Advertisement

2ನೇ ಟಿ20: ಕೊಹ್ಲಿ, ಇಶಾನ್‌ ಶಾನ್‌ದಾರ್‌ ಬ್ಯಾಟಿಂಗ್‌ : ಭಾರತ 7 ವಿಕೆಟ್‌ ಜಯಭೇರಿ

11:09 PM Mar 14, 2021 | Team Udayavani |

ಅಹ್ಮದಾಬಾದ್‌: ಕ್ಯಾಪ್ಟನ್‌ ಕೊಹ್ಲಿ ಮತ್ತು ಮೊದಲ ಸಲ ಭಾರತ ತಂಡವನ್ನು ಪ್ರತಿನಿಧಿಸಿದ ಇಶಾನ್‌ ಕಿಶನ್‌ ಅವರ ಶಾನ್‌ದಾರ್‌ ಬ್ಯಾಟಿಂಗ್‌ ಸಾಹಸದಿಂದ ಇಂಗ್ಲೆಂಡ್‌ ಎದುರಿನ 2ನೇ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಸರಣಿ 1-1 ಸಮಬಲಕ್ಕೆ ಬಂದಿದೆ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ 6 ವಿಕೆಟಿಗೆ 164 ರನ್‌ ಗಳಿಸಿದರೆ, ಭಾರತ 17.5 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 166 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ಭಾರತದ ಗೆಲುವಿನ ವೇಳೆ ವಿರಾಟ್‌ ಕೊಹ್ಲಿ 73 ರನ್‌ ಮಾಡಿ ಅಜೇಯರಾಗಿದ್ದರು. 49 ಎಸೆತಗಳ ಈ ಬಿರುಸಿನ ಬ್ಯಾಟಿಂಗ್‌ ವೇಳೆ ಅವರು 5 ಬೌಂಡರಿ, 3 ಸಿಕ್ಸರ್‌ ಸಿಡಿಸಿದರು. ಇಶಾನ್‌ ಕಿಶನ್‌ ಅವರಂತೂ ಫುಲ್‌ ಜೋಶ್‌ನಲ್ಲಿ ಆಂಗ್ಲ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಅವರ ಕೊಡುಗೆ 32 ಎಸೆತಗಳಿಂದ 56 ರನ್‌. ಸಿಡಿಸಿದ್ದು 5 ಫೋರ್‌ ಮತ್ತು 4 ಸಿಕ್ಸರ್‌. ಇಶಾನ್‌ ಕಿಶನ್‌-ಕೊಹ್ಲಿ 2ನೇ ವಿಕೆಟಿಗೆ 94 ರನ್‌ ಪೇರಿಸಿ ಭಾರತದ ಗೆಲುವನ್ನು ಸುಲಭಗೊಳಿಸಿದರು.

ಆದರೆ ಕೆ.ಎಲ್‌. ರಾಹುಲ್‌ ಸತತ ಎರಡೂ ಪಂದ್ಯಗಳಲ್ಲಿ ಸೊನ್ನೆಗೆ ಔಟಾಗಿ ನಿರಾಸೆ ಮೂಡಿಸಿದರು. ರಿಷಭ್‌ ಪಂತ್‌ 13 ಎಸೆತಗಳಿಂದ 26 ರನ್‌ ಬಾರಿಸಿದರು (2 ಬೌಂಡರಿ, 2 ಸಿಕ್ಸರ್‌).

ಮೊದಲ ಓವರಲ್ಲೇ ಯಶಸ್ಸು
ಇಂಗ್ಲೆಂಡನ್ನು ಬ್ಯಾಟಿಂಗಿಗೆ ಆಹ್ವಾನಿಸಿದ ಭಾರತ ಮೊದಲ ಓವರಿನಲ್ಲೇ ಯಶಸ್ಸು ಕಂಡಿತು. ಭುವನೇಶ್ವರ್‌ ಕುಮಾರ್‌ 3ನೇ ಎಸೆತದಲ್ಲಿ ಜಾಸ್‌ ಬಟ್ಲರ್‌ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. “ಗೋಲ್ಡನ್‌ ಡಕ್‌’ ಸಂಕಟ ಬಟ್ಲರ್‌ ಅವರದಾಯಿತು. ಆಗ ಇಂಗ್ಲೆಂಡ್‌ ಸ್ಕೋರ್‌ಬೋರ್ಡ್‌ ಒಂದು ರನ್‌ ತೋರಿಸುತ್ತಿತ್ತು.

