ಮಾದನಹಿಪ್ಪರಗಿ: ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಲಾಭ ಪಡೆಯಲು ಎಲ್ಲ ರೈತರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮಾಡಿರುವ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ತಮ್ಮ ಕೆವೈಸಿಯನ್ನು ನೋಂದಣಿ ಮಾಡಿಕೊಳ್ಳುವಂತೆ ಪ್ರಗತಿಪರ ರೈತ ಬಸವಂತರಾಯ ಗೋಟಾಳೆ ಹೇಳಿದರು.
ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಕರೆದ ಪ್ರಗತಿ ಬಂಧು ಸಂಘಗಳ ಸಭೆಯಲ್ಲಿ ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡಿದರು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಲಾಭವನ್ನು ಎಲ್ಲ ರೈತರು ಪಡೆದು ಆರ್ಥಿಕವಾಗಿ ಸುಧಾರಿಸಬಹುದು ಎಂದರು.
ವಲಯ ಮೇಲ್ವಿಚಾರಕ ದೊಡ್ಡಬಸವರಾಜು ಮಾತನಾಡಿ, ರಾಷ್ಟ್ರೀಯ ವಿಮಾ ಯೋಜನೆ, ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಮತ್ತು ಮಾರ್ಪಡಿಸಿದ ಕೃಷಿ ವಿಮಾ ಯೋಜನೆಗಳನ್ನು ಮರಳಿ ತಂದ ನಂತರ ಭಾರತ ಸರ್ಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಪ್ರಾರಂಭಿಸಿದೆ. ವಿಮೆ ಹಣ ಗಳಿಸುವ ಸಾಧನವಲ್ಲ. ಆದರೆ ಆರ್ಥಿಕ ವಿಪತ್ತನ್ನು ಉಂಟು ಮಾಡಬಹುದಾದ ಅನಿರೀಕ್ಷಿತ ನಷ್ಟಗಳಿಗೆ ಅಥವಾ ವ್ಯಾಪಾರವನ್ನು ಸರಿದೂಗಿಸಲು ಸಹಾಯ ಮಾಡುವ ಸಾಧನವಾಗಿದೆ ಎಂದು ವಿವರಿಸಿದರು.
ಮುಂಗಾರು ಬೆಳೆಗಳಾದ ಎಲ್ಲ ಆಹಾರ ಧಾನ್ಯ, ಎಣ್ಣೆಕಾಳು ಬೆಳೆಗಳಿಗೆ ರೈತರು ಶೇ.2 ವಿಮೆ ಮೊತ್ತ ಪಾವತಿಸಬೇಕಾಗುತ್ತದೆ. ಹಿಂಗಾರಿನ ಧಾನ್ಯ, ಎಣ್ಣೆಕಾಳುಗಳು ಬೆಳೆಗಳಿಗೆ ಶೇ. 1.5ರಷ್ಟು, ಹಿಂಗಾರು, ಮುಂಗಾರು ವಾರ್ಷಿಕ ವಾಣಿಜ್ಯ ಮತು ವಾರ್ಷಿಕ ತೋಟಗಾರಿಕೆ ಬೆಳೆಗಳು ದೀರ್ಘಕಾಲಿಕ ತೋಟಗಾರಿಕೆಗಳು ಶೇ.5ರಷ್ಟು ವಿಮೆ ಕಂತು ಪಾವತಿಸಬೇಕಾಗುತ್ತದೆ. ಉಳಿದ ಪ್ರಿಮೀಯಂನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರವು ಸಮಾನವಾಗಿ ಪಾವತಿಸುತ್ತದೆ ಎಂದು ಮಾಹಿತಿ ನೀಡಿದರು.
ರೈತರಾದ ಹಣಮಂತ ಪ್ಯಾಟಿ, ಗಣೇಶ ಓನಮಶೆಟ್ಟಿ, ಪ್ರಗತಿ ಬಂಧು ಸಂಘಗಳ ಒಕ್ಕೂಟದ ಅಧ್ಯಕ್ಷ ಅಶೋಕ ತೋಳನೂರ, ಕ್ಷೇತ್ರ ಸಹಾಯಕ ಜಬಾಡೆ ಉಮೇಶ, ಪರಮೇಶ್ವರ ಭೂಸನೂರ ಸೇವಾ ಪ್ರತಿನಿಧಿಗಳಾದ ಸುನಂದಾ ಕಂಬಾರ, ಬನಶಂಕರಿ ಸಿಂಗಶೆಟ್ಟಿ, ಶಾಂತಬಾಯಿ ಕೋಣದೆ, ಪುಷ್ಟಲತಾ ಸಕ್ಕರಗಿ, ಸಂತೋಷಿ ಭೂಸನೂರ, ಗಿರೀಶ ಸಕ್ಕರಗಿ, ನಾಗೇಶ ಗೌಡಗಾಂವ್ ಇದ್ದರು.