Advertisement

ನಲ್ಲಿ ನೀರಿನಲ್ಲಿ ಚರಂಡಿ ನೀರು, ಹುಳ ಕೂಡ ಬರುತ್ತೆ!

08:55 PM Oct 15, 2019 | Lakshmi GovindaRaju |

ಹುಣಸೂರು: ನಗರದ ಮೂರು ಬಡಾವಣೆಗಳಲ್ಲಿ ಕಳೆದ 15 ದಿನಗಳಿಂದ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಮನೆಗಳಿಗೆ ನಲ್ಲಿ ನೀರಿನೊಂದಿಗೆ ಚರಂಡಿ ನೀರು ಕೂಡ ಸರಬರಾಜಾಗುತ್ತಿದೆ. ಕೆಲ ಸಂದರ್ಭದಲ್ಲಿ ಹುಳಗಳು ಕೂಡ ನಲ್ಲಿಗಳಲ್ಲಿ ಉದರುತ್ತವೆ.

Advertisement

ಇದರಿಂದ ಹಲವಾರು ಮಂದಿ ಅನಾರೋಗ್ಯ ಪೀಡಿತರಾಗಿದ್ದಾರೆ. ಆದರೂ ಕೂಡ ನಗರಸಭೆ ಮಾತ್ರ ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲದಂತೆ ನಾಗರಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ನಗರದ 8ನೇ ವಾರ್ಡ್‌ನ ಬ್ರಾಹ್ಮಣರ ಬಡಾವಣೆ, ಕಾಫಿವರ್ಕ್ಸ್ ರಸ್ತೆ, 11ನೇ ವಾರ್ಡ್‌ನ ಗಣೇಶ ಗುಡಿ ಬೀದಿ ನಿವಾಸಿಗಳೇ ಕಲುಷಿತ ನೀರು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.

ಕಾವೇರಿ ನೀರು, 75 ಬೋರ್‌ವೆಲ್‌: ನಗರಸಭೆ ವತಿಯಿಂದ ಈ ಹಿಂದೆ ವಿತರಿಸುತ್ತಿದ್ದ ಲಕ್ಷ್ಮಣತೀರ್ಥ ನದಿ ನೀರು ಕುಡಿಯಲು ಯೋಗ್ಯವಿಲ್ಲ ಎಂಬ ವರದಿಯಿಂದ ಎಚ್ಚೆತ್ತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಗರವಾಸಿಗಳಿಗೆ ಶುದ್ಧ ಕುಡಿಯುವ ಒದಗಿಸಲು ಕೆ.ಆರ್‌.ನಗರದಿಂದ ಕಾವೇರಿ ನೀರು ಇದರೊಟ್ಟಿಗೆ 75ಕ್ಕೂ ಹೆಚ್ಚು ಬೋರ್‌ವೆಲ್‌ಗ‌ಳ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಂಡಿದ್ದಾರೆ.

ನಲ್ಲಿ ನೀರು ದುರ್ವಾಸನೆ: ಸರಬರಾಜಾಗುತ್ತಿರುವ ನಲ್ಲಿ ನೀರು ದುರ್ವಾಸನೆ ಬೀರುತ್ತಿರುವ ಬಗ್ಗೆ ನಗರಸಭೆ ನೀರು ಸರಬರಾಜು ಎಂಜಿನಿಯರ್‌ ಹಾಗೂ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ ಮೇರೆಗೆ ಅಲ್ಲಲ್ಲಿ ತಪಾಸಣೆ ನಡೆಸಿ, ಮುಖ್ಯ ಪೈಪ್‌ಗ್ಳನ್ನು ಸ್ವತ್ಛಗೊಳಿಸಿ ನೀರು ಹರಿಸಲಾಗಿತ್ತು. ಆದರೆ, ಇದೀಗ ದುರ್ವಾಸನೆಯೊಂದಿಗೆ ಹುಳು ಮಿಶ್ರಿತ ನೀರು ಹರಿದು ಬರುತ್ತಿದೆ.

ಈ ನೀರನ್ನು ಕುಡಿದ ಬಡಾವಣೆಯ ಮಕ್ಕಳು, ದೊಡ್ಡವರು ಸಹ ಹೊಟ್ಟೆನೋವು, ಆಮಶಂಕೆ ಮತ್ತಿತರ ಜ್ವರದಿಂದ ಬಳಲುತ್ತಿದ್ದು, ನಿತ್ಯ ಆಸ್ಪತ್ರೆಗೆ ಎಡತಾಕುವಂತಾಗಿದೆ. ಈ ಅವ್ಯವಸ್ಥೆಗೆ ಬಡಾವಣೆ ನಾಗರಿಕರು ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ. ಇನ್ನಾದರೂ ನಗ‌ರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶುದ್ದ ಕುಡಿಯುವ ನೀರು ವಿತರಣೆ ಮಾಡುವಂತೆ ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾರೆ.

