Advertisement

ತುಮರಿ ಸೇತುವೆ ನಿರ್ಮಾಣಕ್ಕೆ ಕೇಂದ್ರ ಕೈಗೊಳ್ಳಲಿ

11:24 AM Feb 26, 2019 | |

ಸಾಗರ: ತುಮರಿ ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾಮರ್ಥ್ಯಸೌಧದಲ್ಲಿ ಸೋಮವಾರ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅಧ್ಯಕ್ಷತೆಯಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಹಕ್ಕೊತ್ತಾಯದ ನಿರ್ಣಯ ತೆಗೆದುಕೊಳ್ಳಲಾಯಿತು.

Advertisement

ತುಮರಿ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ 13 ತಿಂಗಳು ಕಳೆದಿದೆ. ಆದರೆ, ಈತನಕ ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಡಿಪಿಆರ್‌ ತಯಾರಿಸಿಲ್ಲ. ಮೊದಲು 650 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದ ಕೇಂದ್ರ ಸರ್ಕಾರ ಇದೀಗ 440 ಕೋಟಿ ರೂ.ಗೆ ಪ್ರಸ್ತಾವನೆ ಇಳಿಸಿದೆ. ತಕ್ಷಣ ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಸಭೆಯಲ್ಲಿ ತೀರ್ಮಾನಿಸಲಾಯಿತು.

ವಿಷಯ ಪ್ರಸ್ತಾಪಿಸಿದ ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ್‌, 13 ತಿಂಗಳ ಹಿಂದೆ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಶಂಕುಸ್ಥಾಪನೆ ನಡೆಸಿದ್ದರು. ಈಗ ಹಿನ್ನೀರಿನ ಭಾಗದ ಜನರಲ್ಲಿ ಶಂಕುಸ್ಥಾಪನೆ ನಡೆದಿದ್ದು ಹೌದೋ, ಅಲ್ಲವೋ ಎನ್ನುವ ಅನುಮಾನ ಕಾಡಲು ಪ್ರಾರಂಭವಾಗಿದೆ. ಮೊನ್ನೆ ಸಂಸದರು ತುಮರಿಗೆ ಬಂದಾಗ ಮುಂದಿನ 15 ದಿನಗಳಲ್ಲಿ ತುಮರಿ ಸೇತುವೆಗೆ ಸಂಬಂಧಪಟ್ಟಂತೆ ಅಗತ್ಯ ಕೆಲಸ ಆಗುತ್ತದೆ ಎಂದು ಭರವಸೆ ನೀಡಿದ್ದಾರೆ. ಸೇತುವೆಗೆ ಶಂಕುಸ್ಥಾಪನೆ, ಭರವಸೆ ಕೇವಲ ಚುನಾವಣೆ ಗಿಮಿಕ್‌ ಆಗುತ್ತಿದೆಯೇ ಎನ್ನುವ ಅನುಮಾನ
ಉಂಟಾಗುತ್ತಿದೆ ಎಂದು ದೂರಿದರು. 

ಸದಸ್ಯ ಅಶೋಕ್‌ ಬರದವಳ್ಳಿ ಮಾತನಾಡಿ, ಲೋಕಸಭೆ ಚುನಾವಣೆ ಹತ್ತಿರ ಬಂದಾಗ ತುಮರಿ ಸೇತುವೆ ಬಗ್ಗೆ ಬಿಜೆಪಿ ನಾಯಕರು ಹಿನ್ನೀರಿನ ಜನರಿಗೆ ಭರವಸೆ ನೀಡಿ ಮತ ಪಡೆಯುತ್ತಿದ್ದಾರೆ. ಚುನಾವಣೆ ನಂತರ ಇದರ ಬಗ್ಗೆ ಪ್ರಸ್ತಾಪ ಮಾಡುವುದಿಲ್ಲ. ಹಿನ್ನೀರಿನ ಜನರಿಗೆ ಪದೇಪದೇ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ಸದಸ್ಯೆ ಜ್ಯೋತಿ ಕೋವಿ ಮಾತನಾಡಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಬಿ.ವೈ. ರಾಘವೇಂದ್ರ ಅವರಿಗೆ ಮತ ನೀಡಿ, ನಾನು ತುಮರಿ ಸೇತುವೆ ನಿರ್ಮಾಣ ಮಾಡಿಸಿಕೊಡುತ್ತೇನೆ ಎನ್ನುವ ಭರವಸೆ ನೀಡಿದ್ದರು. ಈಗ ಪುನಃ ಲೋಕಸಭಾ ಚುನಾವಣೆ ಬರುತ್ತಿದ್ದು, ಮತ್ತೆ ಭರವಸೆ ನೀಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

