Advertisement

ತಂದೆಯ ಪ್ರಯೋಗ ಮುಂದುವರಿಕೆ

02:13 AM Aug 01, 2022 | Team Udayavani |

“ಉದಯವಾಣಿ’ಯನ್ನು ಆರಂಭಿಸುವಾಗ ಮಣಿಪಾಲದಂತಹ ಗ್ರಾಮ ಪಂಚಾಯತ್‌ ಪ್ರದೇಶಗಳಲ್ಲಿ ಸಾಧ್ಯವೇ? ಬೆಂಗಳೂರಿನಲ್ಲಿ ಸುದ್ದಿಗಳು ಸುಲಭದಲ್ಲಿ ಸಿಗುತ್ತವೆಯಲ್ಲವೇ ಇತ್ಯಾದಿ ಮಾತುಗಳು ಕೇಳಿ ಬರುತ್ತಿದ್ದವು. ಆಗಿನ ಮಣಿಪಾಲದಲ್ಲಿ ಪಿಟಿಐ, ಯುಎನ್‌ಐನಂತಹ ಏಜೆನ್ಸಿಗಳ ಅನುಮೋದನೆ ಸಿಕ್ಕಿದ್ದು ಸಾಮಾನ್ಯ ವಿಷಯವಾಗಿರಲಿಲ್ಲ. ಇದನ್ನು ಸಾಧ್ಯವಾಗಿಸುವಂತೆ ಮಾಡಿದವರು ಮೋಹನದಾಸ್‌ ಪೈಯವರು. ಮಣಿಪಾಲದಲ್ಲಿ 1920ರ ದಶಕದಲ್ಲೇ ಡಾ| ಟಿಎಂಎ ಪೈಯವರು ಸಿಂಡಿಕೇಟ್‌ ಬ್ಯಾಂಕಿನ ಪ್ರಧಾನ ಕಚೇರಿಯನ್ನು ಆರಂಭಿಸಿ ದೇಶದುದ್ದಗಲಕ್ಕೆ ವಿಸ್ತರಿಸಿದ್ದ ಪ್ರಯೋಗವನ್ನೇ “ಉದಯವಾಣಿ’ಗೂ ಮಗ ಅನ್ವಯಿಸಿದರು.

Advertisement

ಸ್ವತಃ ಪತ್ರಿಕೆಗಳ ವಿಶ್ಲೇಷಣೆ
1970-80ರ ದಶಕದಲ್ಲಿ ಉದಯವಾಣಿಯನ್ನು ಬೆಳೆಸುವಾಗ ಬೆಂಗಳೂರು, ಹುಬ್ಬಳ್ಳಿ ಮೊದಲಾದ ದೂರದ ಪ್ರದೇಶಗಳಿಂದ ಬೇರೆಬೇರೆ ಪತ್ರಿಕೆಗಳನ್ನು ತರಿಸಿಕೊಂಡು ಉದಯವಾಣಿಯಲ್ಲಿ ದೂರದ ಆಕರ್ಷಕ ಸುದ್ದಿ ಬರಲಿಲ್ಲ ಎಂಬುದನ್ನು  ನೋಡಿ ಅವುಗಳನ್ನು ನಮ್ಮ ಓದುಗರಿಗೂ ಕೊಡಬೇಕೆಂದು  ಹೇಳುತ್ತಿದ್ದರು.

