ಬ್ರಿಜ್‌ಟೌನ್: ಪಾಕಿಸ್ಥಾನದ ವೇಗಿ ಮೊಹಮ್ಮದ್ ಇರ್ಫಾನ್ ಟಿ20 ಇತಿಹಾಸದಲ್ಲೇ ಅತ್ಯಂತ ಮಿತವ್ಯಯ ಬೌಲಿಂಗ್ ದಾಖಲೆಯೊಂದಿಗೆ ಸುದ್ದಿಯಾಗಿದ್ದಾರೆ. ಶನಿವಾರ ನಡೆದ “ಕೆರಿಬಿಯನ್ ಪ್ರೀಮಿಯರ್ ಲೀಗ್’ನಲ್ಲಿ ಅವರು 4 ಓವರ್‌ಗಳ ಪೂರ್ತಿ ಕೋಟಾದಲ್ಲಿ ಸತತ 23 ಡಾಟ್ ಬಾಲ್ ಎಸೆಯುವುದರ ಜತೆಗೆ ಕೇವಲ ಒಂದು ರನ್ ನೀಡಿ ಮೆರೆದರು. ಆದರೆ, ಈ ಸಾಧನೆಯ ಹೊರತಾಗಿಯೂ ಇರ್ಫಾನ್ ತಂಡ ಸೋಲು ಕಾಣಬೇಕಾಯಿತು!
ಟಿ20 ಕ್ರಿಕೆಟ್ ಪಂದ್ಯವೊಂದರಲ್ಲಿ ಬೌಲರ್ ಓರ್ವ 3 ಓವರ್ ಮೇಡನ್ ಮಾಡಿದ್ದು, ಕನಿಷ್ಠ ಒಂದು ರನ್ ನೀಡಿದ್ದು ಹಾಗೂ ಸತತ 23 ಡಾಟ್ ಬಾಲ್ ಎಸೆದದ್ದೆಲ್ಲ ನೂತನ ದಾಖಲೆಗಳಾಗಿವೆ.
ಬಾರ್ಬಡಾಸ್ ಟ್ರಿಡೆಂಟ್ಸ್ ಪರವಾಗಿ ಸೇಂಟ್ ಕಿಟ್ಸ್ ಆ್ಯಂಡ್ ನೆವಿಸ್ ಪ್ಯಾಟ್ರಿಯಾಟ್ಸ್ ತಂಡದ ವಿರುದ್ಧ ಮೊಹಮ್ಮದ್ ಇರ್ಫಾನ್ ತಮ್ಮ ಬೌಲಿಂಗ್ ಪರಾಕ್ರಮ ಮೆರೆದರು. ಅವರ ಬೌಲಿಂಗ್ ಫಿಗರ್ ಇಷ್ಟೊಂದು ಆಕರ್ಷಕವಾಗಿತ್ತು: 4-3-1-2.
ಮೊದಲು ಬ್ಯಾಟಿಂಗ್ ನಡೆಸಿದ ಬಾರ್ಬಡಾಸ್ 6 ವಿಕೆಟಿಗೆ 147 ರನ್ ಗಳಿಸಿದರೆ, ಪ್ಯಾಟ್ರಿಯಾಟ್ಸ್ 18.5 ಓವರ್‌ಗಳಲ್ಲಿ 4ಕ್ಕೆ 148 ರನ್ ಬಾರಿಸಿ ಜಯ ಸಾಧಿಸಿತು.
ಮೊದಲ ಎಸೆತದಲ್ಲೇ ಕ್ರಿಸ್‌ಗೆàಲ್ ವಿಕೆಟ್ ಕಿತ್ತ ಇರ್ಫಾನ್ , 4ನೇ ಓವರಿನ ಕೊನೆಯ ಎಸೆತದಲ್ಲಿ ಒಂಟಿ ರನ್ ನೀಡಿದರು.