ಜಗತ್ತಿನ ಸಕಲ ಜೀವರಾಶಿಗಳೂ ಪರಿಸರವನ್ನೇ ಆಶ್ರಯಿಸಿಕೊಂಡಿವೆ. ಹಾಗಾಗಿ ಪರಿಸರ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಬೇಕು. ಕಾಡು ಉಳಿಸದಿದ್ದರೆ ಮುಂದೊಂದು ದಿನ ಇಡೀ ಜಗತ್ತಿನ “ತಲೆದಂಡ’ವಾಗಬೇಕಾದೀತು. ಕಳೆದ ಹಲವು ದಶಕಗಳಿಂದ ಪರಿಸರ ಸಂರಕ್ಷಣೆಯ ಇಂಥ ಮಾತುಗಳನ್ನು, ನೂರಾರು ಸ್ಲೋಗನ್‌ಗಳನ್ನು ಬಹುತೇಕ ಎಲ್ಲರೂ ಲೆಕ್ಕವಿಲ್ಲದಷ್ಟು ಬಾರಿ ಕೇಳಿರುತ್ತೇವೆ. ಆದರೂ ಪರಿಸರದ ಮೇಲಿನ ಮನುಷ್ಯನ ಆಕ್ರಮಣ ನಿರಾತಂಕಕವಾಗಿ ಸಾಗುತ್ತಲೇ ಇದೆ. ಹಾಗಂತ ಪರಿಸರ ಸಂರಕ್ಷಣೆ ಜಾಗೃತಿ ಕೂಡ ನಿಂತಿಲ್ಲ. ಅದು ಕೂಡ ಬೇರೆ ಬೇರೆ ಸ್ವರೂಪಗಳಲ್ಲಿ, ಮಾಧ್ಯಮಗಳಲ್ಲಿ ನಡೆಯುತ್ತಲೇ ಇದೆ. ಇಂಥದ್ದೇ ಪರಿಸರ ಸಂರಕ್ಷಣೆಯಂತಹ ಗಂಭೀರ ವಿಷಯವನ್ನು ತೆರೆಮೇಲೆ ಹೇಳಿರುವ ಚಿತ್ರ “ತಲೆತಂಡ’.
ಕರ್ನಾಟಕದ ಗಡಿ ಜಿಲ್ಲೆ ಚಾಮರಾಜನಗರದ ಸೋಲಿಗ ಹಾಡಿಯ ಅರೆ ಮಾನಸಿಕ ಅಸ್ವಸ್ಥ ಹುಡುಗನೊಬ್ಬ ತನ್ನ ಜೀವವನ್ನೆ ಬಲಿಕೊಟ್ಟು ಹೇಗೆ ಮರಗಳನ್ನು ಸಂರಕ್ಷಿಸುತ್ತಾನೆ ಎನ್ನುವುದು “ತಲೆದಂಡ’ ಚಿತ್ರದ ಕಥೆಯ ಒಂದು ಎಳೆ.
ಪರಿಸರ ಮತ್ತು ಮಾನವನ ಸಂಘರ್ಷ, ಸಾಂಸ್ಕೃತಿಕ ವೈವಿಧ್ಯತೆ, ಬದುಕಿನ ಹೋರಾಟ, ಎದುರಾಗುವ ಸವಾಲುಗಳು, ವೈಯಕ್ತಿಕ ಹಿತಾಸಕ್ತಿ, ರಾಜಕೀಯ ಇಚ್ಛಾಶಕ್ತಿ ಹೀಗೆ ಅನೇಕ ಸಂಗತಿಗಳನ್ನು ಚಿತ್ರದ ಕಥೆಯಲ್ಲಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಪ್ರವೀಣ್ ಕೃಪಾಕರ್. ಪ್ರಸ್ತುತ ಸನ್ನಿವೇಶದಲ್ಲಿ ಆದ್ಯತೆಯ ಮೇಲೆ ಗಂಭೀರವಾಗಿ ಚರ್ಚೆಯಾಗಬೇಕಾಗುವ ವಿಷಯವೊಂದನ್ನು ಸಿನಿಮಾದ ಮೂಲಕ ಹೇಳಿರುವ ಚಿತ್ರತಂಡದ ಪ್ರಯತ್ನ ಪ್ರಶಂಸನೀಯ.
ಇದನ್ನೂ ಓದಿ:ಗಣೇಶ್ ಹೊಸ ಚಿತ್ರ ‘ಬಾನದಾರಿಯಲ್ಲಿ…’
ಇನ್ನು ಇಡೀ “ತಲೆತಂಡ’ ಸಿನಿಮಾದಲ್ಲಿ ತೆರೆಮೇಲೆ ಸಂಪೂರ್ಣವಾಗಿ ಆವರಿಸಿಕೊಳ್ಳುವುದು ನಟ ಸಂಚಾರಿ ವಿಜಯ್ ಅಭಿನಯ. ಅರೆ ಮಾನಸಿಕ ಅಸ್ವಸ್ಥನಾಗಿ ಜೊತೆಗೆ ವೃಕ್ಷ ರಕ್ಷಕನಾಗಿ ಸಂಚಾರಿ ವಿಜಯ್ ಅಭಿನಯ ನೋಡುಗರ ಮನಸ್ಸಿನಲ್ಲಿ ಉಳಿಯುತ್ತದೆ. ಉಳಿದಂತೆ ಮಂಗಳಾ, ಚೈತ್ರಾ ಆಚಾರ್, ಭವಾನಿ, ರಮೇಶ್ ಪಂಡಿತ್ ಮೊದಲಾದ ಕಲಾವಿದರು ತಮ್ಮ ಪ್ರಬುದ್ಧ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ.
ಅಶೋಕ್ ಕಶ್ಯಪ್ ಛಾಯಾಗ್ರಹಣ, ಬಿ. ಎಸ್ ಕೆಂಪರಾಜು ಸಂಕಲನ ಕಾರ್ಯ ಮತ್ತು ಸೋಲಿಗ ಜನಾಂಗದ ಹಾಡುಗಳನ್ನು ಹೊಂದಿದ ಹಿನ್ನೆಲೆ ಸಂಗೀತತ ಸಿನಿಮಾದ ತಾಂತ್ರಿಕ ಹೈಲೈಟ್ಸ್‌ಗಳು. ಮಾಮೂಲಿ ಸಿದ್ಧಸೂತ್ರದ ಕಮರ್ಶಿಯಲ್ ಸಿನಿಮಾಗಳ ಬಿಟ್ಟು ಹೊಸಥರದ ಸಿನಿಮಾಗಳು ನೋಡಬೇಕೆನ್ನುವ ಪ್ರೇಕ್ಷಕರಿಗೆ “ತಲೆದಂಡ’, ತಲೆಗೆ ಸ್ವಲ್ಪ ಕೆಲಸ ಕೊಡುತ್ತಲೇ ಮನಸ್ಸಿಗೂ ಮುಟ್ಟುತ್ತದೆ ಎನ್ನಬಹುದು.
ಜಿ.ಎಸ್.ಕಾರ್ತಿಕ ಸುಧನ್