆ ಬಂದ ನಂತರ ಡ್ರೈವಿಂಗ್‌, ಕುದುರೆ ಸವಾರಿ, ಈಜು … ಎಲ್ಲವನ್ನು ಕಲಿತೆವು. ಆದರೆ, ಹೊಸಬರು ಅವೆಲ್ಲದರ ತರಬೇತಿ ಪಡೆದೇ ಬರುತ್ತಿದ್ದಾರೆ. ಅವರೆಲ್ಲರೂ ಪ್ರತಿಭಾವಂತರು. ನಮಗೆಲ್ಲಾ ಸಿನಿಮಾ ಬಿಝಿನೆಸ್‌ ಬಗ್ಗೆ ಐಡಿಯಾ ಇರಲಿಲ್ಲ. ಅವರಿಗೆಲ್ಲಾ ಬಿಝಿನೆಸ್‌ ಬಗ್ಗೆಯೂ ಚೆನ್ನಾಗಿ ಗೊತ್ತಿದೆ. ಅವರೆಲ್ಲರನ್ನು ನೋಡಿದಾಗ ಖುಷಿಯಾಗುತ್ತದೆ’ ಎಂದು ಹೊಸಬರ ಬಗ್ಗೆ ಹೇಳುತ್ತಾರೆ ತಾರಾ.

Advertisement

ತಾರಾ ಅವರು ನಟಿಸಿರುವ “ಹೆಬ್ಬೆಟ್‌ ರಾಮಕ್ಕ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಈ ಪಾತ್ರದ ಬಗ್ಗೆ ತಾರಾ ಕೂಡಾ ಖುಷಿಯಾಗಿದ್ದಾರೆ. ಆರಂಭದಲ್ಲಿ ಈ ಚಿತ್ರದ ಆಫ‌ರ್‌ ಬಂದಾಗ ಅವರು ಒಪ್ಪಿರಲಿಲ್ಲವಂತೆ. ಅದಕ್ಕೆ ಕಾರಣ ತಾರಾ ಬಿಝಿ ಶೆಡ್ನೂಲ್‌. ರಾಜಕಾರಣಿಯಾಗಿ ಬಿಝಿಯಾಗಿರುವುದರಿಂದ ಒಪ್ಪಿಕೊಂಡ ಸಿನಿಮಾಕ್ಕೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಆರಂಭದಲ್ಲಿ “ಹೆಬ್ಬೆಟ್‌ ರಾಮಕ್ಕ’ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲವಂತೆ. ಆದರೆ, ನಿರ್ದೇಶಕ ನಂಜುಂಡೇಗೌಡರು, “ನೀವೇ ಈ ಪಾತ್ರವನ್ನು ಮಾಡಬೇಕು’ ಎಂದಾಗ ಡೇಟ್ಸ್‌ ಅಡೆಸ್ಟ್‌ ಮಾಡಿದರಂತೆ ತಾರಾ. 

“ಈ ಚಿತ್ರದ ಪಾತ್ರ ತುಂಬಾ ಚೆನ್ನಾಗಿದೆ. ಎಲ್ಲರಿಗೂ ತಲುಪುವಂತಹ ಪಾತ್ರ. ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಈ ತರಹದ ಪಾತ್ರವನ್ನು ನಾನು ನಿಜ ಜೀವನದಲ್ಲಿ ಸಾಕಷ್ಟು ನೋಡಿದ್ದೇನೆ. ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ಗಳ ಅನೇಕ ಸದಸ್ಯರಿಗೆ ಓದು, ಬರಹ ಇಲ್ಲ. ಸರಿಯಾಗಿ ಮತಯಾಚನೆಯೂ ಬರಲ್ಲ. ಆದರೆ, ತಮ್ಮ ಕ್ಷೇತ್ರಕ್ಕೆ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿರುತ್ತಾರೆ.

ಈಗ ಚುನಾವಣೆ ಬೇರೆ ಬಂದಿರೋದರಿಂದ ಸರಿಯಾದ ಸಮಯಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ರಾಜ್ಯದಲ್ಲಿ ಮಹಿಳಾ ಮೀಸಲಾತಿ ಎಷ್ಟರಮಟ್ಟಿಗೆ ಜಾರಿಗೆ ಬಂದಿದೆ, ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಇರುವ ಮೀಸಲಾತಿ ಸರಿಯಾಗಿ ಸದ್ಬಳಕೆಯಾಗುತ್ತಿದೆಯಾ, ಆನಕ್ಷರಸ್ಥ ಮಹಿಳೆಯರು ಚುನಾವಣೆಯಲ್ಲಿ ಗೆದ್ದು ಆ ಸ್ಥಾನವನ್ನು ಹೇಗೆ ನಿಭಾಯಿಸುತ್ತಾರೆ ಎಂಬ ವಿಷಯಗಳ ಕುರಿತಾಗಿ ಚಿತ್ರ ಸುತ್ತುತ್ತದೆ. ಹಾಗಾಗಿ, ಚಿತ್ರ ಸದ್ಯದ ಪರಿಸ್ಥಿತಿಗೆ ಹೆಚ್ಚು ಪ್ರಸ್ತುತವಾಗಿದೆ’ ಎಂಬುದು ತಾರಾ ಮಾತು. 

Advertisement

Udayavani is now on Telegram. Click here to join our channel and stay updated with the latest news.

Next