Advertisement

T20; 3 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾ ಜಯ; ಸರಣಿ ಸಮಬಲ

11:46 PM Nov 10, 2024 | Team Udayavani |

ಗೆಬೆರಾ: ಬೌಲರ್‌ಗಳ ಮೇಲಾಟ ವಾಗಿ ಪರಿಣಮಿಸಿದ ದ್ವಿತೀಯ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 3 ವಿಕೆಟ್‌ಗಳಿಂದ ಭಾರತವನ್ನು ಮಣಿಸಿ ಸರಣಿಯನ್ನು ಸಮಬಲಕ್ಕೆ ತರುವಲ್ಲಿ ಯಶಸ್ವಿಯಾಗಿದೆ.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 6 ವಿಕೆಟಿಗೆ 124 ರನ್‌ ಗಳಿಸಿದರೆ, ದಕ್ಷಿಣ ಆಫ್ರಿಕಾ 19 ಓವರ್‌ಗಳಲ್ಲಿ 7 ವಿಕೆಟಿಗೆ 128 ರನ್‌ ಬಾರಿಸಿತು. ಭಾರತದ ಆರಂಭ ಆಘಾತಕಾರಿಯಾಗಿತ್ತು. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದ ಸಂಜು ಸ್ಯಾಮ್ಸನ್‌ ಅವರನ್ನು ಮಾರ್ಕೊ ಜಾನ್ಸೆನ್‌ 3ನೇ ಎಸೆತದಲ್ಲೇ ಬೌಲ್ಡ್‌ ಮಾಡಿದರು. ಸಂಜು ಖಾತೆಯನ್ನೇ ತೆರೆದಿರಲಿಲ್ಲ. ಅಭಿಷೇಕ್‌ ಶರ್ಮ (4) ಅವರ ವೈಫ‌ಲ್ಯ ಮತ್ತೆ ಮುಂದುವರಿಯಿತು. ದ್ವಿತೀಯ ಓವರ್‌ನಲ್ಲಿ ಕೋಟ್ಜಿ ಈ ವಿಕೆಟ್‌ ಉರುಳಿಸಿದರು. ನಾಯಕ ಸೂರ್ಯಕುಮಾರ್‌ ಕೂಡ ನಾಲ್ಕರ ಗಡಿ ದಾಟಲಿಲ್ಲ. 4 ಓವರ್‌ ಅಂತ್ಯಕ್ಕೆ 15ಕ್ಕೆ 3 ವಿಕೆಟ್‌ ಕಳೆದುಕೊಂಡ ಸಂಕಟ ಭಾರತದ್ದಾಯಿತು.

ತಿಲಕ್‌ ವರ್ಮ (20), ಭಡ್ತಿ ಪಡೆದು ಬಂದ ಅಕ್ಷರ್‌ ಪಟೇಲ್‌ (27) ಸ್ವಲ್ಪ ಮಟ್ಟಿಗೆ ಪ್ರತಿರೋಧ ತೋರಿದರು. 30 ರನ್‌ ಗಡಿ ದಾಟಿದ್ದು ಹಾರ್ದಿಕ್‌ ಪಾಂಡ್ಯ ಮಾತ್ರ (45 ಎಸೆತ, ಔಟಾಗದೆ 39).

ಚೇಸಿಂಗ್‌ ವೇಳೆ ದಕ್ಷಿಣ ಆಫ್ರಿಕಾ ವರುಣ್‌ ಚಕ್ರವರ್ತಿ ದಾಳಿಗೆ ತತ್ತರಿಸಿತು. ಚಕ್ರವರ್ತಿ ಸಾಧನೆ 17ಕ್ಕೆ 5 ವಿಕೆಟ್‌. ಇದು ಅವರ ಜೀವನಶ್ರೇಷ್ಠ ಬೌಲಿಂಗ್‌. ಸತತ ಎಸೆತಗಳಲ್ಲಿ ಕ್ಲಾಸೆನ್‌ ಮತ್ತು ಮಿಲ್ಲರ್‌ ವಿಕೆಟ್‌ ಉಡಾಯಿಸಿದರು. ಆಗ ಪಂದ್ಯ ಭಾರತದ ತೆಕ್ಕೆಗೆ ಬಂದಿತ್ತು. ಆದರೆ ಸ್ಟಬ್ಸ್ (ಔಟಾಗದೆ 47) ಮತ್ತು ಕೋಟಿj (ಔಟಾಗದೆ 19) ಸೇರಿ ಕೊಂಡು ತಂಡವನ್ನು ದಡ ಸೇರಿಸಿದರು.

ಕ್ರುಗರ್‌ ಬದಲು ಹೆಂಡ್ರಿಕ್ಸ್‌
ಈ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಸಂಭವಿಸಲಿಲ್ಲ. ದಕ್ಷಿಣ ಆಫ್ರಿಕಾ ಒಂದು ಬದಲಾವಣೆ ಮಾಡಿಕೊಂಡಿತು. ಪ್ಯಾಟ್ರಿಕ್‌ ಕ್ರುಗರ್‌ ಬದಲು ರೀಝ ಹೆಂಡ್ರಿಕ್ಸ್‌ ಆಡಲಿಳಿದರು.

Advertisement

ಸಂಕ್ಷಿಪ್ತ ಸ್ಕೋರ್‌: ಭಾರತ-6 ವಿಕೆಟಿಗೆ 124 (ಪಾಂಡ್ಯ ಔಟಾಗದೆ 39, ಅಕ್ಷರ್‌ 27, ತಿಲಕ್‌ 20, ಮಾರ್ಕ್‌ರಮ್‌ 4ಕ್ಕೆ 1, ಸಿಮೆಲೇನ್‌ 20ಕ್ಕೆ 1, ಪೀಟರ್‌ 20ಕ್ಕೆ 1). ದಕ್ಷಿಣ ಆಫ್ರಿಕಾ-19 ಓವರ್‌ಗಳಲ್ಲಿ 7 ವಿಕೆಟಿಗೆ 128 (ಸ್ಟಬ್ಸ್ ಔಟಾಗದೆ 47, ಹೆಂಡ್ರಿಕ್ಸ್‌ 24, ಕೋಟ್ಜಿ ಔಟಾಗದೆ 19, ಚಕ್ರವರ್ತಿ 17ಕ್ಕೆ 5).

Advertisement

Udayavani is now on Telegram. Click here to join our channel and stay updated with the latest news.

Next