ಬಾರ್ಬಡೋಸ್: ಅಂತಾರಾಷ್ಟ್ರೀಯ ಟಿ20 ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಭಾರತದ ಸೂರ್ಯಕುಮಾರ್ ಯಾದವ್ ಅವರು ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಅಫ್ಘಾನಿಸ್ತಾನ ವಿರುದ್ದ ಸೂಪರ್ 8 ಹಂತದ ಮೊದಲ ಪಂದ್ಯದಲ್ಲಿ ನಿರ್ಣಾಯಕ ಅರ್ಧ ಶತಕ ಬಾರಿಸಿದ್ದ ಸೂರ್ಯಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಪಡೆದಿದ್ದರು.
ಸೂರ್ಯಕುಮಾರ್ ಯಾದವ್ ಅವರು ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಅವರನ್ನು ವಿಶ್ವದ ಶ್ರೇಷ್ಠ ಬೌಲರ್ ಎಂದು ಬಣ್ಣಿಸಿದ್ದಾರೆ. ಅಫ್ಘಾನ್ ವಿರುದ್ದ ಪಂದ್ಯದಲ್ಲಿ 53 ರನ್ ಗಳಿಸಿದ್ದ ಸೂರ್ಯ, ರಶೀದ್ ಎದುರು ಆರು ಎಸೆತಗಳಲ್ಲಿ 16 ರನ್ ಬಾರಿಸಿದ್ದರು. ಅವರು ವಿಶ್ವದ ಅತ್ಯುತ್ತಮ ಬೌಲರ್ ಎಂದು ಪರಿಗಣಿಸುವ ಆಟಗಾರನ ವಿರುದ್ಧ ಪ್ರಾಬಲ್ಯವನ್ನು ಪ್ರತಿಪಾದಿಸುವ ಅಗತ್ಯವನ್ನು ಎತ್ತಿ ತೋರಿಸಿದರು.
“ನಾನು ಇದನ್ನು ಮೊದಲೇ ಹೇಳಿದ್ದೇನೆ. ರಶೀದ್ ಬೌಲಿಂಗ್ ಮಾಡುವಾಗ ಅದನ್ನು ಪಿಕ್ ಮಾಡುವುದು ತುಂಬಾ ಕಷ್ಟ. ಅವರು ವಿಶ್ವದ ಅತ್ಯುತ್ತಮ ಬೌಲರ್. ಆತ ನಿಮ್ಮನ್ನು ಮೀರಿಸಲು ಬಿಡಬಾರದು, ಇಂದು ನಾನು ಆತನೆದುರು ಉತ್ತಮವಾಗಿರುವಲ್ಲಿ ಯಶಸ್ವಿಯಾದೆ ಎಂದು ಸಂತೋಷವಾಗಿದೆ” ಎಂದು ಸೂರ್ಯಕುಮಾರ್ ಹೇಳಿದರು.
ಬಾರ್ಬಡೋಸ್ ನಲ್ಲಿ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 181 ರನ್ ಗಳಿಸಿತ್ತು. ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಉತ್ತಮ ಬ್ಯಾಟಿಂಗ್ ಮಾಡಿ ತಂಡವನ್ನು ಆಧರಿಸಿದ್ದರು.
ಗುರಿ ಬೆನ್ನತ್ತಿದ ಅಫ್ಘಾನ್ ತಂಡವು 134 ರನ್ ಗಳಿಗೆ ಆಲೌಟಾಗಿತ್ತು. ಕೇವಲ ಏಳು ರನ್ ನೀಡಿದ್ದ ಬುಮ್ರಾ ಮೂರು ವಿಕೆಟ್ ಕಿತ್ತು ತಂಡಕ್ಕೆ ನೆರವಾಗಿದ್ದರು. ಭಾರತವು 47 ರನ್ ಅಂತರದಿಂದ ಗೆಲುವು ಸಾಧಿಸಿತ್ತು.