ಗ್ರಾಸ್ ಐಲೆಟ್: ಕಷ್ಟಪಟ್ಟು ಸೂಪರ್ 8 ಹಂತಕ್ಕೆ ಬಂದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ಇದೀಗ ನೈಜ ಆಟ ಪ್ರದರ್ಶಿಸುತ್ತಿದೆ. ವೆಸ್ಟ್ ಇಂಡೀಸ್ ವಿರುದ್ದ ನಡೆದ ಸೂಪರ್ 8ನ ಮೊದಲ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದ ಸುಲಭ ಗೆಲುವು ಸಾಧಿಸಿದೆ.
ಸೈಂಟ್ ಲೂಸಿಯಾದ ಗ್ರಾಸ್ ಐಲೆಟ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ನಾಲ್ಕು ವಿಕೆಟ್ ನಷ್ಟಕ್ಕೆ 180 ರನ್ ಮಾಡಿದರೆ, ಇಂಗ್ಲೆಂಡ್ ತಂಡವು 17.3 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಗುರಿ ತಲುಪಿ ಜಯ ಸಾಧಿಸಿತು.
ವಿಂಡೀಸ್ ಪರ ಬ್ಯಾಟಿಂಗ್ ಆರಂಭಿಸಿದ ಬ್ರೆಂಡನ್ ಕಿಂಗ್ ಮತ್ತು ಜೊನಾಥನ್ ಚಾರ್ಲ್ಸ್ ಉತ್ತಮ ಆರಂಭ ಒದಗಿಸಿದರು. ಚಾರ್ಲ್ಸ್ 38 ರನ್ ಮಾಡಿದರೆ, ಕಿಂಗ್ 23 ರನ್ ಗೆ ರಿಟೈರ್ಡ್ ಔಟಾದರು. ಪೂರನ್ 36 ರನ್ ಮಾಡಿದರು. ನಾಯಕ ಪೊವೆಲ್ ಐದು ಸಿಕ್ಸರ್ ನೆರವಿನಿಂದ 36 ರನ್ ಮಾಡಿದರು. ಕೊನೆಯಲ್ಲಿ ರುದರ್ ಫೋರ್ಡ್ 28 ರನ್ ಗಳಿಸಿದರು.
ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಫಿಲ್ ಸಾಲ್ಟ್ ಆಧಾರವಾದರು. 47 ಎಸೆತ ಎದುರಿಸಿದ ಸಾಲ್ಟ್ ಅಜೇಯ 87 ರನ್ ಗಳಿಸಿದರು. ನಾಯಕ ಬಟ್ಲರ್ 25 ರನ್ ಮತ್ತು ಜಾನಿ ಬೇರಿಸ್ಟೋ 26 ಎಸೆತದಲ್ಲಿ ಅಜೇಯ 48 ರನ್ ಗಳಿಸಿದರು.