ರಕ್ಕಾ (ಸಿರಿಯಾ): ಕೆಲವೇ ವರ್ಷಗಳ ಹಿಂದೆ, ಸಿರಿಯಾದ ಸಾರ್ವಜನಿಕರ ಹಿಂಸೆ ಹಾಗೂ ವಧಾಸ್ಥಾನವಾಗಿದ್ದ ಅಲ್-ನಯೀಮ್ ನಗರದ ಮುಖ್ಯ ವೃತ್ತ ಇಂದು ಪ್ರೇಮಿಗಳ, ಪ್ರವಾಸಿಗರ ಹಾಗೂ ಸ್ಥಳೀಯರ ವಿಹಾರದ ತಾಣವಾಗಿ ಪರಿವರ್ತನೆಗೊಂಡಿದೆ.
ಸಿರಿಯಾ ಅಂದರೆ ಅದು ಇಸ್ಲಾಮಿಕ್ ಸ್ಟೇಟ್ ಉಗ್ರರ ತವರೂರು. 2014ರಿಂದ 2017ರವರೆಗೆ ರಕ್ಕಾ ನಗರವನ್ನು ತಮ್ಮ ರಾಜಧಾನಿ ಯಾಗಿಸಿಕೊಂಡಿದ್ದ ಅವಧಿಯಲ್ಲಿ ಈ ವೃತ್ತ ಅವರ ರಕ್ಕಸ ಕ್ರೌರ್ಯಕ್ಕೆ, ರಕ್ತಪಾತಕ್ಕೆ, ಸಾಮೂಹಿಕ ಹತ್ಯೆಗೆ ದಿನಂಪ್ರತಿ ಸಾಕ್ಷಿಯಾಗುತ್ತಲೇ ಇತ್ತು. ಪ್ರತಿದಿನ ಇಲ್ಲಿ ಯಾವುದಾದರೊಂದು ಕ್ರೌರ್ಯ ನಡೆಯುತ್ತಲೇ ಇದ್ದಿದ್ದರಿಂದ ಜನರು, ಈ ವೃತ್ತದ ಕಡೆಗೆ ಬರುವುದನ್ನು ಜನರು ಸಾಧ್ಯವಾದಷ್ಟೂ ತಪ್ಪಿಸುತ್ತಿದ್ದರು. ಇದಕ್ಕೆ ನರಕದ ವೃತ್ತ ಎಂಬ ಅಡ್ಡ ಹೆಸರೂ ಬಂದಿತ್ತು.
ಎರಡು ವರ್ಷಗಳ ಹಿಂದೆ ಸಿರಿಯಾ ಸೇನೆಯಿಂದ ಐಸಿಸ್ ಪರಾಭವಗೊಂಡಿರುವುದಾಗಿ ಘೋಷಣೆಯಾದ ಬೆನ್ನಲ್ಲೇ, ಅಲ್ಲಿ ಸಾರ್ವಜನಿಕರ ಸಹಜ ಜೀವನಕ್ಕೆ ಅವಕಾಶ ಸಿಕ್ಕಿದೆ. ನಗರವೂ ಅಭಿವೃದ್ಧಿಯಾಗುತ್ತಿದೆ. ಈ ಬೆಳವಣಿಗೆಯ ಬೆನ್ನಲ್ಲೇ, ಈ ವೃತ್ತವನ್ನು ನವೀಕರಣಗೊಳಿಸಿ ಅದನ್ನು ಸಾರ್ವಜನಿಕರ ತಾಣವಾಗಿ ಪರಿವರ್ತಿಸಲಾಗಿದೆ.
ಇದನ್ನೂ ಓದಿ:ಪದ್ಮಶ್ರೀ ಹಿಂಪಡೆಯಿರಿ : ಕಂಗನಾ ಸ್ವಾತಂತ್ರ್ಯದ ಹೇಳಿಕೆ ‘ದೇಶದ್ರೋಹ’ ಎಂದ ಕಾಂಗ್ರೆಸ್
ಈಗ ಅಲ್ಲಿ, ಪ್ರೇಮಿಗಳು, ಕುಟುಂಬಗಳು ಬಂದು ಸಂಜೆ ಕಾಲ ಕಳೆಯುತ್ತಿದ್ದಾರೆ. ಇಲ್ಲೀಗ ಐಸ್‌ಕ್ರೀಂ, ತಿನಿಸುಗಳ ವ್ಯಾಪಾರಗಳೂ ಭರ್ಜರಿಯಾಗಿ ನಡೆಯುತ್ತಿದೆ. ಘನಘೋರ ಛಾಯೆ ಈಗ ಅಲ್ಲಿ ಸಂಪೂರ್ಣವಾಗಿ ಮಾಯವಾಗಿದೆ ಎಂದು ಮೂಲಗಳು ತಿಳಿಸಿವೆ.