Advertisement
ವಿಪರ್ಯಾಸವೆಂದರೆ, ಭಾರತದ ಅಭಿಮಾನಿ ಗಳಿನ್ನೂ ಫೈನಲ್ ಸೋಲಿನ ಆಘಾತದಿಂದ ಚೇತರಿಸಿ ಕೊಂಡಿಲ್ಲ. ಇನ್ನೊಂದೆಡೆ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಕ್ಕೆ ಸಂಭ್ರಮಾಚರಣೆ ನಡೆಸಲು ಸಮಯವಿಲ್ಲ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಬಿಡುವೆಂಬುದಿಲ್ಲ! ವಿಶ್ವಕಪ್ ಫೈನಲ್ ಮುಗಿದ 96 ಗಂಟೆಗಳಲ್ಲೇ ಇನ್ನೊಂದು ಅವಸರದ ಸರಣಿಯ ಅಗತ್ಯ ಏನಿತ್ತು ಎಂಬ ಪ್ರಶ್ನೆಯೂ ಇಲ್ಲಿ ಉದ್ಭವಿಸಿದೆ. ಸರಣಿಯ ಮಾದರಿ ಬೇರೆ ಇರಬಹುದು, ಆದರೆ ಪ್ರಸ್ತುತ ಸ್ಥಿತಿಯಲ್ಲಿ ಇದು ತಂದೊಡ್ಡಿರುವ ಸವಾಲು, ಒತ್ತಡ ನಿಜಕ್ಕೂ ವಿಪರೀತ.ಫೈನಲ್ ಸೋಲಿಗೆ ಏನು ಕಾರಣ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಹೊತ್ತಿ ನಲ್ಲಿ ಯಂಗ್ ಇಂಡಿಯಾ ಮತ್ತದೇ ಆಸ್ಟ್ರೇಲಿಯ ವಿರುದ್ಧ ಎಡವಿದರೆ ನಿಜಕ್ಕೂ ಭಾರತೀಯ ಕ್ರಿಕೆಟ್ ಪಾಲಿಗೆ ಗಾಯದ ಮೇಲೆ ದೊಡ್ಡ ಬರೆ ಬೀಳಲಿದೆ. ಒಂದು ವೇಳೆ ಸರಣಿ ಗೆದ್ದರೂ ಅದೊಂದು ಮಹಾಸಂಭ್ರಮವೆನಿಸದು. ಏಕೆಂದರೆ ವಿಶ್ವಕಪ್ ಫೈನಲ್ ಸೋಲಿಗೆ ಟಿ20 ಸರಣಿ ಗೆಲುವು ಯಾವ ವಿಧದದಲ್ಲೂ ಸಾಟಿಯಾಗದು.
ಇರಲಿ. ಈ ಸರಣಿಯ ಉದ್ದೇಶ ದೊಡ್ಡದೇ ಇದೆ. ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಸಶಕ್ತ ತಂಡವೊಂದನ್ನು ಕಟ್ಟಿ ಬೆಳೆಸುವ ಸಲುವಾಗಿ ಇಲ್ಲಿ ಐಪಿಎಲ್ ಹೀರೋಗಳನ್ನು ಒಳಗೊಂಡಿರುವ ಯುವ ಪಡೆಯನ್ನು ಅಖಾಡಕ್ಕೆ ಇಳಿಸಲಾಗಿದೆ. ಭಾರತದಲ್ಲಿರುವ ಪ್ರತಿಭಾನ್ವಿತರ ಟಿ20 ತಂಡ ಇದೆಂಬುದನ್ನು ಒಪ್ಪಲೇಬೇಕು. ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ತಿಲಕ್ ವರ್ಮ, ಜಿತೇಶ್ ಶರ್ಮ ಅವರೆಲ್ಲ ಕಳೆದ ಕೆಲವೇ ದಿನಗಳ ಅಂತರದಲ್ಲಿ ಟಿ20 ಕ್ರಿಕೆಟಿಗೆ ಪದಾರ್ಪಣೆ ಮಾಡಿದವರು. ರೋಹಿತ್, ಕೊಹ್ಲಿ, ರಾಹುಲ್ ಅವರೆಲ್ಲ 2022ರ ಟಿ20 ವಿಶ್ವಕಪ್ ಸೆಮಿಫೈನಲ್ ಬಳಿಕ ಭಾರತವನ್ನು ಪ್ರತಿನಿಧಿಸಿಲ್ಲ. ಚುಟುಕು ಮಾದರಿ ಕ್ರಿಕೆಟ್‌ನಿಂದ ಬೇರ್ಪಡಲಿರುವ ಇನ್ನೂ ಕೆಲವು ಆಟಗಾರರು ನಮ್ಮಲ್ಲಿದ್ದಾರೆ. ಹೀಗಾಗಿ ಭಾರತದ ಟಿ20 ಭವಿಷ್ಯವೀಗ ಐಪಿಎಲ್ ಹೀರೋಗಳ ಕೈಯಲ್ಲಿದೆ ಎಂದೇ ತೀರ್ಮಾನಿಸಬೇಕಾಗುತ್ತದೆ. ಈ ತಂಡಕ್ಕೀಗ ಬಲಿಷ್ಠ ಆಸ್ಟ್ರೇಲಿಯ ಎದುರು ಮೊದಲ ಅಗ್ನಿಪರೀಕ್ಷೆ ಎದುರಾಗಿದೆ. ಹಾಗೆಯೇ ರೋಹಿತ್ ಶರ್ಮ ಬಳಗದ ಫೈನಲ್ ಸೋಲನ್ನು ಸ್ವಲ್ಪ ಮಟ್ಟಿಗಾದರೂ ಮರೆಸುವ ಪ್ರಯತ್ನ ಸೂರ್ಯಕುಮಾರ್ ಯಾದವ್ ತಂಡದಿಂದ ಆಗಬೇಕಿದೆ.
