ಚೀನಾ ಯಾವುದೇ ಪ್ರಚೋದನೆಯಿಲ್ಲದೆ ಗಡಿ ಭಾಗದಲ್ಲಿ ಜಗಳ ಮಾಡುವ ತನ್ನ ಹಳೇ ಚಾಳಿಯನ್ನು ಬಿಡುವ ಲಕ್ಷಣ ಕಾಣಿಸುತ್ತಿಲ್ಲ. ಇದೀಗ ಮತ್ತೂಮ್ಮೆ ಅರುಣಾಚಲ ಪ್ರದೇಶದ ತಂಟೆಗೆ ಬಂದಿರುವ ಡ್ರ್ಯಾಗನ್ ದೇಶ ಅನ್ಸಾಲಿಯಾದಲ್ಲಿ ಭಾರತ ತನ್ನ ನೆಲವನ್ನು ಅತಿಕ್ರಮಣ ಮಾಡಿದೆ ಎಂಬ ಹುರುಳಿಲ್ಲದ ಆರೋಪವನ್ನು ತೇಲಿಬಿಟ್ಟಿದೆ. ನಿಜಕ್ಕಾದರೆ ಅನ್ಸಾಲಿಯಾ ಪೂರ್ತಿಯಾಗಿ ಅರುಣಾಚಲ ಪ್ರದೇಶದಲ್ಲಿದೆ. ಇಲ್ಲಿಗೆ ಭಾರತೀಯ ಸೈನಿಕರು ಹೋಗಲು ಅಥವಾ ಅಲ್ಲಿ ಯಾವುದೇ ಚಟುವಟಿಕೆ ನಡೆಸಲು ಚೀನಾದ ಅಪ್ಪಣೆ ಬೇಕಿಲ್ಲ. ಆದರೆ ಏನಾದರೊಂದು ಕುಂಟು ನೆಪ ತೆಗೆದು ಗಡಿ ವಿವಾದವನ್ನು ಜೀವಂತವಾಗಿಡಬಯಸುವ ಚೀನಾ ಈಗ ಅನ್ಸಾಲಿಯಾ ವಿವಾದವನ್ನು ಎತ್ತಿಕೊಂಡಿದೆಯಷ್ಟೆ.
ಕಳೆದ ಮಾ. 15ರಂದು ನಡೆದ ಗಡಿ ಭಾಗದ ಸೇನಾಧಿಕಾರಿಗಳ ಸಭೆಯಲ್ಲಿ ಚೀನಾ ಅನ್ಸಾಲಿಯಾದ ತಗಾದೆ ತೆಗೆದಿತ್ತು. ಆದರೆ ಭಾರತದ ಸೇನಾಧಿಕಾರಿಗಳು ಈ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ಚೀನಾ ತಗಾದೆ ತೆಗೆದಿರುವ ಅನ್ಸಾಲಿಯಾ ಅರುಣಾಚಲ ಪ್ರದೇಶದ ಸುಭಾನ್ಸಿರಿಯ ದ ಮೇಲ್ಭಾಗವಾಗಿದ್ದು ಅಲ್ಲಿ ಹಿಂದಿನಿಂದಲೂ ಭಾರತದ ಸೈನಿಕರು ಗಸ್ತು ತಿರುಗುತ್ತಿದ್ದಾರೆ. ಆದರೆ ವಿವಾದಕ್ಕೊಂದು ಕಾರಣವನ್ನು ಹುಡುಕುವ ಚೀನಕ್ಕೆ ಈಗ ಅದು ಅತಿಕ್ರಮಣದಂತೆ ಕಾಣಿಸುತ್ತಿದೆ. ಹಿಂದಿನಿಂದಲೂ ಅರುಣಾಚಲ ಪ್ರದೇಶದ ಮೇಲೆ ಚೀನಾಕ್ಕೊಂದು ಕಣ್ಣಿದೆ. ಈ ರಾಜ್ಯವನ್ನು ಅದು ಅರುಣಾಚಲ ಪ್ರದೇಶ ಎಂದು ಹೇಳುವುದಿಲ್ಲ ಬದಲಾಗಿ ದಕ್ಷಿಣ ಟಿಬೆಟ್ ಎನ್ನುತ್ತಿದೆ. ಸರಿಯಾಗಿ ಒಂದು ವರ್ಷದ ಹಿಂದೆ ದಲೈಲಾಮಾ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವುದನ್ನು ವಿರೋಧಿಸಿ ಅಲ್ಲಿನ ಆರು ಸ್ಥಳಗಳಿಗೆ ತನ್ನದೇ ಹೆಸರಿಟ್ಟಿತ್ತು. ಆದರೆ ಆಗ ಕೇಂದ್ರ ಸರಕಾರ ನೀಡಿದ ಖಡಕ್ ಉತ್ತರದಿಂದಾಗಿ ಮರಳಿ ಈ ವಿವಾದವನ್ನು ಎತ್ತಿರಲಿಲ್ಲ.
