Advertisement
ಇದು ಇಲ್ಲಿ ಕೇಳಿಬರುತ್ತಿರುವ ಅಭಿಪ್ರಾಯ. ಯಾಕೆಂದರೆ, ಮೂಡಬಿದಿರೆ, ಬಂಟ್ವಾಳ-ಬಿ.ಸಿ. ರೋಡ್, ವೇಣೂರು – ಈ ಮೂರು ಊರುಗಳನ್ನು ಸಂಪರ್ಕಿಸುವ ಕೇಂದ್ರ ಸ್ಥಳ ಸಿದ್ದಕಟ್ಟೆ ಜಂಕ್ಷನ್. ಸಂಗಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಕೇಂದ್ರ ಸ್ಥಳವಾದ ಈ ಜಂಕ್ಷನ್ ಸುತ್ತಮುತ್ತ ಈಗಾಗಲೇ ಪೇಟೆ ಹರಡಿಕೊಂಡಿದೆ. ಇತ್ತೀಚಿನ ಹತ್ತು ವರ್ಷಗಳಲ್ಲಿ ಈ ಜಂಕ್ಷನ್ ಬೆಳೆದ ರೀತಿ ಗಮನಿಸಿದರೆ, ಮುಂದಿನ ಹತ್ತು ವರ್ಷಗಳಲ್ಲಿ ಕನಿಷ್ಠವೆಂದರೂ ಈಗಿನ ಎರಡು- ಮೂರರಷ್ಟು ಬೆಳೆಯುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಅಭಿವೃದ್ಧಿ ಯೋಜನೆಗಳನ್ನೂ ಕೈಗೊಳ್ಳುವ ಹೊಣೆಗಾರಿಕೆ ಸ್ಥಳೀಯ ಆಡಳಿತದ ಮೇಲಿದೆ.
ಈ ಜಂಕ್ಷನ್ ಅಭಿವೃದ್ಧಿಯಲ್ಲಿ ಮೂವರ ಪಾಲಿದೆ. ಅಂದರೆ ಮೂಡಬಿದಿರೆ, ಬಂಟ್ವಾಳ, ಬೆಳ್ತಂಗಡಿ-ಮೂರೂ ತಾಲೂಕುಗಳ ಗಡಿಭಾಗ ಸಿದ್ದಕಟ್ಟೆ. ಹಾಗಾಗಿ ಮೂರೂ ತಾಲೂಕುಗಳ ಸಂಪರ್ಕ ಕೊಂಡಿ. ಇದೇ ಕಾರಣಕ್ಕಾಗಿ ಮೂರೂ ತಾಲೂಕುಗಳ ಸಂಘಟಿತ ಪ್ರಯತ್ನವೂ ಅಭಿವೃದ್ಧಿಗೆ ಅವಶ್ಯವಿದೆ. ಇಲ್ಲಿ ತುರ್ತಾಗಿ ಆಗಬೇಕಾದದ್ದು ಸರ್ಕಲ್ ಮತ್ತು ಬಸ್ ನಿಲ್ದಾಣ, ರಿಕ್ಷಾ ಪಾರ್ಕಿಂಗ್ ವ್ಯವಸ್ಥೆ ಹಾಗೂ ರಸ್ತೆ ಡಿವೈಡರ್‌ಗಳು. ಮೂಡಬಿದಿರೆಯಲ್ಲಿ ಹಲವು ಶಿಕ್ಷಣ ಸಂಸ್ಥೆಗಳಿದ್ದು, ಹಲವರು ಶಿಕ್ಷಣಕ್ಕೆ ತೆರಳುತ್ತಾರೆ. ಬಂಟ್ವಾಳ ತಾ|ಕಿನ ಗ್ರಾಮಸ್ಥರಿಗೆ ತಾಲೂಕು ಕೇಂದ್ರ ಬಿ.ಸಿ. ರೋಡ್ ಆಗಿದ್ದು, ಅಲ್ಲಿಗೆ ತೆರಳುವರೂ ಹೆಚ್ಚು. ಸಿದ್ದಕಟ್ಟೆಯಲ್ಲಿ ಖಾಸಗಿ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಿಕ್ಷಣ ಸಂಸ್ಥೆಗಳು, ಸರಕಾರಿ ಪ್ರೌಢ, ಪದವಿ ಪೂರ್ವ, ಪದವಿ ಕಾಲೇಜುಗಳಿದ್ದು, ನಿತ್ಯವೂ ಸಾವಿರಾರು ವಿದ್ಯಾರ್ಥಿಗಳು ಈ ಜಂಕ್ಷನ್ ಬಳಸಿಯೇ ತೆರಳುತ್ತಾರೆ. ಸಂಗಬೆಟ್ಟು ಗ್ರಾ.ಪಂ. ಕಚೇರಿ, ಅಂಚೆ ಕಚೇರಿ, ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳು, ವಾಣಿಜ್ಯ ಕೇಂದ್ರಗಳು, ಮಾರುಕಟ್ಟೆ, ಉಪ ಆರೋಗ್ಯ ಕೇಂದ್ರ ಇವುಗಳಿಗೆ ಸುಮಾರು 3ರಿಂದ 5 ಸಾವಿರ ಮಂದಿ ಹೋಗುತ್ತಾರೆ.
