ಜಗಳೂರು: ಕೃಷಿ ವಲಯವನ್ನು ಪ್ರೋತ್ಸಾಹಿಸಲು ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಅವುಗಳ ಲಾಭ ಪಡೆದುಕೊಳ್ಳಲು ರೈತರು ಹಿಂದೇಟು ಹಾಕುತ್ತಿದ್ದಾರೆ ಎಂದು ಶಾಸಕ ಎಚ್.ಪಿ.ರಾಜೇಶ್ ಕಳವಳ ವ್ಯಕ್ತಪಡಿಸಿದರು. ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಸೋಮವಾರ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಉಚಿತ ಮಣ್ಣಿನ ಪರೀಕ್ಷೆ, ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಸ್ಪಿಂಕ್ಲರ್, ಯಂತ್ರೋಪಕರಣ ಯೋಜನೆ, ಕೃಷಿಭಾಗ್ಯ ಯೋಜನೆ, ಬೆಳೆ ವಿಮೆ, ಪರಂಪರಾಗತ ಕೃಷಿ ವಿಕಾಸ ಯೋಜನೆ, ಲಘು ನೀರಾವರಿ ಯೋಜನೆ, ಕೃಷಿ ಯಂತ್ರಧಾರೆ, ಸಸ್ಯ ಸಂರಕ್ಷಣೆ ಯೋಜನೆ, ನಷ್ಟಪರಿಹಾರ ಸೇರಿದಂತೆ ಮತ್ತಿತರರ ಯೋಜನೆಗಳು ಕೃಷಿ ಇಲಾಖೆಯಲ್ಲಿವೆ ಎಂದರು.
ಆದರೆ ಬಹುತೇಕ ರೈತರು ಇಂತಹ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದೆ ಬರುತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಸರ್ಕಾರದ ಯೋಜನೆಗಳ ಪ್ರಯೋಜನವನ್ನು ರೈತರಿಗೆ ಆಗಬೇಕಿದೆ. ಹೀಗಾಗಿ “ಸರ್ಕಾರ ಕೃಷಿ ಇಲಾಖೆ ನಡೆಗೆ ರೈತರ ಮನೆ ಬಾಗಿಲಿಗೆ’ ಎಂಬ ಘೋಷವಾಕ್ಯದೊಂದಿಗೆ ಇಂತಹ ಅಭಿಯಾನದ ಮೂಲಕ ಯೋಜನೆಗಳನ್ನು ಪ್ರಚಾರ ಮಾಡುವುದಲ್ಲದೇ ಕೃಷಿ ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮನವರಿಕೆ,
-ಕೃಷಿ ಹಾಗೂ ಬೇಸಾಯ ಸಂಬಂಧಿಧಿತ ಸಮಗ್ರ ಕೃಷಿ ಮಾಹಿತಿಯನ್ನು ರೈತರಿಗೆ ತಲುಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಕಳೆದ ವರ್ಷ ಮುಂಗಾರಿನಲ್ಲಿ 4319 ಮಂದಿ ಬೆಳೆ ವಿಮೆ ಪಾವತಿಸಿದ್ದರು. ಅದರಲ್ಲಿ 2700 ಮಂದಿಗೆ ಸುಮಾರು 7.12ಕೋಟಿ ರೂ. ಬೆಳೆ ವಿಮೆ ಬಿಡುಗಡೆಯಾಗಿದೆ. ಬೆಳೆ ವಿಮೆ ಅತ್ಯುತ್ತಮ ಯೋಜನೆ ಇದಾಗಿದ್ದು ಇದರ ಪ್ರಯೋಜನೆ ಪ್ರತಿಯೊಬ್ಬರು ಪಡೆದುಕೊಳ್ಳಬೇಕು.
ತಪ್ಪದೇ ಬೆಳೆ ವಿಮೆ ಮಾಡಿಸಬೇಕೆಂದು ಇದೇ ಸಂದರ್ಭದಲ್ಲಿ ರೈತರಿಗೆ ಅವರು ಕರೆ ನೀಡಿದರು. ಉಪನಿರ್ದೇಶಕಿ ಕೆ.ಸ್ಫೂರ್ತಿ ಮಾತನಾಡಿ, ಕಳೆದ ವರ್ಷದ ಮುಂಗಾರು ಹಂಗಾಮಿನ ಬೆಳೆ ವಿಮೆ ರೈತರ ಖಾತೆಗೆ ಈಗಾಗಲೇ ಬಿಡುಗಡೆಯಾಗಿದ್ದು ಇನ್ನೇರಡು ತಿಂಗಳಲ್ಲಿ ಹಿಂಗಾರು ಬೆಳೆ ವಿಮೆ ಪಾವತಿಯಾಗಲಿದೆ.
ಜಗಳೂರು ತಾಲೂಕಿನಲ್ಲಿ 56 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಅದರಲ್ಲಿ 31 ಸಾವಿರ ಹೆಕ್ಟರ್ ಮೆಕ್ಕೆಜೋಳ, 10 ಸಾವಿರ ಹೆಕ್ಟರ್ ಶೇಂಗಾ ಬಿತ್ತನೆ ಗುರಿ ಹೊಂದಲಾಗಿದೆ. ರೈತರಿಗೆ ಬಿತ್ತನೆಗೆ ಬೇಕಾಗುವ ಅಗತ್ಯ ಬಿತ್ತನೆ ಬೀಜವನ್ನು ದಾಸ್ತಾನು ಮಾಡಲಾಗಿದ್ದು, ಸಾಮಾನ್ಯ ರೈತರಿಗೆ ಶೇ.50ರಷ್ಟು ಪರಿಶಿಷ್ಟರಿಗೆ ಶೇ.75ರಷ್ಟು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜಗಳೂರು ತಾಲೂಕಿನಲ್ಲಿ 12 ಸಾವಿರ ಮಂದಿ ರೈತರ ಮಣ್ಣಿನ ಆರೋಗ್ಯ ಕಾರ್ಡ್ ಸಿದ್ದವಾಗಿದ್ದು, ಕೃಷಿ ಅಭಿಯಾನದಲ್ಲಿ ಅರ್ಹ ರೈತರಿಗೆ ವಿತರಿಸುವುದಲ್ಲದೇ ಅನುಸರಿಸುವ ಕ್ರಮದ ಬಗ್ಗೆ ಮಾಹಿತಿ ಒದಗಿಸಲಾಗುವುದು ಎಂದರು. ತಹಶೀಲ್ದಾರ್ ಶ್ರೀಧರಮೂರ್ತಿ, ತಾಪಂ. ಇಒ ಬಿ.ಲಕ್ಷಿಪತಿ, ಸಹಾಯಕ ಕೃಷಿ ನಿರ್ದೇಶಕ ಕೆ.ಟಿ.ಬಸಣ್ಣ, ಕೃಷಿ ಅಧಿಕಾರಿಗಳಾದ ಗೋವಿಂದನಾಯ್ಕ, ಉಮೇಶ್, ಸಿಬ್ಬಂದಿಗಳಾದ ನಾಗೇಶಗೌಡ ಸೇರಿದಂತೆ ಮತ್ತಿತರರಿದ್ದರು.