Advertisement

ದ್ವಿತೀಯ ವಿಕೆಟಿಗೆ ಜತೆಗೂಡಿದ ಜಾಸನ್‌ ರಾಯ್‌-ಡೇವಿಡ್‌ ಮಾಲನ್‌ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಇಬ್ಬರೂ ಭಾರತದ ಬೌಲರ್‌ಗಳನ್ನು ಏಕಪ್ರಕಾರವಾಗಿ ದಂಡಿಸುತ್ತ ಸಾಗಿ 7.5 ಓವರ್‌ಗಳಿಂದ 63 ರನ್‌ ಒಟ್ಟುಗೂಡಿಸಿದರು. 9ನೇ ಓವರ್‌ ತನಕ ಇವರ ಅಬ್ಬರ ಮುಂದುವರಿಯಿತು. ಆಗ ಚಹಲ್‌ ದೊಡ್ಡದೊಂದು ಯಶಸ್ಸು ಸಾಧಿಸಿದರು. 23 ಎಸೆತಗಳಿಂದ 24 ರನ್‌ ಮಾಡಿದ ಮಾಲನ್‌ ವಿಕೆಟ್‌ ಉರುಳಿಸಿದರು. ಈ ವಿಕೆಟ್‌ ಕೂಡ ಎಲ್‌ಬಿಡಬ್ಲ್ಯು ರೂಪದಲ್ಲಿ ಲಭಿಸಿತು. ಅರ್ಧ ಹಾದಿ ಕ್ರಮಿಸುವಾಗ ಇಂಗ್ಲೆಂಡ್‌ 2 ವಿಕೆಟಿಗೆ 83 ರನ್‌ ಗಳಿಸಿತ್ತು.

ಸಿಡಿಯುತ್ತ ನಿಂತಿದ್ದ ಜಾಸನ್‌ ರಾಯ್‌ ಅವರಿಗೆ ಸತತ 2ನೇ ಪಂದ್ಯದಲ್ಲೂ ಅರ್ಧ ಶತಕ ತಪ್ಪಿತು. 35 ಎಸೆತಗಳಿಂದ 46 ರನ್‌ (4 ಬೌಂಡರಿ, 2 ಸಿಕ್ಸರ್‌) ಮಾಡಿದ ಅವರನ್ನು ವಾಷಿಂಗ್ಟನ್‌ ಸುಂದರ್‌ ಪೆವಿಲಿಯನ್ನಿಗೆ ರವಾನಿಸಿದರು. ಮೊದಲ ಪಂದ್ಯದಲ್ಲಿ 49 ರನ್‌ ಮಾಡಿದ್ದ ರಾಯ್‌ ಅವರನ್ನು ವಾಷಿಂಗ್ಟನ್‌ ಅವರೇ ಔಟ್‌ ಮಾಡಿದ್ದರು.

ಜಾನಿ ಬೇರ್‌ಸ್ಟೊ ಇನ್ನೇನು ಬೇರು ಬಿಡಬೇಕೆನ್ನುವಾಗಲೇ ವಾಷಿಂಗ್ಟನ್‌ ಮೋಡಿಗೆ ಸಿಲುಕಿದರು. ಮಿಡ್‌ ವಿಕೆಟ್‌ ಫೀಲ್ಡರ್‌ ಸೂರ್ಯಕುಮಾರ್‌ ಅವರಿಂದ ಲೈಫ್ ಪಡೆದು ಸಿಕ್ಸರ್‌ ಒಂದನ್ನು ಕೊಡುಗೆಯಾಗಿ ಪಡೆದ ಬೇರ್‌ಸ್ಟೊ ಎರಡೇ ಎಸೆತಗಳ ಅಂತರದಲ್ಲಿ ಸೂರ್ಯಕುಮಾರ್‌ ಅವರಿಗೇ ಕ್ಯಾಚ್‌ ನೀಡಿ ನಿರ್ಗಮಿಸಿದರು. ಬೇರ್‌ಸ್ಟೊ ಗಳಿಕೆ 15 ಎಸೆತಗಳಿಂದ 20 ರನ್‌ (1 ಬೌಂಡರಿ, 1 ಸಿಕ್ಸರ್‌).

ನಾಯಕ ಇಯಾನ್‌ ಮಾರ್ಗನ್‌ ಮತ್ತು ಬಿಗ್‌ ಹಿಟ್ಟರ್‌ ಬೆನ್‌ ಸ್ಟೋಕ್ಸ್‌ ಡೆತ್‌ ಓವರ್‌ಗಳಲ್ಲಿ ರನ್‌ಗತಿ ಏರಿಸುವ ಪ್ರಯತ್ನಕ್ಕೆ ಮುಂದಾಗುವ ನಿರೀಕ್ಷೆ ಇತ್ತು. ಆದರೆ ಶಾರ್ದೂಲ್‌ ಠಾಕೂರ್‌ ಇಲ್ಲಿ ಮಹತ್ವದ ಯಶಸ್ಸು ಸಾಧಿಸಿದರು. ಅಪಾಯಕಾರಿ ಮಾರ್ಗನ್‌ ವಿಕೆಟ್‌ ಕಿತ್ತರು. ಇಂಗ್ಲೆಂಡ್‌ ಕಪ್ತಾನನ ಗಳಿಕೆ 20 ಎಸೆತಗಳಿಂದ 28 ರನ್‌ (4 ಬೌಂಡರಿ).

