ಕುದೂರು: ಹೋಬಳಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ, ಸಾಗಾಟ ನಡೆಯುತ್ತಿದ್ದರೂ ಗಣಿ ಮತ್ತುಭೂ ವಿಜ್ಞಾನ, ಪೊಲೀಸ್, ಕಂದಾಯ ಅಧಿಕಾರಿಗಳು ಮೌನವಾಗಿದ್ದಾರೆ. ಇದನ್ನು ಗಮನಿಸಿದ್ರೆ ಅಕ್ರಮಕ್ಕೆಪರೋಕ್ಷವಾಗಿ ಅಧಿಕಾರಿಗಳೂ ಬೆಂಬಲ ನೀಡುತ್ತಿದ್ದಾರೆಯೇ ಎಂಬ ಅನುಮಾನ ಜನರಲ್ಲಿ ಮೂಡಿಸುತ್ತಿದೆ.
ಹೋಬಳಿಯ ತಮ್ಮೇನಹಳ್ಳಿ ಕೆರೆಯಲ್ಲಿ ಜೆಸಿಬಿ ಯಂತ್ರಬಳಸಿ ಅಕ್ರಮ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ. ಕೆರೆಯಲ್ಲಿ ಆಳೆತ್ತರದ ಗುಂಡಿ ತೆಗೆದು, ಮರಳು ಲೂಟಿಮಾಡಲಾಗುತ್ತಿದೆ. ಬೆಳಗ್ಗೆ 6 ರಿಂದ 9ರವರೆಗೆ ಅಕ್ರಮವಾಗಿಟ್ರ್ಯಾಕ್ಟರ್, ಆಟೋಗಳ ಮೂಲಕ ಮರಳು ಸಾಗಣೆ ಮಾಡಲಾಗುತ್ತಿದೆ.
ಈಗಾಗಲೇ ಅಂತರ್ಜಲ ಬತ್ತಿಹೋಗಿ ಸಾವಿರ ಅಡಿ ಕೊರೆದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.ಪ್ರತಿ ದಿನ ಹೀಗೆ ಮರಳು ತೆಗೆದರೆ ಮುಂದಿನ ದಿನಗಳಲ್ಲಿಹೋಬಳಿ ಬರಡುಭೂಮಿ ಆಗುವುದರಲ್ಲಿ ಸಂದೇಹವಿಲ್ಲ.ಕೂಡಲೇ ಗಣಿ, ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ಅಕ್ರಮ ಮರಳು ಸಾಗಾಟಕ್ಕೆ ಅಂತ್ಯವಾಡಬೇಕಿದೆ.
ತಡೆಯೋರು ಯಾರು: ಕೆರೆಗಳಲ್ಲಿ ಮರಳು, ಮಣ್ಣಿನ ಗುಂಡಿಗಳಿಗೆ ಬಿದ್ದು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ತಮ್ಮೇನಹಳ್ಳಿ ವ್ಯಾಪ್ತಿಯ ಕೆರೆಗಳಲ್ಲಿ ಆಳೆತ್ತರದ ಗುಂಡಿ ತೋಡಿ ಮರಳು ಬರಿದು ಮಾಡಿ, ಸ್ಥಳೀಯರಿಗೂ ಮರಳು ಸಿಗದಂತೆ ಮಾಡಲಾಗಿದೆ.
ವಾರದ ಹಿಂದಷ್ಟೇ ಇಲ್ಲಿನ ಠಾಣೆಯಲ್ಲಿ ಅಧಿಕಾರವಹಿಸಿಕೊಂಡಿದ್ದೇನೆ. ಈ ಬಗ್ಗೆ ನನ್ನ ಗಮನಕ್ಕೆ ಇದುವರೆಗೂ ಬಂದಿರಲಿಲ್ಲ. ಸ್ಥಳ ಪರೀಶಿಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
● ಪುಟ್ಟೇಗೌಡ ಪಿಎಸ್ಸೈ, ಕುದೂರು ಠಾಣೆ