ಬಿಸಿ ಚಹಾ ಕುಡಿಯಲು ಎಲ್ಲರಿಗೂ ಪ್ರಿಯವಾದುದೇ. ಹಲವಾರು ವೆರೈಟಿಗಳ ಟೀಗಳು ಇಂದು ನಮ್ಮ ಮುಂದೆ ಇವೆ. ಮಸಾಲ ಟೀ, ಗ್ರೀನ್ ಟೀ, ಬ್ಲ್ಯಾಕ್ ಟೀ, ಚಾಕ್ಲೈಟ್ ಇತ್ಯಾದಿ ಫ್ಲೈವರ್ಡ್ ಟೀ, ಲೆಮನ್ ಟೀ, ಇತ್ಯಾದಿಗಳು. ಈಗಿರುವ ಚಹಾಗಳಿಗಿಂತಲೂ ಅತ್ಯಂತ ರುಚಿಕವಾದ ಚಹಾವೊಂದನ್ನು ಸವಿಯಬಹುದಾಗಿದೆ.. ಅದುವೇ ತಂದೂರಿ ಚಹಾ. ತಂದೂರಿ ಎಂದಾಗ ಮಾಂಸದ ಆಹಾರಗಳು ನೆನಪಾಗುತ್ತದೆ. ಇವುಗಳೆರಡರಲ್ಲಿ ಒಂದು ಸಾಮ್ಯತೆ ಇದೆ ಅದೇ ಖಡಕ್.
ಮಾಮೂಲು ಚಹಾಗಿಂತ ಸ್ವಾದಿಷ್ಟ
ಕರ ರುಚಿ ಈ ಚಹಾದ್ದು. ಅದರ ಜತೆಗೆ ಮಾಡುವ ವಿಧಾನವೂ ಭಿನ್ನ. ಪುಟ್ಟ ಪುಟ್ಟ ಮಣ್ಣಿನ ಕುಡಿಕೆಗಳನ್ನು ತಂದೂರ್ ಒಲೆಯಲ್ಲಿ ಚೆನ್ನಾಗಿ ಕಾಯಿಸಿ ಪಾತ್ರೆಯೊಂದರಲ್ಲಿ ಇಟ್ಟು ಅರ್ಧ ಕುದಿಸಿದ ಚಹಾವನ್ನು ಬಿಸಿ ಬಿಸಿ ಕುಡಿಕೆಗೆ ಸುರಿಯಲಾಗುತ್ತದೆ. ಆಗ ಈ ಚಹಾ ಚೆನ್ನಾಗಿ ಕುದಿದು ನೊರೆ ನೊರೆಯಾಗಿ ಉಕ್ಕಿ ಪಾತ್ರೆಗೆ ಚೆಲ್ಲು ತ್ತದೆ. ಆಮೇಲೆ ಈ ಚಹಾವನ್ನು ಸ್ವಚ್ಛವಾಗಿರುವ ಕುಡಿಕೆಗೆ ಹಾಕಿ ಕುಡಿಯಲು ನೀಡಲಾಗುತ್ತದೆ. ತಂದೂರ್ ಒಲೆಯಲ್ಲಿ ಕುಡಿಕೆ ಕಾದ ಕಾರಣ ಈ ಚಹಾಕ್ಕೆ ಒಂದು ರೀತಿಯ ಮಣ್ಣಿನ ಪರಿಮಳ ಸೇರುತ್ತದೆ. ಇದು ವಿಶಿಷ್ಟ ಪರಿಮಳ ರುಚಿಯನ್ನು ಹೆಚ್ಚಿಸುತ್ತದೆ.
ತಂದೂರಿ ಚಹಾವನ್ನು ಸವಿಯುವ ಸಂಭ್ರಮದ ಜತೆಗೆ ಅದನ್ನು ತಯಾರಿಸುವ ವಿಧಾನವನ್ನೂ ನೋಡಬೇಕು. ಅದು ಒಂಥರ ಖುಷಿಯನ್ನು ಕಟ್ಟಿಕೊಡುತ್ತದೆ. ಹೆಚ್ಚಾಗಿ ಪುಣೆ, ಇಂದೋರ್, ಹೈದರಾಬಾದ್ ಮುಂತಾದ ಕಡೆ ಈಗಾಗಲೇ ಜನಪ್ರಿಯವಾಗಿರುವ ತಂದೂರಿ ಟೀ ಈಗ ಉಡುಪಿ, ಮಣಿಪಾಲದ ಆಸುಪಾಸಿನಲ್ಲೂ ಗಮಗಮಿಸುತ್ತದೆ. ಚಳಿಗಾಲದಲ್ಲಿ ಮೈ ಕೊರೆಯುವ ಚಳಿಗೆ ಬಿಸಿ ಬಿಸಿ ತಂದೂರಿ ಚಹಾವನ್ನು ಹೀರುವ ಸಂಭ್ರಮವೇ ಬೇರೆ. ಚಹಾಗೆ ಸಕ್ಕರೆ, ಚಹಾ ಎಲೆ, ಹಾಲಿನೊಂದಿಗೆ ಲೆಮನ್ ಗ್ರಾಸ್ ಮತ್ತು ಪುದೀನ ಎಲೆ ಹಾಕುವುದು ಕೆಲವಡೆ ಇದೆ. ಇದು ವಿಶೇಷ. ಅಂದಹಾಗೆ ಉಳಿತ ಚಹಾಗಿಂತ ತುಸು ತುಟ್ಟಿಯಾಗಿದ್ದರೂ, ರುಚಿಸುವುದಕ್ಕೆ ದುಬಾರಿಯಾಗಿಲ್ಲ. ನಿಮ್ಮ ಆಸುಪಾಸಿನಲ್ಲಿ ತಂದೂರಿ ಚಹಾ ಸವಿಯುವ ಅವಕಾಶ ಲಭಿಸಿದರೆ ತಪ್ಪಿಸಿಕೊಳ್ಳಬೇಡಿ.