ಮೈಸೂರು: ದಾಂಪತ್ಯ, ಪ್ರೀತಿಯ ಜತೆಗೆ ಸಾಮಾಜಿಕ ಹಾಗೂ ರಾಜಕೀಯ ವಿಷಯಗಳನ್ನು ಒಳಗೊಂಡ ಕಾವ್ಯದ ಜುಗಲ್‌ಬಂದಿ ನಡೆಸಿದ ಸಾಹಿತಿಗಳು ಸಭಿಕರಿಗೆ ಮನರಂಜನೆ ಉಣಬಡಿಸಿದರು. ನಾಡಹಬ್ಬ ದಸರಾ ಅಂಗವಾಗಿ ದಸರಾ ಕವಿಗೋಷ್ಠಿ ಉಪಸಮಿತಿ ವತಿಯಿಂದ ಆಯೋಜಿಸಿರುವ ದಸರಾ ಕವಿಗೋಷ್ಠಿ 2ನೇ ದಿನವಾದ ಸೋಮವಾರ ಆಯೋಜಿ ಸಿದ್ದ ವಿನೋದ ಕವಿಗೋಷ್ಠಿಯಲ್ಲಿ ಅನೇಕ ಹಿರಿಯ ಕವಿಗಳು ಕಾವ್ಯದ ಮೂಲಕ ಕೇಳುಗರ ಗಮನ ಸೆಳೆದರು.
ಕಾವ್ಯದ ಜುಗಲ್‌ಬಂದಿ: ಗೋಷ್ಠಿ ಆರಂಭದಲ್ಲಿ ಕಾವ್ಯವಾಚನ ಮಾಡಿದ ಕವಿ ಬಿ.ಆರ್.ಲಕ್ಷ್ಮಣ್‌ರಾವ್, ತನ್ನ ಮನೆಯಲ್ಲಿ ಕಾಮಧೇನು ಇಲ್ಲ, ಕಲ್ಪವೃಕ್ಷವಿಲ್ಲ, ರಂಬೆ, ಊರ್ವಶಿಯರಿಲ್ಲ, ಕೆಣಕಿ ಕಾಡುವ ಶತ್ರುವಿಲ್ಲ, ಅಂತರಂಗದ ಮಿತ್ರನಿಲ್ಲ, ದೆವ್ವವಿಲ್ಲ, ದೇವರಿಲ್ಲ, ಪೀಡೆ ಇಲ್ಲ, ಎಂದೆನಿಸಿಯೇ ಇಲ್ಲ.
ತನಗೆ ಹೆಂಡತಿ ಇದ್ದಾಳೆ ಎಂದು ಹೇಳಿದರೆ. ಇದಕ್ಕೆ ಪ್ರತಿಕ್ರಿಯಿಸಿದ ಡುಂಡಿರಾಜ್ ಅವರು ನಮ್ಮ ಮನೆಯಲ್ಲಿ ಮಿಕ್ಸಿ ಇಲ್ಲ, ಗ್ರೈಂಡರ್ ಇಲ್ಲ, ವಾಷಿಂಗ್‌ಮೆಷಿನ್ ಇಲ್ಲ ಎಂದು ಹೆಂಡತಿ ಗೊಣಗುವುದೇ ಇಲ್ಲ, ಏಕೆಂದರೆ ನಾನಿದ್ದೇನೆಲ್ಲಾ ಎಂದು ಹಾಸ್ಯದ ಜುಗಲ್‌ಬಂದಿ ನಡೆಸಿದರು. ತಮ್ಮ ಕಾವ್ಯವಾಚನ ಮುಂದುವರಿಸಿದ ಡುಂಡಿರಾಜ್, ವಿಘ್ನ ನಿವಾರಕ ವಿನಾಯಕನನ್ನು ನೆನಪಿಸಿಕೊಂಡು, ಗಣನಾಯಕ ನಿನಗೆ ಪಂಚಕಜಾjಯ, ಜನನಾಯಕ ನಿನಗೆ ಲಂಚಕಜಾಯ ಎಂದು ವ್ಯಂಗ್ಯವಾಡಿದರು.
ಬಳಿಕ ಜರಗನಹಳ್ಳಿ ಶಿವಶಂಕರ್ ಅವರು, ಪ್ರಸ್ತುತ ಮನೆ ಹೆಂಗಳೆಯರ ದೇವರ ಕುರಿತಾದ ಅತಿಯಾದ ನಂಬಿಕೆ ಕುರಿತಾಗಿ, ಪುಣ್ಯಕ್ಷೇತ್ರಗಳ ತೀರ್ಥಯಾತ್ರೆ ಮಾಡಿ, ಮುಡಿಕೊಡಬೇಕೆಂದು ಹರಕೆ ಹೊತ್ತಿದ್ದೆ. ಆದರೆ ದೇವರೆ ಮನೆಗೆ ಬಂದು ಮುಡಿ ತೆಗೆದುಕೊಂಡು ಹೋಗಿದ್ದಾನೆ. ಬೇಕೆಂದರೆ ನೋಡಿ ತನ್ನ ತಲೆಯನ್ನು ಎಂದು ನಗೆಯಲ್ಲಿ ತೇಲಿಸಿದರು.
ಮತ್ತೆ ನೋಟ್‌ಬ್ಯಾನ್ ಸದ್ದು: ದಸರೆ ವಿನೋದ ಕವಿಗೋಷ್ಠಿಯಲ್ಲಿ ನೋಟು ರದ್ಧತಿಯೂ ಸದ್ದು ಮಾಡಿತು. ಕಾವ್ಯವಾಚನ ಮಾಡಿದ ಡುಂಡಿರಾಜ್ ಸ್ವಲ್ಪವೂ ಸುಳಿವು ನೀಡದೇ, 500-1000 ರೂ. ನೋಟು ರದ್ದು ಮಾಡಿದರು ಮೋದಿ, ಗುಟ್ಟು ರಟ್ಟಾಗದಿರಲೂ ಕಾರಣ ಅವರ ಮನೆಯಲ್ಲಿಲ್ಲ ಮಡದಿ ಎಂದು ಹಾಸ್ಯದ ಮೂಲಕ ರಂಜಿಸಿದರು. ಒಟ್ಟು 3 ಸುತ್ತಿನ ಕಾವ್ಯ ವಾಚನ ನಡೆಯಿತು. ಭುವನೇ ಶ್ವರಿ ಹೆಗಡೆ, ಅಸಾಧುಲ್ಲಾ ಬೇಗ್, ಎಂ.ಡಿ.ಗೋಗೇರಿ,ಸುಕನ್ಯಾ ಕಳಸ ಕವನ ವಾಚನ ಮಾಡಿದರು.
ಘಟಾನುಘಟಿ ಕವಿಗಳ ನಡುವೆ ಪುಟ್ಟ ಕಲಾವಿದೆಯಾದ ತಾನು ಕವಿಗೋಷ್ಠಿ ಉದ್ಘಾಟಿಸಿದ್ದು ಸಂತಸ ತಂದಿದೆ. ಮೈಸೂರು ತನಗೆ ಬಹಳ ಇಷ್ಟ. ಪವಿತ್ರ ಪ್ರೀತಿಯನ್ನು ಇಲ್ಲಿನ ಜನ ತೋರಿಸುತ್ತಾರೆ. ಇಲ್ಲಿನ ಜನರಿಂದ ಸಂಸ್ಕೃತಿಯನ್ನು ಕಲಿತಿದ್ದೇನೆ.
-ಮಯೂರಿ, ನಟಿ