ಬೆಂಗಳೂರು: ಕ್ವಾರಂಟೈನ್ ಮಾಡಲು ಹೋದ ಪೊಲೀಸರ ಮೇಲೆ ಕೆಲ ಪುಂಡರು ಹಲ್ಲೆ ನಡೆಸಿಸ ಘಟನೆಯ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮಾಹಿತಿ ಕಲೆ ಹಾಕಿದ್ದು, ಘಟನೆಗೆ ಕಾರಣರಾದ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಆದೇಶಿಸಿದ್ದಾರೆ.
ಇಲ್ಲಿನ 58 ಜನರನ್ನು ಕ್ವಾರೆಂಟೈನ್ ಮಾಡಲೆಂದು ತೆರಳಿದ್ದ ಆರೋಗ್ಯ ಯೋಧರ ಮೇಲೆ ಸ್ಥಳೀಯ ಕೆಲ ಪುಂಡರು ಹಲ್ಲೆಗೆ ಯತ್ನಿಸಿದ್ದಾರೆ ಮತ್ತು ಇದನ್ನು ತಡೆಯಲು ಬಂದ ಸೀಮಿತ ಪೊಲೀಸ್ ಪಡೆಗಳ ಮೇಲೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಪುಂಡರು ಹಲ್ಲೆ ನಡೆಸಿದ್ದರು.
ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಜತೆ ಘಟನೆಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಚರ್ಚೆ ನಡೆಸಿದರು. ಇಂತಹ ಘಟನೆ ನಿರ್ಬಂಧಿಸಲು ಪೊಲೀಸರಿಗೆ ಎಲ್ಲ ಅಧಿಕಾರ ನೀಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ನಂತರ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಎಫ್ ಐಆರ್ ದಾಖಲಿಸಲಾಗಿದೆ. ಬೇರೆ ಪ್ರದೇಶಗಳಲ್ಲಿ ಹಬ್ಬದಂತೆ ಎಚ್ಚರ ಹಾಗೂ ಕಟ್ಟು ನಿಟ್ಟಾಗಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ ಎಂದರು.
ಶಿವಾಜಿನಗರ, ಥಣಿಸಂದ್ರ, ಕಾಡುಗೊಂಡನಹಳ್ಳಿ , ದೇವರ ಜೀವನಹಳ್ಳಿ, ಜೆಜೆ ನಗರ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲು ಪೊಲೀಸ್ ಆಯುಕ್ತರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು. ಪಾದರಾಯನಪುರ ಪ್ರಕರಣದಲ್ಲಿ 5o ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿರುವ ಬಗ್ಗೆ ಗೃಹ ಸಚಿವರಿಗೆ ಪೊಲೀಸ್ ಆಯುಕ್ತರು ಮಾಹಿತಿ ನೀಡಿದರು.