ಏಜೆಂಟರಿಗೂ ಬಾಗಿಲು ತೆರೆದಿತ್ತು
ಉದಯವಾಣಿಯ ಏಜೆಂಟರಿಗೂ ಮೋಹನದಾಸ್‌ ಪೈ ಅವರ ಕಚೇರಿ ಬಾಗಿಲು ಸದಾ ತೆರೆದಿತ್ತು. ಏಜೆಂಟರು ಯಾವುದಾದರೂ ದೂರುಗಳನ್ನು ಹೇಳಿದರೆ ಅದಕ್ಕೆ ಸಂಬಂಧಪಟ್ಟವರನ್ನು ಕರೆಸಿ ಅಲ್ಲಲ್ಲೇ ಬಗೆಹರಿಸುತ್ತಿದ್ದರು. ಏಜೆಂಟರಿಗೆ ನಮ್ಮ ಪತ್ರಿಕೆಯ ಮಾರಾಟದಿಂದಲೇ ಜೀವನ ನಿರ್ವಹಿಸುವುದು ಕಷ್ಟವೆಂದು ತಿಳಿದು ಟೈಮ್ಸ್‌ ಆಫ್ ಇಂಡಿಯಾದ ಫಿಲ್ಮ್ಫೇರ್‌, ಇಲ್ಲಸ್ಟ್ರೆಟೆಡ್‌ ವೀಕ್ಲಿಯಂತಹ ಪತ್ರಿಕೆಗಳ ಏಜೆನ್ಸಿಯನ್ನು (ಕರಾವಳಿ ವ್ಯಾಪ್ತಿ) ಪಡೆದು ನಮ್ಮ ಏಜೆಂಟರಿಗೆ ಅವುಗಳಏಜೆನ್ಸಿಯನ್ನೂ ಕೊಟ್ಟರು.

ಇಚ್ಛಾಶಕ್ತಿಯ ಬಲ
1940ರ ದಶಕದ ಆರಂಭದಿಂದ ಮಣಿಪಾಲದಲ್ಲಿ ಪ್ರಸ್‌ ಇದ್ದಿತ್ತಾದರೂ ಅದು ಸಣ್ಣಪುಟ್ಟ ಕರಪತ್ರಗಳನ್ನು ಮುದ್ರಿಸುತ್ತಿತ್ತು. ಗ್ರಾಮೀಣ ಪ್ರದೇಶದಲ್ಲಿ ಆಫ್ಸೆಟ್‌ ಯಂತ್ರದಿಂದ ಆರಂಭಗೊಂಡ ಮೊದಲ ಪತ್ರಿಕೆ “ಉದಯವಾಣಿ’ ಎಂಬ ಕೀರ್ತಿಗೆ ಭಾಜನವಾದದ್ದು ಇವರ ಇಚ್ಛಾಶಕ್ತಿಯಿಂದ.

ಪ್ಯಾಕರ್‌, ಚಾಲಕ ಪರಿಚಯವೂ ಇತ್ತು
ಮುದ್ರಣ ಯಂತ್ರದ ಪ್ರಿಂಟರ್‌ನಿಂದ ಹಿಡಿದು ಪ್ಯಾಕರ್‌ ವರೆಗೆ, ವ್ಯಾನ್‌ ಚಾಲಕನೂ ಅವರಿಗೆ ವೈಯಕ್ತಿಕವಾಗಿ ಪರಿಚಿತರಿದ್ದರು. ರಾತ್ರಿ ಇಷ್ಟು ಜನ ಕೆಲಸ ಮಾಡುವಾಗ ಚಹಾ, ತಿಂಡಿ ಅಗತ್ಯವಿದೆ ಎಂದು ಹೇಳಿ ಆರಂಭಿಸಿದ ಕ್ಯಾಂಟೀನ್‌ ಇಂದೂ (ಮಣಿಪಾಲ ಎಂಐಸಿ ಎದುರು) ಕಾರ್ಯಾಚರಿಸುತ್ತಿದೆ.

Advertisement

ಷೇರು ವ್ಯವಹಾರ
1950ರಿಂದ ಷೇರು ವ್ಯವಹಾರದಲ್ಲಿ ತೊಡಗಿದ್ದ ಮೋಹನದಾಸ್‌ ಪೈಯವರು ಕೊನೆಯವರೆಗೂ ಅದರಲ್ಲಿ ಯಶಸ್ಸು ಗಳಿಸಿದ್ದರು. ಆರಂಭದ ಕಾಲದಲ್ಲಿ ಟ್ರಂಕ್‌ ಕಾಲ್‌ ಕೂಡ ಇಲ್ಲದಿರುವಾಗ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ.

