ತಾಳಿಕೋಟೆ: ತುಂಬಗಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ತೊಂದರೆಯಾಗುತ್ತಿದ್ದರೂ 6 ತಿಂಗಳಿಂದ ಯಾವೋಬ್ಬ ಅಧಿಕಾರಿ ಸ್ಪಂದಿಸಿಲ್ಲವೆಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗ್ರಾಪಂ ಕಚೇರಿ ಎದುರು ಧರಣಿ ನಡೆಸಿದರು.
ಪ್ರತಿಭಟನಾ ನೇತೃತ್ವ ವಹಿಸಿದ್ದ ಕರವೇ ತಾಲೂಕಾಧ್ಯಕ್ಷ ನಿಸಾರ್ ಬೇಪಾರಿ ಮಾತನಾಡಿ, ತುಂಬಗಿ ಗ್ರಾಮದಲ್ಲಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೂರಿರುವ ಕುರಿತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ, ತಾಪಂ ಇಒ, ಜಿಪಂ ಸಿಇಒವರೆಗೆ ಮನವಿ ಸಲ್ಲಿಸುತ್ತ ಬಂದಿದ್ದೇವೆ. ಆದರೆ ಇಲ್ಲಿವರೆಗೂ ಯಾವೋಬ್ಬ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಕಾಟಾಚಾರಕ್ಕೆ 6 ತಿಂಗಳ ಹಿಂದೆ ತಾಪಂ ಇಒ ಅವರು ಭೇಟಿ ನೀಡಿ ಪರಿಶೀಲನೆ ಮಾಡಿ ಹೋದವರು ಮರಳಿ ಇತ್ತ ಕಡೆ ನೋಡಿಲ್ಲ.
ಗ್ರಾಮದಲ್ಲಿರುವ ಸುಮಾರು 12 ಕೊಳವೆ ಬಾವಿಗಳು ಹಾಗೂ ಸೇದು ಬಾವಿಗಳು ಬತ್ತಿ ಹೋಗಿವೆ. ಇದರಿಂದ ಗ್ರಾಮಸ್ಥರರು ಹನಿ ನೀರಿಗೂ ಪರಿತಪಿಸುವಂತಾಗಿದೆ. ಕೂಡಲೇ ಕುಡಿಯುವ ನೀರು ಒದಗಿಸುವಲ್ಲಿ ವಿಫಲರಾದ ಗ್ರಾಪಂ ಅಭಿವೃದ್ಧಿ ಅಧಿಕಾರಿ, ತಾಪಂ ಇಒ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸಿದರು.
ಧರಣಿ ನಿರತ ಸ್ಥಳಕ್ಕೆ ತಾಪಂ ಪ್ರಭಾರಿ ಇಒ ದೇಸಾಯಿ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಲು ಹೋದಾಗ ಪ್ರತಿಭಟನಾನಿರತ ಕರವೇ ಕಾರ್ಯಕರ್ತರಾದ ಜೈಭೀಮ ಮುತ್ತಗಿ, ಅನಿಲ ಗೊಟಗುಣಕಿ ಅವರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ತಾಪಂ ಇಒ ದೇಸಾಯಿ ಮಾತನಾಡಿ, ಪಿಡಿಒ ಮಹೇಶ ರಾಠೊಡ ನಿರ್ಲಕ್ಷ್ಯ ಕುರಿತು ಜಿಪಂ ಸಿಇಒಗೆ ವರ ದಿ ಸಲ್ಲಿಸಿ ಕ್ರಮಕ್ಕೆ ಶಿಫಾರಸು ಮಾಡುತ್ತೇವೆ. ಕರವೇ ಸಂಘಟಕರು ಕೈಗೊಂಡ ಧರಣಿ ಸತ್ಯಾಗ್ರಹ ಹಿಂಪಡೆಯಬೇಕೆಂದು ಧರಣಿ ನಿರತರಿಗೆ ಮನವಿ ಮಾಡಿದರು.
ಅನಿಲ ಗೊಟಗುಣಕಿ, ಬಸವರಾ ಅಸ್ಕಿ, ಮುತ್ತು ಧೋಳೇಕರ, ಎಚ್.
ಕೆ. ರಾಜಶೇಖರ, ಪ್ರಭು ಅಣ್ಣಿಗೇರಿ, ಅಬುಬಕರ ಲಾಹೋರಿ, ಗುರುಪ್ರಸಾದ ಬಿ.ಜಿ., ದ್ಯಾವಪ್ಪ ದೊಡಮನಿ, ಸಾಯಬಣ್ಣ ಗುಂಡಕನಾಳ, ಮುದಕಪ್ಪ ಹಡಪದ, ಮಶಾಕ ಜಮಾದಾರ, ಹನುಮಂತ್ರಾಯ ರೆಬಿನಾಳ, ರಾಜು ತಂಗಡಗಿ, ಬಸವರಾಜ ಬಡಿಗೇರ, ನಾಗು ತೋಟದ, ಕೋಟ್ರೇಶ ಹೊಸಮನಿ, ಚಂದ್ರಶೇಖರ ದೊಡ್ಡಮನಿ ಇದ್ದರು.