Advertisement

ಬಿಜೆಪಿ ಸದಸ್ಯ ದೇವೇಂದ್ರಪ್ಪ ಯಲಕುಂದ್ಲಿ ಮಾತನಾಡಿ, ಕೇಂದ್ರ ಸರ್ಕಾರ ತುಮರಿ ಸೇತುವೆ ನಿರ್ಮಾಣಕ್ಕೆ ಬದ್ಧವಿದ್ದು, ಹಣ ಸಹ ಬಿಡುಗಡೆ ಮಾಡಲು ಅಗತ್ಯ ಸಿದ್ಧತೆ ನಡೆಸಿದೆ. ಆದರೆ ರಾಜ್ಯ ಸರ್ಕಾರ ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಕೆಲವು ತಾಂತ್ರಿಕ ಮಾಹಿತಿಯನ್ನು ಕೇಂದ್ರಕ್ಕೆ ನೀಡುವಲ್ಲಿ ವಿಫಲವಾಗಿದೆ ಎಂದು ದೂರಿದರು.

 ವಿದ್ಯುತ್‌ ನಿಗಮದಿಂದ ಮಾಹಿತಿ ಪಡೆಯಲು ಕ್ಷೇತ್ರದ ಶಾಸಕರು ಕೇಂದ್ರ ಕಚೇರಿ ಮುಂದೆ ಧರಣಿ ಕುಳಿತುಕೊಳ್ಳುವ ಸ್ಥಿತಿ ರಾಜ್ಯ ಸರ್ಕಾರ ನಿರ್ಮಾಣ ಮಾಡಿತ್ತು. ಸೇತುವೆ ನಿರ್ಮಾಣಕ್ಕೆ ಬಿಡುಗಡೆಯಾಗಿದ್ದು 300 ಕೋಟಿ ಹಣವನ್ನು ಹಾಸನ ಲೋಕಸಭಾ ವ್ಯಾಪ್ತಿಯ ರಸ್ತೆ ಕಾಮಗಾರಿಗೆ ವಿನಿಯೋಗಿಸಲಾಗಿದೆ ಎನ್ನುವ ದೂರು ಸಹ ಇದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಮ್ಮ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು. ನಂತರ ಸೇತುವೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡು, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು.

ಮಂಗನ ಕಾಯಿಲೆ ನಿಯಂತ್ರಣ: ತಾಲೂಕಿನಲ್ಲಿ ಮಂಗನ ಕಾಯಿಲೆ ನಿಯಂತ್ರಣದಲ್ಲಿದ್ದು, ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಮಂಗಗಳು ಸಾಯುತ್ತಿರುವ ಪ್ರದೇಶಗಳಲ್ಲಿ ವಿತರಣೆ ಮಾಡಲು ಡಿಎಂಪಿ ಆಯಿಲ್‌ ಸಂಗ್ರಹದಲ್ಲಿದ್ದು, ವ್ಯಾಕ್ಸಿನೇಷನ್‌ ನೀಡುವ ಕೆಲಸ ಇನ್ನಷ್ಟು ತ್ವರಿತವಾಗಿ ನಡೆಸುವಂತೆ ಆರೋಗ್ಯ ಇಲಾಖೆ ಅ ಧಿಕಾರಿಗಳಿಗೆ ಸೂಚಿಸಿದ ಹಕ್ರೆ, ಆವಿನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿಎಂಪಿ ಆಯಿಲ್‌ ಸಂಗ್ರಹವಿದ್ದರೂ ವಿತರಿಸದ ಆರೋಗ್ಯ ಇಲಾಖೆ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಆದೇಶ ನೀಡಿದರು. 

ಸದಸ್ಯರಾದ ಜ್ಯೋತಿ, ಪ್ರಭಾವತಿ ಚಂದ್ರಕಾಂತ್‌, ಸವಿತಾ ದೇವರಾಜ್‌ ಇನ್ನಿತರರು ಅರಲಗೋಡು ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ, ಆಶ್ರಯ
ಮನೆ ಸೇರಿದಂತೆ ಅಂಗನವಾಡಿ, ಅಕ್ಷರದಾಸೋಹದಲ್ಲಿ ಉದ್ಯೋಗಾವಕಾಶ, ಮಕ್ಕಳಿಗೆ ಉಚಿತ ಶಿಕ್ಷಣ ನೀಡುವಂತೆ ಒತ್ತಾಯಿಸಿದರು. ಸಭೆಯಲ್ಲಿ ಮರಳಿನ ಸಮಸ್ಯೆ ಕುರಿತು ಚರ್ಚೆ
ನಡೆಯಿತು. ತಾಪಂ ಇಒ ಮಂಜುನಾಥ ಸ್ವಾಮಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next