ಮುಂಬೈ: ಟೀಂ ಇಂಡಿಯಾ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಟಿ20 ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ತೋರಿ ತಂಡದಲ್ಲಿ ಖಾಯಂ ಸ್ಥಾನ ಸಂಪಾದಿಸಿದ್ದಾರೆ. ಆದರೆ ಏಕದಿನ ಮಾದರಿಯಲ್ಲಿ ನಿರೀಕ್ಷಿತ ಆಟವಾಡದ ಸೂರ್ಯ, ಹಲವು ಅವಕಾಶ ನೀಡಿದರೂ ಪದೇ ಪದೇ ವೈಫಲ್ಯ ಅನುಭವಿಸುತ್ತಿದ್ದಾರೆ.
ಸ್ವತಃ ಸೂರ್ಯಕುಮಾರ್ ಯಾದವ್ ಅವರೇ ತನಗೆ ಏಕದಿನ ಕ್ರಿಕೆಟ್ ಅತ್ಯಂತ ಸವಾಲಿನ ಸ್ವರೂಪವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಅಲ್ಲದೆ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಂದ ಇದರ ಬಗ್ಗೆ ಕಲಿಯುತ್ತಲೇ ಇದ್ದಾರೆ ಎಂದಿದ್ದಾರೆ.
“ಯಾವುದೇ ಪಾತ್ರವಾಗಿದ್ದರೂ ತಂಡವು ನನಗೆ ನೀಡಿದ ಜವಾಬ್ದಾರಿಯನ್ನು ಪೂರೈಸಲು ನಾನು ಪ್ರಯತ್ನಿಸುತ್ತೇನೆ. ಏಕದಿನ ಮಾದರಿ ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದೇನೆ. ನಾನು ಟಿ20 ಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ. ಇವೆರಡೂ ವೈಟ್-ಬಾಲ್ ಸ್ವರೂಪಗಳು. ಆದರೆ ನಾನು ಏಕದಿನದ ಕೋಡ್ ಕ್ರ್ಯಾಕ್ ಸಾಧ್ಯವಾಗುತ್ತಿಲ್ಲ ಯಾಕೆಂದು ಜನರು ಆಶ್ಚರ್ಯ ಪಡುತ್ತಿದ್ದಾರೆ” ಎಂದು ಸೂರ್ಯಕುಮಾರ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.
ಇದನ್ನೂ ಓದಿ:King Nagarjuna 99ನೇ ಸಿನಿಮಾಕ್ಕೆ ಟೈಟಲ್ ಫಿಕ್ಸ್ “ನಾ ಸಾಮಿ ರಂಗ” ಎಂದು ಅಬ್ಬರಿಸಿದ ನಟ
ನನ್ನ ಅಭ್ಯಾಸ ಮುಂದುವರಿದಿದೆ. ಇದು ಅತ್ಯಂತ ಸವಾಲಿನ ಮಾದರಿ. ಇಲ್ಲಿ ನೀವು ಎಲ್ಲಾ ಮಾದರಿಯ ಮಿಶ್ರಣದಂತೆ ಆಡಬೇಕು. ಮೊದಲು ಸಮಯ ತೆಗೆದುಕೊಳ್ಳಬೇಕು, ನಂತರ ಸ್ಟ್ರೈಕ್ ರೊಟೇಶನ್ ಮಾಡಬೇಕು, ಕೊನೆಯಲ್ಲಿ ಟಿ20ಯಂತೆ ದೊಡ್ಡ ಹೊಡೆತಗಳಿಗೆ ಮುಂದಾಗಬೇಕು. ಇದರ ಬಗ್ಗೆ ದ್ರಾವಿಡ್, ರೋಹಿತ್ ಮತ್ತು ವಿರಾಟ್ ಜತೆ ಚರ್ಚೆ ನಡೆಸುತ್ತಿದ್ದೇನೆ” ಎಂದರು.
26 ಏಕದಿನ ಪಂದ್ಯಗಳಲ್ಲಿ 24 ಇನ್ನಿಂಗ್ಸ್ ಗಳನ್ನು ಆಡಿರುವ ಸೂರ್ಯಕುಮಾರ್ ಯಾದವ್ ಕೇವಲ 511 ರನ್ ಕಲೆಹಾಕಿದ್ದಾರೆ. 24.33ರ ಸರಾಸರಿಯಲ್ಲಿ ರನ್ ಪೇರಿಸಿರುವ ಸ್ಕೈ ಕೇವಲ ಎರಡು ಅರ್ಧ ಶತಕ ಗಳಿಸಿದ್ದಾರೆ.