ಸ್ವಂತ ಹಣದಿಂದ ಠೇವಣಿ ಬಟವಾಡೆ

ಕೇಂದ್ರ ಸರಕಾರ ನಾನ್‌ ಬ್ಯಾಂಕಿಂಗ್‌ ಹಣಕಾಸು ಸಂಸ್ಥೆಗಳಿಗೆ ನಿರ್ಬಂಧ ಹೇರಿದಾಗ ಐಸಿಡಿಎಸ್‌ ಸಂಸ್ಥೆಗೆ ಮೋಹನದಾಸ್‌ ಪೈಯವರು ಆಡಳಿತ ನಿರ್ದೇಶಕರಾಗಿದ್ದರು. ಆಗ ಪೂರ್ಣಕಾಲವನ್ನು ಅವರು ಸಂಸ್ಥೆಗೆ ವಿನಿಯೋಗಿಸುತ್ತಿದ್ದರು. ಎಲ್ಲ ಎನ್‌ಬಿಎಫ್ಸಿಗಳು ಗಂಡಾಂತರಕ್ಕೊಳಗಾದಾಗ ಎಲ್ಲ ಠೇವಣಿದಾರರಿಗೆ ಬಡ್ಡಿಹಣ ಸಹಿತವಾಗಿ ಹಿಂದಿರುಗಿಸಲು ಪಣ ತೊಟ್ಟು ಅದನ್ನು ಪೂರ್ತಿಯಾಗಿ ಪಾವತಿಸಿದವರು ಮೋಹನದಾಸ್‌ ಪೈ.   ಸ್ವಂತದ ಹಣವೂ ಸಹಿತ ಒಟ್ಟು ಪಾವತಿಸಿದ ಮೊತ್ತ ಸುಮಾರು 400 ಕೋ.ರೂ. ಆಗಿತ್ತು. ಎನ್‌ಬಿಎಫ್ಸಿಗಳಿಗೆ ಆದ ಸಂಕಷ್ಟವೆಂದರೆ ಠೇವಣಿದಾರರಿಗೆ ಠೇವಣಿಯನ್ನು ಹಿಂದಿರುಗಿಸಬೇಕು, ಕೊಟ್ಟ ಸಾಲಗಳು ಅದೇ ಪ್ರಕಾರದಲ್ಲಿ ವಾಪಸು ಬರುತ್ತಿರಲಿಲ್ಲ. ಸಾಲದ ಪ್ರಕರಣಗಳು ಈಗಲೂ ನ್ಯಾಯಾಲಯದಲ್ಲಿವೆ.

ಸ್ವತಃ
ಕೃಷ್ಣಾಷ್ಟಮಿ ಪೂಜೆ
ನಾವು ಕೃಷ್ಣಾಷ್ಟಮಿ ಪೂಜೆಗೆ ಪುರೋಹಿತರನ್ನು ಕರೆಸುತ್ತೇವೆ. ಆದರೆ ಮೋಹನದಾಸ್‌ ಪೈಯವರು  ವಿಷ್ಣು ಸಹಸ್ರನಾಮವನ್ನು ಪಠಿಸಿ ಪೂಜೆ ಸಲ್ಲಿಸುತ್ತಿದ್ದರು. ಅವರೇ ತುಳಸಿ ಪೂಜೆ ಮಾಡುತ್ತಿದ್ದರು. ನಿತ್ಯವೂ ಬೆಳಗ್ಗೆ 8 ಗಂಟೆಗೆ ಅವರೇ ಹೂ ತಂದು ದೇವರಿಗೆ ಇರಿಸಿ ಪೂಜೆ ಸಲ್ಲಿಸಿದ ಬಳಿಕವೇ ಆಹಾರ ಸ್ವೀಕರಿಸುತ್ತಿದ್ದರು.
– ಟಿ.ಅಶೋಕ್‌ ಪೈ,
ಮೋಹನದಾಸ್‌ ಪೈ ಅವರ
ಕಿರಿಯ ತಮ್ಮ.  

Advertisement

Udayavani is now on Telegram. Click here to join our channel and stay updated with the latest news.