Advertisement

T20; ಇನ್ನೂರು ರನ್ನುಗಳ ಮೇಲಾಟ: ಕಿವೀಸ್‌ ಮೊತ್ತಕ್ಕೆ ಆಸೀಸ್‌ ಸೆಡ್ಡು

11:12 PM Feb 21, 2024 | Team Udayavani |

ವೆಲ್ಲಿಂಗ್ಟನ್‌: ಬೃಹತ್‌ ಮೊತ್ತದ ಟಿ20 ಮೇಲಾಟದಲ್ಲಿ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ 6 ವಿಕೆಟ್‌ಗಳಿಂದ ಆತಿಥೇಯ ನ್ಯೂಜಿಲ್ಯಾಂಡ್‌ ತಂಡವನ್ನು ಕೆಡವಿದೆ.

Advertisement

ವೆಲ್ಲಿಂಗ್ಟನ್‌ನ “ಸ್ಕೈ ಸ್ಟೇಡಿಯಂ’ನಲ್ಲಿ ಬುಧವಾರ ನಡೆದ ಮುಖಾಮುಖೀಯಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ನ್ಯೂಜಿಲ್ಯಾಂಡ್‌ 3 ವಿಕೆಟಿಗೆ 215 ರನ್‌ ರಾಶಿ ಹಾಕಿದರೆ, ಇದನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ಆಸ್ಟ್ರೇಲಿಯ 4 ವಿಕೆಟ್‌ ಕಳೆದುಕೊಂಡು ಅಂತಿಮ ಎಸೆತದಲ್ಲಿ ಗೆಲುವಿನ ರನ್‌ ಬಾರಿಸಿತು.

ಕೊನೆಯ 2 ಓವರ್‌ಗಳಲ್ಲಿ 35 ರನ್‌, ಟಿಮ್‌ ಸೌಥಿ ಪಾಲಾದ 20ನೇ ಓವರ್‌ನಲ್ಲಿ 16 ರನ್ನುಗಳ ಕಠಿನ ಸವಾಲು ಆಸೀಸ್‌ಗೆ ಎದುರಾಗಿತ್ತು. ಕ್ರೀಸ್‌ನಲ್ಲಿದ್ದವರು ನಾಯಕ ಮಿಚೆಲ್‌ ಮಾರ್ಷ್‌ ಮತ್ತು ಟಿಮ್‌ ಡೇವಿಡ್‌. ಆ್ಯಡಂ ಮಿಲೆ° ಅವರ 19ನೇ ಓವರ್‌ನಲ್ಲಿ 19 ರನ್‌ ಬಾರಿಸಿದ ಆಸೀಸ್‌ ಸಿಡಿದು ನಿಂತಿತು. ಟಿಮ್‌ ಸೌಥಿ ಪಾಲಾದ ಕೊನೆಯ ಓವರ್‌ನಲ್ಲೂ ರನ್‌ ಸರಾಗವಾಗಿ ಹರಿದು ಬಂತು. ಅಂತಿಮ ಎಸೆತದಲ್ಲಿ ಬೌಂಡರಿ ಸವಾಲು ಎದುರಾಯಿತು. ಟಿಮ್‌ ಡೇವಿಡ್‌ ಫೋರ್‌ ಹೊಡೆದು ಆಸೀಸ್‌ ಜಯವನ್ನು ಸಾರಿದರು.

ಮಿಚೆಲ್‌ ಮಾರ್ಷ್‌ 44 ಎಸೆತಗಳಿಂದ ಅಜೇಯ 72 ರನ್‌ ಬಾರಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಸಿಡಿಸಿದ್ದು 7 ಸಿಕ್ಸರ್‌ ಹಾಗೂ 2 ಫೋರ್‌. ಟಿಮ್‌ ಡೇವಿಡ್‌ 10 ಎಸೆತ ಎದುರಿಸಿ ಅಜೇಯ 31 ರನ್‌ ಹೊಡೆದರು (2 ಬೌಂಡರಿ, 3 ಸಿಕ್ಸರ್‌). ಡೇವಿಡ್‌ ವಾರ್ನರ್‌ 32, ಗ್ಲೆನ್‌ ಮ್ಯಾಕ್ಸ್‌ವೆಲ್‌ 25, ಟ್ರ್ಯಾವಿಸ್‌ ಹೆಡ್‌ 24 ಮಾಡಿದರು.

ರಚಿನ್‌ ಬ್ಯಾಟಿಂಗ್‌ ಅಬ್ಬರ
ನ್ಯೂಜಿಲ್ಯಾಂಡ್‌ ಸರದಿಯಲ್ಲಿ ಅಬ್ಬರಿಸಿದವರು ರಚಿನ್‌ ರವೀಂದ್ರ ಮತ್ತು ಡೇವನ್‌ ಕಾನ್ವೇ. 35 ಎಸೆತಗಳಲ್ಲಿ 68 ರನ್‌ ಬಾರಿಸಿದ ರಚಿನ್‌ ರವೀಂದ್ರ ಟಾಪ್‌ ಸ್ಕೋರರ್‌ (6 ಸಿಕ್ಸರ್‌, 2 ಬೌಂಡರಿ). ಕಾನ್ವೇ 46 ಎಸೆತಗಳಿಂದ 63 ರನ್‌ ಹೊಡೆದರು (5 ಬೌಂಡರಿ, 2 ಸಿಕ್ಸರ್‌).
ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-3 ವಿಕೆಟಿಗೆ 215 (ರಚಿನ್‌ 68, ಕಾನ್ವೇ 63, ಅಲೆನ್‌ 32). ಆಸ್ಟ್ರೇಲಿಯ-20 ಓವರ್‌ಗಳಲ್ಲಿ 4 ವಿಕೆಟಿಗೆ 216 (ಮಾರ್ಷ್‌ ಔಟಾಗದೆ 72, ವಾರ್ನರ್‌ 32, ಟೇವಿಡ್‌ ಔಟಾಗದೆ 31, ಸ್ಯಾಂಟ್ನರ್‌ 42ಕ್ಕೆ 2).
ಪಂದ್ಯಶ್ರೇಷ್ಠ: ಮಿಚೆಲ್‌ ಮಾರ್ಷ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next