ಸ್ಟೋಕ್ಸ್‌ ಮೊದಲ ಬೌಂಡರಿ ಬಾರಿಸಲು 17ನೇ ಎಸೆತದ ತನಕ ಕಾಯಬೇಕಾಯಿತು. ಆಗಲೇ ಅಂತಿಮ ಓವರ್‌ ಆರಂಭಗೊಂಡಿತು. ಶಾರ್ದೂಲ್‌ ಠಾಕೂರ್‌ ಅವರ ಈ ಓವರ್‌ ಅತ್ಯಂತ ಬಿಗುವಿನಿಂದ ಕೂಡಿತ್ತು. ಸ್ಟೋಕ್ಸ್‌ ವಿಕೆಟ್‌ ಉರುಳಿಸುವ ಜತೆಗೆ ಕೇವಲ 6 ರನ್‌ ನೀಡಿದರು. ಸ್ಟೋಕ್ಸ್‌ ಗಳಿಕೆ 21 ಎಸೆತಗಳಿಂದ 24 ರನ್‌. ಹೊಡೆದದ್ದು ಒಂದೇ ಫೋರ್‌.

ಸ್ಕೋರ್‌ ಪಟ್ಟಿ
ಇಂಗ್ಲೆಂಡ್‌
ಜಾಸನ್‌ ರಾಯ್‌ ಸಿ ಭುವನೆಶ್ವರ್‌ ಬಿ ಸುಂದರ್‌ 46
ಜಾಸ್‌ ಬಟ್ಲರ್‌ ಎಲ್‌ಬಿಡಬ್ಲ್ಯು ಭುವನೇಶ್ವರ್‌ 0
ಡೇವಿಡ್‌ ಮಾಲನ್‌ ಎಲ್‌ಬಿಡಬ್ಲ್ಯು ಚಹಲ್‌ 24
ಬೇರ್‌ಸ್ಟೊ ಸಿ ಸೂರ್ಯಕುಮಾರ್‌ ಬಿ ಸುಂದರ್‌ 20
ಇಯಾನ್‌ ಮಾರ್ಗನ್‌ ಸಿ ಪಂತ್‌ ಬಿ ಶಾದೂìಲ್‌ 28
ಬೆನ್‌ ಸ್ಟೋಕ್ಸ್‌ ಸಿ ಪಾಂಡ್ಯ ಬಿ ಶಾದೂìಲ್‌ 24
ಸ್ಯಾಮ್‌ ಕರನ್‌ ಔಟಾಗದೆ 6
ಕ್ರಿಸ್‌ ಜೋರ್ಡನ್‌ ಔಟಾಗದೆ 0
ಇತರ 16
ಒಟ್ಟು (6 ವಿಕೆಟಿಗೆ) 164
ವಿಕೆಟ್‌ ಪತನ: 1-1, 2-64, 3-91, 4-119, 5-142, 6-160.
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 4-0-28-1
ವಾಷಿಂಗ್ಟನ್‌ ಸುಂದರ್‌ 4-0-29-2
ಶಾರ್ದೂಲ್‌ ಠಾಕೂರ್‌ 4-0-29-2
ಹಾರ್ದಿಕ್‌ ಪಾಂಡ್ಯ 4-0-33-0
ಯಜುವೇಂದ್ರ ಚಹಲ್‌ 4-0-34-1

ಭಾರತ
ಕೆ.ಎಲ್‌. ರಾಹುಲ್‌ ಸಿ ಬಟ್ಲರ್‌ ಬಿ ಸ್ಯಾಮ್‌ ಕರನ್‌ 0
ಇಶಾನ್‌ ಕಿಶನ್‌ ಎಲ್‌ಬಿಡಬ್ಲ್ಯು ರಶೀದ್‌ 56
ವಿರಾಟ್‌ ಕೊಹ್ಲಿ ಔಟಾಗದೆ 73
ರಿಷಭ್‌ ಪಂತ್‌ ಸಿ ಬೇರ್‌ಸ್ಟೊ ಬಿ ಜೋರ್ಡನ್‌ 26
ಶ್ರೇಯಸ್‌ ಅಯ್ಯರ್‌ ಔಟಾಗದೆ 8
ಇತರ 3
ಒಟ್ಟು (17.5 ಓವರ್‌ಗಳಲ್ಲಿ 3 ವಿಕೆಟಿಗೆ) 166
ವಿಕೆಟ್‌ ಪತನ: 1-0, 2-94, 3-130.
ಬೌಲಿಂಗ್‌: ಸ್ಯಾಮ್‌ ಕರನ್‌ 4-1-22-1
ಜೋಫ‌Å ಆರ್ಚರ್‌ 4-0-24-0
ಕ್ರಿಸ್‌ ಜೋರ್ಡನ್‌ 2.5-0-38-1
ಟಾಮ್‌ ಕರನ್‌ 2-0-26-0
ಬೆನ್‌ ಸ್ಟೋಕ್ಸ್‌ 1-0-17-0
ಆದಿಲ್‌ ರಶೀದ್‌ 4-0-38-1

ಪಂದ್ಯಶ್ರೇಷ್ಠ: ಇಶಾನ್‌ ಕಿಶನ್‌

Advertisement

Udayavani is now on Telegram. Click here to join our channel and stay updated with the latest news.

Next