Advertisement

ನೀರಿನ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಿ

07:20 AM Jun 24, 2020 | Lakshmi GovindaRaj |

ಹಾಸನ: ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಎಲ್ಲ ತಾಲೂಕುಗಳ ತಹಶೀಲ್ದಾರರಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ  ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಭೆಯಲ್ಲಿ ಮಾತನಾಡಿದರು.

Advertisement

ಎಲ್ಲ ಗ್ರಾಮಗಳಿಗೆ ಪೈಪ್‌ಲೈನ್‌ ಮೂಲಕ ನೀರು ಪೂರೈಕೆ ಮಾಡಬೇಕು. ತುರ್ತು ಅಗತ್ಯವಿರುವ ಗ್ರಾಮಗಳಿಗೆ ಟ್ಯಾಂಕರ್‌ಗಳ  ಮೂಲಕ ನೀರು ಪೂರೈಸಬೇಕು ಎಂದು ನಿರ್ದೇಶನ ನೀಡಿದರು. ಹಿಂಗಾರು, ಮುಂಗಾರು ಹಾಗೂ ಬೇಸಿಗೆ ಬೆಳೆಗಳ ಸಮೀಕ್ಷೆ ನಡೆಸಿ ರೈತರು ಬೆಳೆಯುವ ಬೆಳೆಗಳ ಬಗ್ಗೆ ಪೂರಕ ಮಾಹಿತಿ ನೀಡಬೇಕು ಮತ್ತು ಬೆಳೆದ ಬೆಳೆಗಳ ಕುರಿತು ಮಾಹಿತಿ  ಸಂಗ್ರಹಿಸಬೇಕು.

ಪ್ರಕೃತಿ ವಿಕೋಪದಡಿ ಹಾನಿಗೊಳಗಾಗಿರುವ ಮನೆಗಳಿಗೆ ಪರಿಹಾರ ನೀಡಬೇಕು. ಗಾಳಿ ಮಳೆಗೆ ಶೇ.30ಕ್ಕಿಂತ ಹೆಚ್ಚಿನ ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಕವಿತಾ  ರಾಜಾರಾಂ ಮಾತನಾಡಿ ಎಲ್ಲ ಗ್ರಾಮಗಳ ವ್ಯಾಪ್ತಿಯಲ್ಲಿ ರುದ್ರ ಭೂಮಿ ಗುರುತಿಸಿ. ಇಲ್ಲದೇ ಇರುವ ಕಡೆಗಳಲ್ಲಿ ಖಾಸಗಿ ಜಮೀನು ಖರೀದಿಸಿ ಈ ಉದ್ದೇಶಕ್ಕೆ ಮೀಸಲಿರಿಸಬೇಕು.

ಬಾಕಿ ಉಳಿದಿರುವ ಭೂ ಸ್ವಾಧೀನ ಸ್ಥಳ ಶೀಘ್ರವಾಗಿ  ಇಂಡೀಕರಣಗೊಳಿಸಿ ಎಂದು ನಿರ್ದೇಶಿಸಿದರು. ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದ್ದು, ಸರ್ಕಾರಿ ಕಟ್ಟಡಗಳು ಹಾಗೂ ಶಾಲಾ ಕಟ್ಟಡಗಳ ಕಾಮಗಾರಿಗಳಿಗೆ ಕಾರ್ಯಪಾಲಕ  ಅಭಿಯಂತರರು ಭೇಟಿ ನೀಡಿ ಪರಿಶೀಲಿಸಿ ತುರ್ತಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ಉಪವಿಭಾಗಾಧಿಕಾರಿಗಳಾದ ಡಾ.ನವೀನ್‌ ಭಟ್‌, ಗಿರೀಶ್‌ ನಂದನ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next