ಈಗ ಮತ್ತೆ ಅರುಣಾಚಲ ಪ್ರದೇಶದ ಮೇಲೆ ಕಣ್ಣು ಹಾಕಿರುವುದರ ಹಿಂದೆ ಭಾರತವನ್ನು ತಕ್ಷಣಕ್ಕೆ ಪ್ರಚೋದಿಸುವುದಕ್ಕಿಂತಲೂ ದೊಡ್ಡದಾದ ಕಾರಣಗಳು ಇವೆ ಎನ್ನುವ ಸಂಶಯವಿದೆ. ಕ್ಸಿ ಜಿನ್‌ಪಿಂಗ್ ಆಜೀವ ಅಧ್ಯಕ್ಷರಾದ ಬಳಿಕ ಚೀನಾದ ಭೂದಾಹ ಇನ್ನಷ್ಟು ಹೆಚ್ಚಿದೆ. ಜಗತ್ತಿನ ಸೂಪರ್ ಪವರ್ ಆಗಲು ಹೊರಟಿರುವ ಚೀನಾ ಮೊದಲ ಹಂತವಾಗಿ ತನ್ನ ನೆರೆಹೊರೆಯ ಚಿಕ್ಕಪುಟ್ಟ ರಾಷ್ಟ್ರಗಳನ್ನು ಕಬಳಿಸುವ ಯೋಜನೆ ಹಾಕಿಕೊಂಡಿದೆ. ಹೀಗಾಗಿ ಪದೇ ಪದೇ ಭಾರತ ಜತೆಗೆ ಗಡಿ ತಕರಾರು ತೆಗೆಯುತ್ತಿದೆ. ಕಳೆದ ವರ್ಷ ಸುಮಾರು ಮೂರು ತಿಂಗಳು ಸಿಕ್ಕಿಂನ ಡೋಕ್ಲಾಂನಲ್ಲಿ ಉಭಯ ದೇಶಗಳ ಸೈನಿಕರು ಮುಖಾಮುಖೀಯಾಗಿ ಯುದ್ಧ ಸದೃಶ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಈ ವಿವಾದ ಮಾತುಕತೆ ಮೂಲಕ ಬಗೆಹರಿದಿದ್ದರೂ ಇದರಿಂದ ತನಗೆ ಹಿನ್ನಡೆಯಾಗಿದೆ ಎಂಬ ಅವಮಾನದ ಭಾವನೆ ಚೀನಕ್ಕಿದೆ. ಹೀಗಾಗಿ ಪದೇ ಪದೇ ಅದು ಭಾರತವನ್ನು ಕೆಣಕುತ್ತಿದೆ. ಪದೇ ಪದೇ ಗಡಿ ತಗಾದೆ ತೆಗೆಯುವ ಹುನ್ನಾರದ ಹಿಂದೆ ನಿರ್ದಿಷ್ಟವಾದ ಕಾರಣಗಳಿವೆ ಎನ್ನುವುದು ತಜ್ಞರ ಅಭಿಮತ. ನೆರೆ ದೇಶದ ಸ್ವಲ್ಪ ಸ್ವಲ್ಪ ಭಾಗವನ್ನು ಅತಿಕ್ರಮಿಸುತ್ತಾ ಬಂದು ಯಥಾಸ್ಥಿತಿಯನ್ನು ಬದಲಾಯಿಸಿ ಕಡೆಗೆ ಇಡೀ ಪ್ರದೇಶ ತನ್ನದು ಎಂದು ಘೋಷಿಸಿಕೊಳ್ಳುವುದು ಒಂದು ಉದ್ದೇಶವಾದರೆ , ಉಭಯ ದೇಶಗಳ ನಡುವಿನ ಗಡಿ ವಿವಾದ ಜೀವಂತವಾಗಿದೆ ಎಂದು ಅಂತರಾಷ್ಟ್ರೀಯ ಸಮುದಾಯಕ್ಕೆ ತೋರಿಸಿಕೊಡುವುದು ಇನ್ನೊಂದು ಉದ್ದೇಶ. ಭೂತಾನ್ ಗಡಿಯಲ್ಲಿ ಚೀನಾ ಈಗಾಗಲೇ ಸಾಕಷ್ಟು ಭೂ ಪ್ರದೇಶವನ್ನು ಹೀಗೆ ಸ್ವಲ್ಪಸ್ವಲ್ಪವೇ ಒತ್ತುವರಿ ಮಾಡಿಕೊಂಡು ಬುಟ್ಟಿಗೆ ಹಾಕಿಕೊಂಡಿದೆ. ಈ ಭೂಪ್ರದೇಶದಲ್ಲಿಯೇ ಅಚ್ಚುಕಟ್ಟಾದ ರಸ್ತೆಯನ್ನೂ ನಿರ್ಮಿಸುತ್ತಿದೆ. ಹೀಗೆ ಚೀನಾ ತಕರಾರು ತೆಗೆದೆದಾಗಲೆಲ್ಲ ಭಾರತದಲ್ಲಿ ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಕೂಗು ಕೇಳಿ ಬರುತ್ತದೆ.
ಸೋಷಿಯಲ್ ಮೀಡಿಯಾಗಳಲ್ಲಿ ಚೀನಾ ವಿರುದ್ಧ ಆಕ್ರೋಶ ಹರಿದಾಡುತ್ತದೆ. ಗಡಿ ವಿವಾದ ತಣ್ಣಗಾಗುತ್ತಿರುವಂತೆ ಭಾರತೀಯರ ರೋಷವೂ ತಣ್ಣಗಾಗುತ್ತದೆ. ಚೀನಾದ ಯಾವ ಕಂಪೆನಿ ಹೊಸ ಅಗ್ಗದ ಮೊಬೈಲ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಎಂದು ಹುಡುಕಲು ಶುರು ಮಾಡುತ್ತಾರೆ. ಇದು ಲಾಗಾಯ್ತಿನಿಂದ ನಡೆದುಕೊಂಡು ಬಂದಿರುವ ಪದ್ಧತಿ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಇನ್ನೂ ದೃಢವಾದ ಕ್ರಮಗಳನ್ನು ಕೈಗೊಳ್ಳದೆ ಇರುವುದು ಆಶ್ಚರ್ಯವುಂಟು ಮಾಡುತ್ತಿದೆ. ಹೀಗೆ ಆಗಾಗ ಗಡಿಯಲ್ಲಿ ಪ್ರಕ್ಷುಬದ್ಧ ಸ್ಥಿತಿ ತಲೆದೋರುವುದು ಯಾವುದೇ ದೇಶದ ಅಭಿವೃದ್ಧಿಯ ನೆಲೆಯಲ್ಲಿ ಉತ್ತಮ ಬೆಳವಣಿಗೆಯಲ್ಲ. ಈ ಹಿನ್ನೆಲೆಯಲ್ಲಿ ಗಡಿ ವಿವಾದವನ್ನು ಸಮಗ್ರವಾಗಿ ಬಗೆಹರಿಸಿಕೊಳ್ಳುವತ್ತ ಗಮನ ಹರಿಸುವುದು ಅಗತ್ಯ.