Advertisement

ನಗರದ ಕೆಲವೆಡೆ ರಸ್ತೆ ಅಭಿವೃದ್ಧಿ, ದೂರವಾಣಿ ಕೇಬಲ್‌ ಅಳವಡಿಸುವವರು, ಒಳಚರಂಡಿ-ನಲ್ಲಿ ಸಂಪರ್ಕ ಪಡೆಯುವವರು ಯಾವುದೇ ಮಾಹಿತಿ ನೀಡದೆ ರಾತ್ರೋರಾತ್ರಿ ರಸ್ತೆಗಳನ್ನು ಅಗೆಯುತ್ತಿರುವುದು ಸಾಮಾನ್ಯವಾಗಿದೆ. ಈ ವೇಳೆ ಅಧಿಕಾರಿಗಳು ಸಹ ಮೌನ ಸಮ್ಮತಿ ನೀಡುವುದರಿಂದ ಇದು ಮುಂದುವರಿಯುತ್ತಲೇ ಇದೆ. ನಗರದಲ್ಲಿನ ಮೂಲಭೂತ ಸೌಕರ್ಯಗಳಾದ ರಸ್ತೆ, ಒಳ ಚರಂಡಿ, ಶುದ್ಧ ಕುಡಿಯುವ ನೀರಿಗಾಗಿ ತೆರಿಗೆ ಕಟ್ಟಿಸಿಕೊಳ್ಳುವ ನಗರಸಭೆ ಅಧಿಕಾರಿಗಳು ದೂರು ನೀಡಿದರೂ ಸ್ಪಂದಿಸುವುದಿಲ್ಲ ಎಂದು ಬ್ರಾಹ್ಮಣರ ಬಡಾವಣೆ ನಿವಾಸಿ ಮಾಧುರಾವ್‌ ಮತ್ತಿತರರು ಅವಲತ್ತುಕೊಂಡಿದ್ದಾರೆ.

ಕಲುಷಿತ ನೀರು ಪೂರೈಕೆ ಏಕೆ?: ನಗರದಲ್ಲಿ ನಲ್ಲಿ ಸಂಪರ್ಕ ಒಳರಂಡಿ ನೀರಿನ ಸಂಪರ್ಕ ಪಡೆಯುವವರು ನಗರಸಭೆಯಿಂದ ಅನುಮತಿ ಪಡೆದ ಬೇಕಾಬಿಟ್ಟಿಯಾಗಿ ಸಂಪರ್ಕ ಪಡೆದುಕೊಳ್ಳುವರು. ವೈಜ್ಞಾನಿಕವಾಗಿ ನಲ್ಲಿ ಸಂರ್ಪಕ ಪಡೆದುಕೊಳ್ಳುತ್ತಿಲ್ಲ. ಒಳಚರ‌ಂಡಿ ಪಕ್ಕದಲ್ಲೇ ನೀರಿನ ಪೈಪ್‌ಗ್ಳನ್ನು ಅಳವಡಿಸಿಕೊಳ್ಳುವುದರಿಂದ ದುರಸ್ತಿ ವೇಳೆ ಚರಂಡಿ ನೀರು ಸೇರಿಕೊಂಡು ಕಲುಷಿತ ನೀರು ಸರಬರಾಜಾಗುತ್ತಿದೆ.

ಚರಂಡಿ ಬಳಿ, ಮನೆ ಮುಂದೆ ನಲ್ಲಿಗಳನ್ನು ಅಳವಡಿಸಿಕೊಳ್ಳುವುದರಿಂದ ಈ ಅವ್ಯವಸ್ಥೆ ನಿರ್ಮಾಣವಾಗಿದೆ. ಆದರೆ ನಗರಸಭೆ ಅಧಿಕಾರಿಗಳು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಪರಿಣಾಮ ನಾಗರೀಕರು ಮಾತ್ರ ಅನಾಗರೀಕರಾಗಿ ಬದುಕು ನಡೆಸುವಂತಾಗಿದೆ.

ಬಡಾವಣೆಗಳಿಗೆ ಕಲುಷಿತ ನೀರು ಸರಬರಾಜಾಗುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಓವರ್‌ ಹೆಡ್‌ ಟ್ಯಾಂಕ್‌ಗಳನ್ನು ಪರಿಶೀಲಿಸಿ ಶುಚಿಗೊಳಿಸಲು ಹಾಗೂ ಕಲುಷಿತ ನೀರು ಸರಬರಾಜಗುತ್ತಿರುವ ಬಡಾವಣೆಯಲ್ಲಿ ತಕ್ಷಣವೇ ದುರಸ್ತಿ ಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಕ್ರಮ ಸಂಪರ್ಕ ಪಡೆಯುವವರ ಬಗ್ಗೆ ನಗರಸಭೆಗೆ ಮಾಹಿತಿ ನೀಡಬೇಕು. ನಗರದ ಅಭಿವೃದ್ಧಿಗೆ ನಿವಾಸಿಗಳೂ ಸಹ ಸಹಕಾರ ನೀಡಬೇಕು.
-ಶಿವಪ್ಪನಾಯಕ, ನಗರಸಭೆ ಪೌರಾಯುಕ್ತ

* ಸಂಪತ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next