ವಾಷಿಂಗ್ಟನ್: ಪ್ರಸಿದ್ದ ಟೈಮ್ಸ್ ಪತ್ರಿಕೆ ಬಿಡುಗಡೆ ಮಾಡಿದ 2021ರ ನೂರು ಪ್ರಭಾವಿ ನಾಯಕರ ಪಟ್ಟಿಯಲ್ಲಿ ತಾಲಿಬಾನ್ ಉಗ್ರ, ಸದ್ಯ ಅಫ್ಘಾನಿಸ್ಥಾನ ಸರ್ಕಾರದ ಉಪ ಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಹೆಸರು ಸೇರ್ಪಡೆಯಾಗಿದೆ.
ಅಫ್ಘಾನಿಸ್ಥಾನದಿಂದ ಅಮೆರಿಕ ಪಡೆಗಳನ್ನು ಹಿಂಪಡೆಯುವ ಬಗ್ಗೆ ಮಾತುಕತೆ ನಡೆಸಿದವರಲ್ಲಿ ಮುಲ್ಲಾ ಬರಾದಾರ್ ಪ್ರಮುಖನಾಗಿದ್ದ. ತಾಲಿಬಾನ್ ನ ದೋಹಾ ಪಡೆಯ ಮುಖ್ಯಸ್ಥನಾಗಿರುವ ಮುಲ್ಲಾ ಬರಾದಾರ್, 2020ರ ಫೆಬ್ರವರಿಯಲ್ಲಿ ನಡೆದ ದೋಹಾ ಶಾಂತಿ ಒಪ್ಪಂದದಲ್ಲಿ ತಾಲಿಬಾನ್ ಪರವಾಗಿ ಭಾಗವಹಿಸಿದ್ದ.
ಯುಎಸ್ ಪಡೆ ಅಫ್ಘಾನಿಸ್ಥಾನದಿಂದ ಹೊರಹೋಗುತ್ತಿದ್ದಂತೆ ತಾಲಿಬಾನ್ ಸಂಘಟನೆಯು ಅಫ್ಘಾನ್ ನ್ನು ವಶಕ್ಕೆ ಪಡೆದಿತ್ತು. ತಾಲಿಬಾನ್ ನ ಪ್ರಮುಖ ನಿರ್ಧಾರಗಳು, ಅಫ್ಘಾನ್ ಆಡಳಿತದ ಹಿಂದಿನ ಸದಸ್ಯರಿಗೆ ಕ್ಷಮಾದಾನ ನೀಡುವ ತೀರ್ಮಾನ, ಕಾಬೂಲ್ ನಲ್ಲಿ ರಕ್ತಪಾತ ನಡೆಸದೇ ಇರುವ ನಿರ್ಧಾರ, ನೆರೆ ದೇಶಗಳಾದ ಪಾಕಿಸ್ಥಾನ ಮತ್ತು ಚೀನಾದೊಂದಿಗೆ ಆಡಳಿತಾತ್ಮಕ ಸಂಪರ್ಕದ ಬಗೆಗಿನ ತೀರ್ಮಾನಗಳಲ್ಲಿ ಮುಲ್ಲಾ ಬರಾದಾರ್ ಪ್ರಮುಖ ಪಾತ್ರ ವಹಿಸಿದ್ದ.
ಇದನ್ನೂ ಓದಿ:‘ಅರಿವಿಲ್ಲದೆ ಐಸಿಸ್ ಸೇರಿದೆ’: ಸಂದರ್ಶನದಲ್ಲಿ ಸಂಘಟನೆಯಲ್ಲಿದ್ದ ಶಮೀಮಾ ಪ್ರತಿಪಾದನೆ
2010ರಲ್ಲಿ ಪಾಕಿಸ್ಥಾನ ಪಡೆಗಳಿಂದ ಬಂಧಿತನಾಗಿದ್ದ ಮುಲ್ಲಾ ಬರಾದಾರ್ 2018ರವರೆಗೆ ಪಾಕ್ ನಲ್ಲಿ ಸೆರೆಮನೆ ವಾಸ ಅನುಭವಿಸಿದ್ದ. ಅಫ್ಘಾನ್ ನಿಂದ ಯುಎಸ್ ಪಡೆ ತೊರೆಯುವ ಸಾಧ್ಯತೆಗಳು ಗೋಚರವಾಗುತ್ತಿದ್ದಂತೆ ಬಿಡುಗಡೆಯಾಗಿದ್ದ ಬರಾದಾರ್ ದೋಹಾಗೆ ತೆರಳಿದ್ದ.
ತಾಲಿಬಾನ್ ಉಗ್ರ ಸಂಘಟನೆಯ ಸಹ ಸಂಸ್ಥಾಪಕನೂ ಆಗಿರುವ ಮುಲ್ಲಾ ಬರಾದಾರ್, ಅಮೆರಿಕದೊಂದಿಗೆ ಮಾತುಕತೆ ನಡೆಸುವಲ್ಲೂ ಪ್ರಮುಖ ಪಾತ್ರ ವಹಿಸಿದ್ದ. ಅಫ್ಘಾನ್ ನಲ್ಲಿನ ನೂತನ ತಾಲಿಬಾನ್ ಸರ್ಕಾರದಲ್ಲಿ ಮುಲ್ಲಾ ಬರಾದಾರ್ ಅವರೇ ಪ್ರಧಾನಿಯಾಗುತ್ತಾರೆ ಎನ್ನಲಾಗಿತ್ತು. ಆದರೆ ಮುಲ್ಲಾ ಬರಾದಾರ್ ಗೆ ಉಪ ಪ್ರಧಾನಿ ಸ್ಥಾನ ನೀಡಲಾಗಿದೆ.