Related Articles
Advertisement
ಕೂಡಲೇ ಬೀದಿದೀಪ ಉರಿಯಲಿಪ್ರಸ್ತುತ ಜಂಕ್ಷನ್‌ನ ಮಧ್ಯ ಭಾಗದಲ್ಲಿ ವಿಶಾಲವಾದ ವೃತ್ತವೊಂದನ್ನು ನಿರ್ಮಿಸಿದರೆ ಸುತ್ತಲೂ ಸ್ಥಳ ಸಿಗುವುದರಿಂದ ವಾಹನ ಸಂಚಾರ ಸುಗಮವಾಗಲಿದೆ. ಇಲ್ಲಿರುವ ಹೈಮಾಸ್ಟ್ ದೀಪಸ್ತಂಭದಲ್ಲಿ ಒಂದೇ ದೀಪ ಉರಿಯುತ್ತಿದ್ದು, ಮೂರೂ ದೀಪಗಳು ಉರಿಸಲು ಪಂಚಾಯತ್ ಕೂಡಲೇ ಕ್ರಮ ಕೈಗೊಳ್ಳಬೇಕಿದೆ. ಇಲ್ಲಿ ಜನಸಂಚಾರಕ್ಕೆ ತಕ್ಕಂತೆ ಆಟೋ ರಿಕ್ಷಾಗಳ ಸಂಖ್ಯೆಯೂ ಜಾಸ್ತಿಯಾಗಿದೆ. ಸುತ್ತಮುತ್ತ ಸಾಕಷ್ಟು ಖಾಸಗಿ ಒಡೆತನದ ಅಂಗಡಿ ಮುಂಗಟ್ಟುಗಳಿದ್ದು, ಅವುಗಳ ಎದುರು ನೋ ಪಾರ್ಕಿಂಗ್ ಫಲಕ ಹಾಕಲಾಗಿದೆ. ಆದ ಕಾರಣ ರಿಕ್ಷಾ ಪಾರ್ಕಿಂಗ್ ಗೆ ಸೂಕ್ತ ಜಾಗ ನೀಡಬೇಕಿದೆ. ಪಂಚಾಯತ್ ಸೂಚಿಸಿದ ಸ್ಥಳದಲ್ಲಿ ನಿಲ್ಲಿಸಲು ಒಪ್ಪದ ರಿಕ್ಷಾ ಚಾಲಕರು, ರಸ್ತೆಯ ಬದಿಗಳಲ್ಲಿ ನಿಲ್ಲಿಸುತ್ತಿದ್ದಾರೆ. ಇದರಿಂದ ಪಾದಚಾರಿಗಳಿಗೆ, ಬಸ್‌ಗಾಗಿ ಕಾಯುವವರಿಗೆ ಸ್ವಲ್ಪಮಟ್ಟಿನ ತೊಂದರೆಯಾಗುತ್ತಿದೆ. ಆದ್ದರಿಂದ ರಿಕ್ಷಾ ನಿಲ್ಲಿಸಲು ಸೂಕ್ತ ಸ್ಥಳವನ್ನು ನೀಡಬೇಕಿದೆ. ಸುಸಜ್ಜಿತ ಬಸ್ ನಿಲ್ದಾಣವಾಗಲಿ
ಬಂಟ್ವಾಳ-ಮೂಡಬಿದಿರೆ ರಸ್ತೆಯಲ್ಲಿ ಎರಡೂ ಬದಿಗೆ ಬಸ್ ನಿಲ್ದಾಣವಿದೆ. ಆದರೆ ಇವು ಚಿಕ್ಕದು. ಬಂಟ್ವಾಳ ಕಡೆಯ ಬಸ್ ನಿಲ್ದಾಣ ಖಾಸಗಿ ನಿರ್ಮಿತ. ವೇಣೂರು ಕಡೆ ಬಸ್ ನಿಲ್ದಾಣವಿಲ್ಲ. ಮೂರೂ ಕಡೆ ಸುಸಜ್ಜಿತ ಬಸ್ ನಿಲ್ದಾಣವಾಗಬೇಕಿದೆ. ಈ ಹಿಂದೆ ಇಲ್ಲಿನ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ 1ಕೋಟಿ ರೂ. ಅನುದಾನ ನೀಡಿದ್ದರೂ ಯೋಜಿತ ಕಾಮಗಾರಿ ಸಮರ್ಪಕವಾಗಿಲ್ಲ. ಆದ ಕಾರಣ ಡಿವೈಡರ್ ಬಳಸಿ ದ್ವಿಪಥ ರಸ್ತೆ ನಿರ್ಮಿಸುವ ಯೋಜನೆ ನನೆಗುದಿಗೆ ಬಿದ್ದಿದೆ. ರಸ್ತೆ ಡಿವೈಡರ್ ನಿರ್ಮಿಸಿದಲ್ಲಿ ವಾಹನಗಳ ಅಡ್ಡಾದಿಡ್ಡಿ ಚಲನೆಗೆ ತಡೆ ಬೀಳುವುದಲ್ಲದೇ ವಾಹನಗಳು ಮತ್ತು ಪಾದಚಾರಿಗಳಿಗೆ ಸಂಚಾರ ಸುಗಮವಾಗಲಿದೆ. ಜತೆಗೆ ರಸ್ತೆ ಸೂಚನ ಫಲಕಗಳನ್ನೂ ಅಳವಡಿಸಬೇಕು. ಇವರಿಗೆಲ್ಲ ಇದೇ ಪೇಟ
ಸಂಗಬೆಟ್ಟು, ಕುಕ್ಕಿಪಾಡಿ, ಆರಂಬೋಡಿ, ರಾಯಿ, ಅರಳ, ಇರುವೈಲು 6 ಗ್ರಾಮ ಪಂ.ಗಳ ಸಂಗಬೆಟ್ಟು, ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು, ಆರಂಬೋಡಿ, ಗುಂಡೂರಿ, ಅರಳ, ರಾಯಿ, ಕೊಯಿಲ, ಪುಚ್ಚೆಮೊಗರು ಹೀಗೆ 10 ಗ್ರಾಮಗಳ ಸಿದ್ದಕಟ್ಟೆ, ಕರ್ಪೆ, ಹೆಣ್ಣೂರುಪದವು, ರಾಯಿ, ಕೊಯಿಲ, ಅರಳ ಅಣ್ಣಳಿಕೆ, ಕುದ್ಕೋಳಿ, ಪುಚ್ಚೆಮೊಗರು, ಸಂಗಬೆಟ್ಟು, ಆರಂಬೋಡಿ, ಹೊಕ್ಕಾಡಿಗೋಳಿ, ಹನ್ನೆರಡುಕವಲು, ಉಪ್ಪಿರ, ಪೂಂಜ, ಗುಂಡೂರಿ, ಉಮನೊಟ್ಟು, ಕೊನೆರೊಟ್ಟು ಪ್ರದೇಶಗಳ ಜನರು ವ್ಯವಹಾರಗಳಿಗೆ ಈ ಪೇಟೆಯನ್ನೇ ಅವಲಂಬಿಸಿದ್ದಾರೆ. ಸೌಲಭ್ಯಗಳಿಗೆ ಗಮನ
ಪಂಚಾಯತ್‌ನಲ್ಲಿ ತ್ಯಾಜ್ಯ ವಿಲೇವಾರಿ ಘಟಕವಿದ್ದು, 2 ದಿನಗಳಿಗೊಮ್ಮೆ ತ್ಯಾಜ್ಯ ವಿಲೇವಾರಿ ನಡೆಸಲಾಗುತ್ತಿದೆ. ಸ್ವಚ್ಛತೆ ಬಗ್ಗೆ ಶಾಲೆ, ಕಾಲೇಜು, ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಅಧಿಕೃತ ರಿಕ್ಷಾ ಪಾರ್ಕಿಂಗ್‌ಗೆ ಸ್ಥಳ ಸೂಚಿಸಿದ್ದು, ಬಸ್ ನಿಲ್ದಾಣದ ನಿರ್ಮಾಣಕ್ಕೆ ಸ್ಥಳದ ಕೊರತೆ ಇದೆ.
– ಸಿಲ್ವಿಯಾ ಫೆರ್ನಾಂಡಿಸ್
ಪಂ.ಅ. ಅಧಿಕಾರಿ, ಸಂಗಬೆಟ್ಟು ಗ್ರಾ.ಪಂ ರತ್ನದೇವ್ ಪುಂಜಾಲಕಟ್ಟೆ