Advertisement

‘ಪಂಥಗಳಲ್ಲಿ ನಂಬಿಕೆಯಿಲ್ಲ, ನಾಡಿನ ಸಮಗ್ರತೆ ನನ್ನ ನಿಲುವು’

10:25 AM Sep 19, 2018 | |

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಸೆ. 19 ಹಾಗೂ 20ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸರ್ವಾಧ್ಯಕ್ಷರಾಗಿ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ, 35 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಆಯ್ಕೆಯಾಗಿದ್ದಾರೆ. ಅವರ ಕಿರು ಸಂದರ್ಶನ ಇಲ್ಲಿದೆ.

Advertisement

. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರಿ. ಹೇಗನಿಸುತ್ತಿದೆ? ಕನ್ನಡ ಮತ್ತು ನಿಮ್ಮ ನಂಟು ಎಲ್ಲಿಂದ ಪ್ರಾರಂಭವಾಯಿತು?
ಇದು ನನ್ನ 35 ವರ್ಷಗಳ ಸಾಹಿತ್ಯ ಕ್ಷೇತ್ರದ ದುಡಿಮೆಗೆ ದೊರೆತ ಫ‌ಲ ಅಂದುಕೊಳ್ಳುತ್ತೇನೆ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಅಲಂಕರಿಸುವ ಗೌರವದ ಅವಕಾಶ ಸಿಕ್ಕಿದ್ದು ಖುಷಿಯ ವಿಚಾರ. ಈ ಹಿಂದೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದರು. ನಾನೂ ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಸಹಜವಾಗಿಯೇ ನನಗೆ ಕನ್ನಡದ ಮೇಲೆ ಆಸಕ್ತಿ ಬೆಳೆಯಿತು. ಬಾಲ್ಯದಿಂದಲೇ ಕನ್ನಡದ ನಂಟು ನನಗಿತ್ತು.

· ಪುತ್ತೂರಿನಲ್ಲಿ ಕನ್ನಡಪರವಾದ ಒಲವು ಹೇಗಿದೆ? ಕನ್ನಡದ ಉಳಿವಿಗಾಗಿ ಯಾವ ರೀತಿಯ ಕ್ರಮ ಕೈಗೊಳ್ಳಬಹುದು?
ಪುತ್ತೂರಿನಲ್ಲಿ ಕನ್ನಡಪರವಾದ ಒಲವು ಕಮ್ಮಿ ಇದೆ. ಅದಕ್ಕಾಗಿ ಬಾಲ್ಯದಿಂದಲೇ ಶಿಕ್ಷಣ ವ್ಯವಸ್ಥೆ ಸರಿಯಾಗಬೇಕು. ಸರಕಾರದ ಮತ್ತು ಸಮಾಜದ ದೃಷ್ಟಿಕೋನ ಬದಲಾಗಬೇಕು. ಕನ್ನಡದ ಪ್ರೀತಿ ಕಮ್ಮಿಯಾಗಿದೆ ಎಂದಾಗಲೆಲ್ಲ ನಾವು ಆಂಗ್ಲ ಮಾಧ್ಯಮದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತೇವೆ. ಆದರೆ, ಕನ್ನಡದ ಅವನತಿಗೆ ಅದೊಂದೇ ಕಾರಣವಲ್ಲ. ಸರಕಾರ ಮೂಲಸೌಕರ್ಯ ನೀಡಬೇಕು. ಧನಾತ್ಮಕ ಅಂಶಗಳನ್ನು ಬೆಳೆಸುವಂತಹ ಕಾರ್ಯಕ್ರಮ ನಡೆಸಬೇಕು. ಶಿಕ್ಷಕರು ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿರುವಂತೆ ಮಾಡಬೇಕು. ಆಗ ಹೆತ್ತವರು ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸುತ್ತಾರೆ. ಕನ್ನಡದ ಕಾಳಜಿ ತಾನಾಗಿಯೇ ಬೆಳೆಯುತ್ತದೆ.

· ಕನ್ನಡ ಪರವಾದ ಕಾಳಜಿ ಮೂಡಲು ಯಾವ ರೀತಿಯ ಶಿಕ್ಷಣದ ಅಗತ್ಯ ಇದೆ?
ಮಕ್ಕಳಿಗಾಗಿ ಸರ್ಕಾರ ಅಥವಾ ಪ್ರಾಧಿಕಾರಗಳು ಪುಸ್ತಕ ಪ್ರಕಟಿಸುತ್ತವೆ. ಅವೆಲ್ಲ ಮೂಲೆಗುಂಪಾಗುತ್ತಿವೆ, ವಿದ್ಯಾರ್ಥಿಗಳ ಕೈಸೇರುತ್ತಿಲ್ಲ. ತಾಲೂಕು ಮಟ್ಟದಲ್ಲಿ ಪುಸ್ತಕಗಳು ದೊರೆಯುವಂತೆ ಮಾಡಿದಾಗ ಓದಿನ ಮೂಲಕ ಕನ್ನಡದ ವಿಚಾರಗಳು ತಿಳಿಯುತ್ತವೆ.