ಇವರಲ್ಲಿ ಕೆಲವರು ವೆಸ್ಟ್ ಇಂಡೀಸ್, ಐರ್ಲೆಂಡ್, ಏಷ್ಯಾ ಕಪ್‌ನಲ್ಲಿ ಕೆಲವು “ಬಿ’ ದರ್ಜೆ ತಂಡಗಳ ವಿರುದ್ಧ ಮಿಂಚಿದ್ದಾರೆ. ಆಸ್ಟ್ರೇಲಿಯ ವಿರುದ್ಧವೂ ಗಮನಾರ್ಹ ಪ್ರದರ್ಶನ ನೀಡಿದರೆ ಕೆಲವು ಆಟಗಾರರ ಸ್ಥಾನ ಗಟ್ಟಿಗೊಳ್ಳುವುದರಲ್ಲಿ ಅನುಮಾನವಿಲ್ಲ.
Related Articles
Advertisement
ಎಡಗೈ ಆಟಗಾರರ ದಂಡುಪ್ಲಸ್ ಪಾಯಿಂಟ್ ಎಂದರೆ, ಟಿ20 ಟೀಮ್‌ನಲ್ಲಿ ಎಡಗೈ ಆಟಗಾರರ ದೊಡ್ಡ ದಂಡೇ ಇರುವುದು. ಜೈಸ್ವಾಲ್, ಕಿಶನ್, ತಿಲಕ್, ರಿಂಕು, ಪಟೇಲ್, ದುಬೆ, ವಾಷಿಂಗ್ಟನ್… ಹೀಗೆ 7 ಮಂದಿ ಲೆಫ್ಟಿಗಳಿದ್ದಾರೆ. ಇದನ್ನು ಭಾರತದ ಭಾರತದ ವಿಶ್ವಕಪ್ ತಂಡಕ್ಕೆ ಹೋಲಿಸಿ ನೋಡಿ. ರೋಹಿತ್ ಪಡೆಯಲ್ಲಿ ಒಬ್ಬನೇ ಒಬ್ಬ ಎಡಗೈ ಸ್ಪೆಷಲಿಸ್ಟ್ ಬ್ಯಾಟರ್ ಇರಲಿಲ್ಲ. ಇಶಾನ್ ಕಿಶನ್ ಇದ್ದರೂ ಗಿಲ್ ಆಗಮನದ ಬಳಿಕ ಬೇರ್ಪಟ್ಟರು. ಜಡೇಜ ಅವರನ್ನು ಆಲ್‌ರೌಂಡರ್ ಆಗಿ ಪರಿಗಣಿಸಲಾಗಿತ್ತು. ಹೀಗಾಗಿ ಟಿ20 ತಂಡದ ಈ ಲೆಫ್ಟಿಗಳಿಂದ ಭಾರತಕ್ಕೆ ಲಾಭವಾದೀತೇ? ಕುತೂಹಲ ಸಹಜ. ಅಪಾಯಕಾರಿ ಹೆಡ್
ಆಸ್ಟ್ರೇಲಿಯದ ಬ್ಯಾಟಿಂಗ್ ಸರದಿ ವಿಶ್ವಕಪ್ ಫೈನಲ್ ಹೀರೋ ಟ್ರ್ಯಾವಿಸ್ ಹೆಡ್ ಅವರನ್ನು ಒಳಗೊಂಡಿದೆ. ಜತೆಗೆ ಸ್ಮಿತ್, ಮ್ಯಾಕ್ಸ್‌ವೆಲ್, ನಾಯಕ ವೇಡ್, ಇಂಗ್ಲಿಸ್, ಡೇವಿಡ್, ಶಾರ್ಟ್ ಉಳಿದ ಪ್ರಮುಖರು. ಇವರಿಗೆ ಹೋಲಿಸಿದರೆ ಭಾರತದ ಬೌಲಿಂಗ್ ಸಾಮರ್ಥ್ಯ ಸಾಲದೆಂದೇ ಹೇಳಬೇಕಾಗುತ್ತದೆ. ಅರ್ಷದೀಪ್, ಪ್ರಸಿದ್ಧ್ ಕೃಷ್ಣ, ಮುಕೇಶ್, ಬಿಷ್ಣೋಯಿ, ಆವೇಶ್, ವಾಷಿಂಗ್ಟನ್ ಅವರೆಲ್ಲ ಸಾಮರ್ಥ್ಯಕ್ಕೂ ಮೀರಿದ ಪ್ರದರ್ಶನ ನೀಡಿ ಕಾಂಗರೂ ಪಡೆಯ ಮೇಲೆ ಒತ್ತಡ ಹೇರಬೇಕಾದುದು ಅನಿವಾರ್ಯ. ಸಂಭಾವ್ಯ ತಂಡಗಳು
ಭಾರತ: ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್/ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ/ಆವೇಶ್ ಖಾನ್, ಮುಕೇಶ್ ಕುಮಾರ್. ಆಸ್ಟ್ರೇಲಿಯ: ಸ್ಟೀವನ್ ಸ್ಮಿತ್, ಮ್ಯಾಥ್ಯೂ ಶಾರ್ಟ್, ಆರನ್ ಹಾರ್ಡಿ, ಜೋಶ್ ಇಂಗ್ಲಿಸ್, ಮಾರ್ಕಸ್ ಸ್ಟೋಯಿನಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ನಾಯಕ), ಸೀನ್ ಅಬೋಟ್, ನಥನ್ ಎಲ್ಲಿಸ್, ಜೇಸನ್ ಬೆಹೆÅಂಡಾಫ್ì, ತನ್ವೀರ್ ಸಂಘಾ.