Advertisement

ಚೀನ ಬೆದರಿಕೆಗೆ ತೈವಾನ್‌ ಕೆಂಡಾಮಂಡಲ

12:45 AM Sep 22, 2020 | mahesh |

ಹೊಸದಿಲ್ಲಿ: ಅಮೆರಿಕ ರಾಜತಾಂತ್ರಿಕ ಅಧಿಕಾರಿ ತೈಪೆ ಭೇಟಿ ಮುಗಿಸಿದ ಬೆನ್ನಲ್ಲೇ ತೈವಾನ್‌, ಚೀನಗೆ ಗುಟುರು ಹಾಕಿದೆ. ಬೀಜಿಂಗ್‌ ಹಾಕಿದ್ದ ಮಾರಣಾಂತಿಕ ಬೆದರಿಕೆಗೆ ತಿರುಗೇಟು ನೀಡಿದೆ.

Advertisement

“ದೂರದ ಸ್ನೇಹಿತನೊಬ್ಬ ಔತಣಕ್ಕೆಂದು ಬಂದಾಗ ನೆರೆಮನೆಯವರು ಮಾರಣಾಂತಿಕ ಬೆದರಿಕೆ ಹಾಕಿದರೆ ಅದನ್ನು ಹೇಗೆ ನಿಭಾಯಿಸುವುದು? ಚೀನ ಏಕೆ ಈ ಬಗ್ಗೆ ಅಸಹನೆ ಪಡುತ್ತದೆ?’ ಎಂದು ತೈವಾನ್‌ ಅಧ್ಯಕ್ಷೀಯ ಕಚೇರಿ ವಕ್ತಾರ ಖಾರವಾಗಿ ಪ್ರಶ್ನಿಸಿದ್ದಾರೆ.

“ತೈವಾನ್‌ ಅಧ್ಯಕ್ಷ ತ್ಸಾಯ್‌ ಇಂಗ್‌- ವೆನ್‌, ಅಮೆರಿಕದ ಅಧಿಕಾರಿ ಜತೆ ಔತಣದ ಕೂಟದ ವೇಳೆ ಗಾಢ ಸಂಬಂಧದ ಕುರಿತು ಪ್ರತಿಜ್ಞೆ ಮಾಡಿದರು. ಇದು ಸ್ಪಷ್ಟವಾಗಿ ಬೆಂಕಿ ಜತೆಗಿನ ಸರಸ. ಚೀನದ ಪ್ರತ್ಯೇಕತಾ ವಿರೋಧಿ ಕಾನೂನಿನ ಉಲ್ಲಂಘನೆಯನ್ನು ಪ್ರಚೋದಿಸಿದ್ದೇ ಆದಲ್ಲಿ ತೈವಾನ್‌ ಮೇಲೆ ಯುದ್ಧವನ್ನೇ ಸಾರಬೇಕಾಗುತ್ತದೆ. ತ್ಸಾಯ್‌ ನಾಶವಾಗಲಿದ್ದಾರೆ’ ಎಂಬ “ಗ್ಲೋಬಲ್‌ ಟೈಮ್ಸ್‌’ನ ಹೇಳಿಕೆಗೆ ತೈವಾನ್‌ ಹೀಗೆ ಪ್ರತಿಕ್ರಿಯಿಸಿದೆ. “ಅಮೆರಿಕದ ಉನ್ನತ ರಾಜತಾಂತ್ರಿಕ ಅಧಿಕಾರಿ ಕೀತ್‌ ಕ್ರಾಚ್‌ ಭೇಟಿ, ಅಮೆರಿಕ- ತೈವಾನ್‌ ಸಂಬಂಧವನ್ನು ಬಲಪಡಿಸಿದೆ. ಇಂಡೋ- ಪೆಸಿಫಿಕ್‌ ವಲಯದಲ್ಲಿ ಧನಾತ್ಮಕ ಪರಿಣಾಮಗಳನ್ನು ಬೀರಲಿದೆ’ ಎಂದು ತೈವಾನ್‌ ಹೇಳಿದೆ. ಕ್ರಾಚ್‌ ಕೈಗೊಂಡಿದ್ದ 3 ದಿನಗಳ ತೈಪೆ ಪ್ರವಾಸದ ವೇಳೆ ಚೀನದ ಡಿಹಲವು ಯುದ್ಧ ವಿಮಾನಗಳು ತೈವಾನ್‌ ದ್ವೀಪಗಳ ಸಮೀಪ ಅಬ್ಬರಿಸಿದ್ದವು.

5 ಅಂಶಗಳ ಒಪ್ಪಂದ ಜಾರಿಗೆ ಚರ್ಚೆ
ಚುಶುಲ್‌ ಗಡಿ ಪೋಸ್ಟ್‌ನಲ್ಲಿ ಭಾರತ-ಚೀನ ನಡುವೆ 6ನೇ ಸುತ್ತಿನ ಕಾರ್ಪ್ಸ್ ಕಮಾಂಡರ್‌ಗಳ ಮಟ್ಟದ ಸಭೆ ಸೋಮವಾರ ನಡೆಯಿತು. 5 ಅಂಶಗಳ ಒಪ್ಪಂದವನ್ನು ನಿರ್ದಿಷ್ಟ ಸಮಯದೊಳಗೆ ಅನುಷ್ಠಾನಗೊಳಿಸುವ ಸಂಬಂಧ ಚರ್ಚೆಗಳು ನಡೆದಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಮಾಸ್ಕೋದಲ್ಲಿ ಇತ್ತೀಚೆಗೆ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಸಭೆಯಲ್ಲಿ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರ ನಡುವೆ 5 ಅಂಶಗಳ ಒಪ್ಪಂದ ಏರ್ಪಟ್ಟಿತ್ತು. ವಿವಾದಿತ ಗಡಿಪ್ರದೇಶಗಳಿಂದ 4 ತಿಂಗಳೊಳಗೆ ಸೇನೆ ವಾಪಸು ತೆಗೆದುಕೊಳ್ಳುವುದು, ಉದ್ವಿಗ್ನತೆ ತಗ್ಗಿಸಲು ಕ್ರಮ ಕೈಗೊಳ್ಳುವುದು, ಹಿಂದಿನ ಎಲ್ಲ ಒಪ್ಪಂದಗಳನ್ನು ಗೌರವಿಸುವುದು, ಪ್ರೊಟೊಕಾಲ್‌ ಪಾಲನೆ, ಎಲ್‌ಎಸಿಯಲ್ಲಿ ಶಾಂತಿ ಸ್ಥಾಪಿಸಲು ಮುಂದಾಗುವುದು-ಈ ಕುರಿತಾಗಿ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next