ಕಲಬುರಗಿ: ಪ್ರಸಕ್ತವಾಗಿ ಬರಗಾಲ ಛಾಯೆ ವ್ಯಾಪಕವಾಗಿದ್ದರಿಂದ ಕಂಗಾಲಾಗಿರುವ ರೈತರಿಗೆ ಹಾಗೂ ಕೃಷಿ ಕೂಲಿ ಕಾರ್ಮಿಕರಿಗೆ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ ಉದ್ಯೋಗ ಕಲ್ಪಿಸಿಕೊಡಲು ಕೃಷಿ ಇಲಾಖೆ, ಅರಣ್ಯ ಸೇರಿದಂತೆ ಇತರ ಇಲಾಖೆಗಳು ಕ್ರಿಯಾ ಯೋಜನೆ ರೂಪಿಸಿ ಕಾರ್ಯಾನುಷ್ಠಾನಕ್ಕೆ ಮುಂದಾಗುವುದರ ಜತೆಗೆ ಉದ್ಯೋಗ ಖಾತ್ರಿ ಅಡಿ ಹೊಲದಲ್ಲಿ ಕಲ್ಲುಗಳನ್ನು ಆಯುವುದು, ಹೊಲ ಸ್ವಚ್ಛತೆ, ಬದುಗಳ ನಿರ್ಮಾಣ ಸೇರಿದಂತೆ ಇತರ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಸೂಚಿಸಿದರು.
ಬುಧವಾರ ಜಿಲ್ಲಾ ಪಂಚಾಯತ್ ಹಳೆ ಸಭಾಂಗಣದಲ್ಲಿ ನಡೆದ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಹಾಗೂ ಮರಗಳನ್ನು ಬೆಳೆಸುವ ಮುಖಾಂತರ ಜತೆಗೆ ರೇಷ್ಮೆ, ತೋಟಗಾರಿಕೆ ಕ್ಷೇತ್ರದಲ್ಲೂ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ವ್ಯಾಪಕವಾಗಿ ಕೈಗೊಳ್ಳಬೇಕು. ರೇಷ್ಮೆ ಬೆಳೆಗಳಿಗೆ ಅನುಕೂಲವಾಗಲು ಕೃಷಿ ಹೊಂಡಗಳನ್ನು ನಿರ್ಮಿಸಬೇಕು. ಈಗಲೇ ಎನ್‌ಎಂಆರ್ ನೀಡಿ ಎಂದು ತಾಕೀತು ಮಾಡಿದರು.
ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳು ಸಮುದಾಯವಾಗಿರಲಿ. ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗಿರಲಿ. ಉದ್ಯೋಗ ಖಾತ್ರಿ ಯೋಜನೆಗಳಲ್ಲಿ ಕೆಲಸಕ್ಕೆಂದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಕೃಷಿ ಯೋಜನೆಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪಾರದರ್ಶಕತೆ ಬರಲಿ. ಯೋಜನೆಗಳ ಆಯ್ಕೆಯಲ್ಲಿ ಕಡ್ಡಾಯವಾಗಿ ಲಾಟರಿ ಪದ್ಧತಿ ಅನುಸರಿಸಿ ಎಂದರು.
ಖರೀದಿ ಸುಗಮವಾಗಿ ನಡೆಯಲಿ: ತೊಗರಿ ಖರೀದಿ ಕೇಂದ್ರಗಳಲ್ಲಿ ರೈತರಿಗೆ ಯಾವುದೇ ನಿಟ್ಟಿನ ಶೋಷಣೆಯಾಗದಂತೆ ಕೃಷಿ ಅಧಿಕಾರಿಗಳು ನಿಗಾ ವಹಿಸಬೇಕು. ನವೆಂಬರ್ 19ರಿಂದ ತೊಗರಿ ಖರೀದಿ ಆರಂಭವಾಗಲು ಕ್ರಮಕೈಗೊಳ್ಳಬೇಕು. ಒಟ್ಟಾರೆ ತೊಗರಿ ಖರೀದಿ ಪ್ರಕ್ರಿಯೆಯು ಸುಗಮವಾಗಿ ನಡೆಯಬೇಕೆಂದು ರದ್ದೇವಾಡಗಿ ತಾಕೀತು ಮಾಡಿದರು.
ಪಶು ಸಂಗೋಪನಾ ಇಲಾಖೆ, ಸಹಕಾರ ಹಾಗೂ ಕುರಿ ಸಾಕಾಣಿಕೆ ಅಭಿವೃದ್ಧಿ ನಿಗಮ, ರೇಷ್ಮೆ ಇಲಾಖೆ, ಕಲಬುರಗಿ-ಬೀದರ ಹಾಲು ಒಕ್ಕೂಟದ ಕುರಿತಾಗಿ ಚರ್ಚೆ ನಡೆದವು. ಸ್ಥಾಯಿ ಸಮಿತಿ ಸದಸ್ಯರುಗಳಾದ ಗುರುಶಾಂತಗೌಡ ಪಾಟೀಲ ನಿಂಬಾಳ, ದಂಡಪ್ಪ ಸಾಹು ಕುಳಗೇರಿ, ಕಲಾವತಿ ನಾಗೂರೆ, ಅಶೋಕ ಸಗರ, ಶಶಿಕಲಾ ತಿಮ್ಮನಾಯಕ, ಗೌರಮ್ಮ ಜೈಭೀಮ, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಪ್ರವೀಣಪ್ರಿಯಾ, ಜಂಟಿ ಕೃಷಿ ನಿರ್ದೇಶಕ ರತೀಂದ್ರನಾಥ ಸುಗೂರ ಮುಂತಾದವರಿದ್ದರು.