Advertisement
ಚೆನ್ನೈನ ವಲ್ಲುವರ್‌ಕೋಟ್ಟಮ್‌ನಲ್ಲಿ ತಮಿಳು ಚಿತ್ರರಂಗ ಮತ್ತು ಇತರ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸುವುದಕ್ಕೆ ಮುನ್ನ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ‘ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಬೇಕು ಎಂದು ಏಕಕಂಠದಿಂದ ತಮಿಳುನಾಡು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ. ಸಾಮಾನ್ಯ ಜನರು ನೀರಿಗಾಗಿ ಮೊರೆ ಇಡುತ್ತಿರುವಾಗ ಐಪಿಎಲ್ ಕ್ರಿಕೆಟ್ ಎಂದು ಸಂಭ್ರಮಿಸುವುದು ಸರಿಯಲ್ಲ. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಕಪ್ಪು ಟಿ ಶರ್ಟ್ ಧರಿಸಿ ಆಡಬೇಕು’ ಎಂದಿದ್ದಾರೆ.
ಕಾವೇರಿ ಮಂಡಳಿ ಪರವಾಗಿ ಹೋರಾಟ ಮಾಡಿದರೆ ಕರ್ನಾಟಕದಲ್ಲಿ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್‌ರ ಸಿನಿಮಾಗಳಿಗೆ ಲಭಿಸುವ ಆದಾಯಕ್ಕೆ ಖೋತಾವಾದೀತೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಸರಿಯಾದ ಕಾರಣಕ್ಕೇ ಹೋರಾಟ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ. ಬಳಿಕ ಅವರು ಚಿತ್ರರಂಗ ಆಯೋಜಿಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಅದರಲ್ಲಿ ಮಕ್ಕಳ್ ನೀಧಿ ಮಯ್ಯಂ ಮುಖ್ಯಸ್ಥ ಕಮಲ್ ಹಾಸನ್ ಸೇರಿದಂತೆ ತಮಿಳು ನಟ-ನಟಿಯರು ಭಾಗವಹಿಸಿದ್ದರು. ಇಲ್ಲಿ ಮಾತನಾಡಿದ ರಜನಿ, ‘ಕಾವೇರಿ ನಿರ್ವಹಣಾ ಮಂಡಳಿ ತಮಿಳುನಾಡಿನ ಪ್ರತಿಯೊಬ್ಬನ ಆಶಯ. ಹೀಗಾಗಿ ಕೇಂದ್ರ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯದ ಪ್ರತಿಯೊಬ್ಬನ ಆಕ್ರೋಶವನ್ನು ಕೇಂದ್ರ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಎಲ್ಲರದ್ದೂ ಪ್ರತಿಭಟನೆ: ತಮಿಳುನಾಡಿನ ರೈತರ ಹಿತರಕ್ಷಣೆಗಾಗಿ ಪ್ರತಿಯೊಬ್ಬರೂ ಹೋರಾಟ ನಡೆಸುತ್ತಿದ್ದಾರೆ. ನಾವು ಯಾರೂ ಶ್ರೀಮಂತ ರೈತರ ಹಿತರಕ್ಷಣೆಗಾಗಿ ಹೋರಾಡುತ್ತಿಲ್ಲ. ಕೃಷಿ ಉತ್ಪನ್ನಗಳನ್ನು ಬೆಳೆದು ಮಾರಾಟ ಮಾಡಿ ಅದರಿಂದ ಜೀವನ ಕಂಡುಕೊಳ್ಳುವವರ ಪರವಾಗಿ ಈ ಹೋರಾಟ ನಡೆಸಲಾಗುತ್ತಿದೆ ಎಂದು ರಜನಿ ಪ್ರತಿಪಾದಿಸಿದ್ದಾರೆ. ಕರ್ನಾಟಕದಲ್ಲಿರುವ ರಾಜಕಾರಣಿಗಳೂ ರೈತರ ಪರವಾಗಿ ಮಾತನಾಡುತ್ತಿಲ್ಲ. ಅದು ಅಲ್ಲಿನ ರೈತರಿಗೂ ತಿಳಿದಿದೆ. ಆ ವಿಚಾರವೇ ನಮ್ಮ ಪ್ರತಿಭಟನೆಗೆ ಶಕ್ತಿ ತುಂಬಲಿದೆ ಎಂದರು.
Related Articles
ರಜನಿಕಾಂತ್ ಅನುಸರಿಸಲು ಉದ್ದೇಶಿಸಿದ ‘ಆಧ್ಯಾತ್ಮಿಕ ರಾಜಕೀಯಕ್ಕೆ’ (ಸ್ಪಿರಿಚ್ಯುವಲ್ ಪಾಲಿಟಿಕ್ಸ್) ಕಮಲ್ ಹಾಸನ್ ಆಕ್ಷೇಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ತಲೈವಾ, ಅವರು ನನ್ನ ವೈರಿಯಲ್ಲ. ಬಡತನ, ಭ್ರಷ್ಟಾಚಾರ, ನಿರುದ್ಯೋಗ, ಬಡವರ ಮತ್ತು ರೈತರ ಕಣ್ಣೀರು ನನ್ನ ವೈರಿಗಳು ಎಂದಿದ್ದಾರೆ.
Advertisement
ದಿಲ್ಲಿಯಲ್ಲಿ ಪ್ರತಿಭಟನೆಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗಾಗಿ ತಮಿಳುನಾಡಿನಿಂದ ನವದೆಹಲಿಗೆ ಬಂದಿದ್ದ ಯುವಕರ ತಂಡ ರಾಜೀವ್ ಚೌಕ್ ಮೆಟ್ರೋ ಸ್ಟೇಷನ್ ಬಳಿ ಪ್ರತಿಭಟನೆ ನಡೆಸಿತು. ಕರ್ನಾಟಕದ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ಮಂಡಳಿ ರಚನೆ ವಿಳಂಬ ಮಾಡಲಾಗುತ್ತಿದೆ ಎಂದು ಕೇಂದ್ರ ಸರಕಾರದ ನಿಲುವನ್ನು ಆಕ್ಷೇಪಿಸಿತು. ಸೋಮವಾರ ಅವರು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ. ಸೂರಪ್ಪ ನೇಮಕಕ್ಕೆ ಆಕ್ಷೇಪ
ಅಣ್ಣಾ ವಿಶ್ವವಿದ್ಯಾನಿಲಯಕ್ಕೆ ಕನ್ನಡಿಗ ಡಾ.ಎಂ.ಕೆ.ಸೂರಪ್ಪ ಅವರನ್ನು ಕುಲಪತಿಯಾಗಿ ನೇಮಿಸಿದ್ದಕ್ಕೂ ರಜನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಸ್ವೀಕಾರಾರ್ಹವಲ್ಲ. ಇಂಥ ಸಂದರ್ಭಗಳಲ್ಲಿ ಕರ್ನಾಟಕ ಮೂಲದ ವ್ಯಕ್ತಿಯನ್ನು ಕುಲಪತಿಯನ್ನಾಗಿ ನೇಮಿಸಿರುವುದು ಸರಿಯಲ್ಲ. ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಸಲ್ಲ ಎಂದಿದ್ದಾರೆ.