· ತುಳು ಭಾಷೆಯಿಂದಾಗಿ ಕನ್ನಡ ಬಡವಾಗುತ್ತಿದೆಯೇ?
ತುಳುವಿನಿಂದಾಗಿ ಕನ್ನಡ ಬಡವಾಗಲು ಸಾಧ್ಯವಿಲ್ಲ. ಅವೆರಡೂ ಒಂದೇ ತಾಯಿಯ ಮಕ್ಕಳು. ಎರಡೂ ಹೊಂದಿಕೊಂಡು ಸಾಗುತ್ತವೆ.

Advertisement

· ನಿಮ್ಮ ನೆಚ್ಚಿನ ಕನ್ನಡ ಲೇಖಕರು ಯಾರು? ಪ್ರಸ್ತುತ ಸಮಾಜಕ್ಕೆ ಅವರ ಯಾವ ವಿಚಾರ ಅಗತ್ಯವೆನಿಸುತ್ತದೆ?
ಕನ್ನಡದ ಹಿರಿಯ ಕವಿಗಳಾದ ಕುವೆಂಪು, ಜಿ.ಎಸ್‌. ಶಿವರುದ್ರಪ್ಪ, ಶ್ರೀಕಂಠಯ್ಯ ಮುಂತಾದವರು ನನ್ನ ನೆಚ್ಚಿನ ಲೇಖಕರು. ಏಕೆಂದರೆ, ಅವರ ಕವಿತೆಗಳು ಇಡೀ ಕನ್ನಡ ನಾಡನ್ನು ಪ್ರತಿನಿಧಿಸುತ್ತವೆ. ಆದರೆ ಇಂದಿನ ಕೆಲವೊಂದು ಲೇಖಕರು ಎಡಪಂಥೀಯ, ಬಲ ಪಂಥೀಯ ಅಥವಾ ಯಾವುದೋ ಜಾತಿ, ಧರ್ಮದ ಪರವಾಗಿ ಬರೆಯುತ್ತಾರೆ. ಇದು ಸಮಂಜಸವಲ್ಲ.

· ಅಧ್ಯಕ್ಷೀಯ ಭಾಷಣದಲ್ಲಿ ಯಾವ ಅಂಶಕ್ಕೆ ಆದ್ಯತೆ ನೀಡುತ್ತೀರಿ?
ಪುತ್ತೂರಿನ ಲಲಿತಕಲೆಯಲ್ಲಿ ಆಗಿರುವ ಬೆಳವಣಿಗೆಯ ಕುರಿತು ಒಂದು ಇಣುಕುನೋಟ ಬೀರುವ ಪ್ರಯತ್ನ. ಜತೆಗೆ ಕನ್ನಡದ ಬೆಳವಣಿಗೆಗೆ ವೈಜ್ಞಾನಿಕ ವಿಚಾರಗಳ ಬಳಕೆ ಹೇಗೆ? ಕನ್ನಡ ಭಾಷೆ ಉಳಿಸಲು ಯಾವ ರೀತಿಯ ಉತ್ತೇಜನ ದೊರೆಯಬೇಕು ಎಂಬ ವಿಚಾರಗಳನ್ನು ನನ್ನ ಭಾಷಣ ಒಳಗೊಳ್ಳಲಿದೆ.

. ನಿಮ್ಮ ಕಲ್ಪನೆಯ ಸಾಹಿತ್ಯ ಸಮ್ಮೇಳನ ಹೇಗಿರಬೇಕು? ಇತ್ತೀಚಿನ ಯಾವ ಸಮ್ಮೇಳನ ಖುಷಿ ಕೊಟ್ಟಿದೆ?
ಹಿರಿಯರಿಗೆ ಹೇಗೆ ಅವಕಾಶಗಳು ದೊರೆಯುತ್ತಿವೆಯೋ ಯುವಕವಿಗಳಿಗೆ, ಮೊದಲ ಬಾರಿಗೆ ಕವಿತೆ ಬರೆಯುವವರಿಗೆ ಅದೇ ರೀತಿಯ ಅವಕಾಶ ಸಿಗಬೇಕು. ಆಗ ಕನ್ನಡ ಸಾಹಿತ್ಯ ನಿಂತ ನೀರಾಗದೆ, ಹರಿಯುವ ನದಿಯಂತಾಗುತ್ತದೆ. ಮೂಡಬಿದಿರೆಯಲ್ಲಿ ಜರಗಿದ ಸಾಹಿತ್ಯ ಸಮ್ಮೇಳನ ಬಹಳಷ್ಟು ಖುಷಿ ಕೊಟ್ಟಿದೆ. ಎಲ್ಲ ಸಮ್ಮೇಳನಗಳು ಅವುಗಳ ಚೌಕಟ್ಟಿನೊಳಗೆ ಅಚ್ಚುಕಟ್ಟಾಗಿ ನಡೆಯುತ್ತಿರುವುದು ಸಮಾಧಾನಕರ.

Advertisement

Udayavani is now on Telegram. Click here to join our channel and stay updated with the latest news.

Next