ಹುಣಸೂರು: ಹೆಣ್ಣು ಮಕ್ಕಳು ತಮ್ಮ ಸೌಂದರ್ಯ ವೃದ್ಧಿಗಾಗಿ ಸಾಕಷ್ಟು ಹಣ ವ್ಯಯಮಾಡುವ ಬದಲು ನೀವೇ ತರಬೇತಿ ಪಡೆದುಕೊಂಡಿದ್ದಲ್ಲಿ ಮನೆಯಲ್ಲೇ ಸ್ವಯಂ ಬ್ಯೂಟಿಷಿಯನ್ ವೃತ್ತಿ ಕೈಗೊಳ್ಳಬಹುದಾಗಿದೆ ಎಂದು ಇಕ್ವಿಟಾಸ್ ಬ್ಯಾಂಕ್ ವ್ಯವಸ್ಥಾಪಕ ವಿನೋದ್‌ಕುಮಾರ್ ತಿಳಿಸಿದರು.
ನಗರದ ಮಹಿಳಾ ಪದವಿ ಕಾಲೇಜಿನಲ್ಲಿ ಬ್ಯಾಂಕ್ ವತಿಯಿಂದ ಆಯೋಜಿಸಿದ್ದ 5 ದಿನಗಳ ಸೌಂದರ್ಯ ವೃದ್ಧಿ ತರಬೇತಿ ಶಿಬಿರದ ಸಮಾರೋಪದಲ್ಲಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಅಲ್ಪ ಅವಧಿಯ ತರಬೇತಿ ಮೂಲಕ ಕಾಲೇಜು ಅವಧಿ ನಂತರ ಮನೆಯಲ್ಲೇ ಕೇಶವಿನ್ಯಾಸ, ಐಬ್ರೋ, ಫೇಷಿಯಲ್, ಬ್ಲೀಚಿಂಗ್ ಸೇರಿದಂತೆ ಅನೇಕ ಸೌಂದರ್ಯ ವೃದ್ಧಿಸುವ ಕೆಲಸ ಮಾಡಿಕೊಳ್ಳಬಹುದಾಗಿದೆ ಎಂದರು.
ಬ್ಯಾಂಕ್‌ನ ಮತ್ತೋರ್ವ ಅಧಿಕಾರಿ ನವೀನ್, ಮಹಿಳಾ ಸಬಲೀಕರಣಕ್ಕೆ ನಮ್ಮ ಬ್ಯಾಂಕ್ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಸ್ವಸಹಾಯ ಸಂಘಗಳನ್ನು ರಚಿಸಿ ಸಾಲ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದರೆ, ಕಾಲೇಜುಗಳಲ್ಲಿ ನುರಿತ ತರಬೇತುದಾರರಿಂದ ಮನೆಯಲ್ಲೇ ಮಾಡಿಕೊಳ್ಳಬಹುದಾದ ಬ್ಯೂಟಿಷಿಯನ್ ತರಬೇತಿ ನೀಡಲಾಗುತ್ತಿದೆ. ಓದಿನ ನಂತರ ಸ್ವಯಂ ಬ್ಯೂಟಿ ಪಾರ್ಲರ್ ತೆರೆಯುವವರಿಗೆ ಸಾಲ ಸೌಲಭ್ಯ ಕಲ್ಪಿಸಲಾಗುವುದೆಂದರು.
ತರಬೇತಿ ನೀಡಿದ ಬ್ಯೂಟಿಷಿಯನ್ ಜ್ಯೋತಿ, ಸಿಂಧೂ, 5 ದಿನದ ತರಬೇತಿ ಅವಧಿಯಲ್ಲಿ ಪ್ರಾಥಮಿಕವಾಗಿ ಅವಶ್ಯವಾದ ಐಬ್ರೋ, ಫೇಷಿಯಲ್ ಸೇರಿದಂತೆ ತರಕಾರಿಗಳಾದ ಸೌತೆಕಾಯಿ, ನಿಂಬೆಹಣ್ಣ, ಟೊಮೆಟೋ ಸೇರಿದಂತೆ ವಿವಿಧ ತರಕಾರಿ ಬಳಸಿ ಹೇಗೆ ಸೌಂದರ್ಯ ವೃದ್ಧಿಸಿಕೊಳ್ಳುವುದೆಂಬ ಬಗ್ಗೆ ಮಾಹಿತಿ ನೀಡಲಾಗಿದ್ದು ಬ್ಯೂಟಿ ಪಾರ್ಲರ್‌ಗಳಲ್ಲಿ ಬಳಸುವ ರಾಸಾಯನಿಕ ವಸ್ತುಗಳ ಬಗೆಯೂ ತಿಳಿಸಲಾಗಿದೆ ಎಂದು ಹೇಳಿದರು.
ಎನ್‌ಎಸ್‌ಎಸ್ ಘಟಕದ ಅಧಿಕಾರಿ ಕೆ.ಎಸ್.ಭಾಸ್ಕರ್, ತರಬೇತಿಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಜೊತೆಗೆ ಹಣ ಉಳಿತಾಯ ಮಾಡುವ, ಸ್ವಯಂ ಉದ್ಯೋಗ ಸೃಷ್ಟಿಸಿಕೊಳ್ಳಲು ಸಹಕಾರಿಯಾಗಿದ್ದು, ಪ್ರಥಮ ಹಂತದಲ್ಲಿ 72 ವಿದ್ಯಾರ್ಥಿನಿಯರಿಗೆ 2 ತಂಡದಲ್ಲಿ ತರಬೇತಿ ನೀಡಲಾಗಿದೆ. ಇದರಿಂದ ಪ್ರೇರಿತರಾದ ಮತ್ತಷ್ಟು ವಿದ್ಯಾರ್ಥಿನಿಯರು ತರಬೇತಿ ಪಡೆಯಲು ಇಚ್ಚಿಸಿದ್ದು, ಅವರಿಗೂ ತರಬೇತಿ ಸೌಲಭ್ಯ ಕಲ್ಪಿಸಬೇಕೆಂದು ಬ್ಯಾಂಕ್ ಅಧಿಕಾರಿಗಳನ್ನು ಕೋರಿದರು. ಸಮಾರೋಪದಲ್ಲಿ ಸಿಡಿಸಿ ಕಾರ್ಯಾಧ್ಯಕ್ಷ ಗೋವಿಂದರಾಜಗುಪ್ತ, ಬ್ಯಾಂಕ್‌ನ ಅಧಿಕಾರಿ ವಿಜಯಕುಮಾರ್ ಉಪಸ್ಥಿತರಿದ್ದರು.