ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ-2ಎ ಮೀಸಲಾತಿ ಮತ್ತು ಲಿಂಗಾಯತ ಉಪ ಸಮಾಜಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಒತ್ತಾಯಿಸಿ ಡಿ.10 ರಂದು ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹೋರಾಟದಲ್ಲಿ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್, ವಿಜಯಾನಂದ ಕಾಶಪ್ಪನವರ್, ಅರವಿಂದ್ ಬೆಲ್ಲದ್, ಯತ್ನಾಳ್ ಇತರರು ಪಾಲ್ಗೊಳ್ಳುವರು ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಮೀಸಲಾತಿ ಹೋರಾಟ ಪ್ರಾರಂಭಿಸಿ, ಎಲ್ಲ ಹಂತದಲ್ಲೂ ಪಾಲ್ಗೊಂಡವರು. ಹಾಗಾಗಿ ಡಿ.10ರ ಬೆಳಗಾವಿಯ ಹೋರಾಟದಲ್ಲೂ ಪಾಲ್ಗೊಳ್ಳಲಿದ್ದಾರೆ ಎಂದರು.
ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿದ್ದಂತಹವರು ಬಿಜೆಪಿಯ ವಿರುದ್ಧ ಮಾತನಾಡುತ್ತಿದ್ದರು. ಈಗ ಅವರು ಸರ್ಕಾರಕ್ಕೆ ಮುಜುಗರ ಆಗಬಾರದು ಎಂದು ಹಿಂದಿನಂತೆ ಮಾತನಾಡುತ್ತಿಲ್ಲ. ಆದರೆ, ಹೋರಾಟ ನಿಲ್ಲಿಸಿಲ್ಲ. ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಿದ್ದಾರೆ. ಕಾಶಪ್ಪನವರ್ ಡಿ. 1 ರಂದು ಬೆಂಗಳೂರಲ್ಲಿ ಸಭೆ ನಡೆಸುವುದಾಗಿ ಹೇಳಿದ್ದಾರೆ. ಸರ್ಕಾರದ ಪರ ಏನೇ ಮಾಡಿದರೂ, ಮಾತನಾಡಿದರೂ ಎಲ್ಲರೂ ಡಿ.10ರ ಹೋರಾಟದಲ್ಲಿ ಭಾಗವಹಿಸುವರು ಎಂಬ ವಿಶ್ವಾಸ ತಮಗಿದೆ ಎಂದರು.
ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಡಿ.10ರ ಬೆಳಗಾವಿ ಹೋರಾಟದಲ್ಲಿ ತಾವು ಭಾಗವಹಿಸು ವುದಿಲ್ಲ. ಡಿ. 1 ರಂದು ಬೆಂಗಳೂರಲ್ಲಿ ಸಭೆ ನಡೆಸುವುದಾಗಿ ವಿಜಯಾನಂದ ಕಾಶಪ್ಪನವರ್ ಹೇಳಿದ್ದಾರೆ. ಅವರು ಎಲ್ಲಿಯೇ ಸಭೆ ಮಾಡಲಿ. ಬೆಳಗಾವಿ ಹೋರಾಟಕ್ಕೆ ಬನ್ನಿ ಎಂದು ಆಹ್ವಾನಿಸಿದರು.
ಮೀಸಲಾತಿ ಹೋರಾಟದ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ಮುಗಿ ಬೀಳುತ್ತಿದ್ದರು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಸ್ವಲ್ಪವೂ ಸಕರಾತ್ಮಕವಾದ ಹೆಜ್ಜೆ ಇಡುತ್ತಿಲ್ಲ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಲು ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ, ಮೀನಾಮೇಷ, ದ್ವೇಷ, ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