ಡಮಾಸ್ಕಸ್: ಸಿರಿಯಾ ಸರ್ವಾಧಿಕಾರಿ ಅಸಾದ್ ಕುಟುಂಬವು ಬರೋಬ್ಬರಿ 1 ಲಕ್ಷ ಮಂದಿಯನ್ನು ಬಲಿಪಡೆದಿದೆ ಎಂದು ವರದಿಗಳು ತಿಳಿಸಿವೆ. 1970ರಲ್ಲಿ ಅಧಿಕಾರ ಹಿಡಿದ ಅಸಾದ್ ತಂದೆ ಹಫೇಜ್ ಆರಂಭದಿಂದಲೂ “ಒಡೆದು ಆಳುವ ನೀತಿ’ಯನ್ನೇ ಅನುಸರಿಸಿದ್ದರು.
ಹಫೇಜ್ ಸಾವಿನ ಬಳಿಕ ಅಧಿಕಾರಕ್ಕೆ ಬಂದ ನೇತ್ರತಜ್ಞ ಡಾ.ಅಸಾದ್, ಆರಂಭದಲ್ಲಿ ಸುಧಾರಣಾವಾದಿಯಂತೆ ಕಂಡಿದ್ದರು. ಆದರೆ, ನಂತರದ ದಿನಗಳಲ್ಲಿ ಅವರು ದಮನಕಾರಿ ನೀತಿ ಅನುಸರಿಸಲಾರಂಭಿಸಿದರು. ತಮ್ಮ ಸರ್ಕಾರದ ವಿರುದ್ಧ ಧ್ವನಿಯೆತ್ತಿದ 1 ಲಕ್ಷದಷ್ಟು ಮಂದಿಯನ್ನು ಬಲಿಪಡೆದರು. ಈ ಪೈಕಿ 30 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸೈದ್ನಾಯಾ ಜೈಲಲ್ಲಿ ಗಲ್ಲಿಗೇರಿಸಲಾಗಿದೆ.
ಅಸಾದ್ ಆಡಳಿತ, ಜೈಲಲ್ಲಿ ಕೈದಿಗಳಿಗೆ ಚಿತ್ರಹಿಂಸೆ ನೀಡುತ್ತಿತ್ತು. ಗಲ್ಲಿಗೇರಿಸುವ ದಿನ ಕೈದಿಗಳ ಬಳಿ ಬಂದು, ನಿಮ್ಮನ್ನು ಸಾಮಾನ್ಯ ಸೆಲ್‌ಗೆ ರವಾನಿಸಲಾಗುತ್ತದೆ ಎಂದು ಹೇಳಿ, ನೆಲಮಹಡಿಗೆ ಕರೆದೊಯ್ದು ಸತತ 2-3 ಗಂಟೆ ಕಾಲ ಥಳಿಸಲಾಗುತ್ತಿತ್ತು. ಮಧ್ಯರಾತ್ರಿ ಕಣ್ಣಿಗೆ ಬಟ್ಟೆ ಕಟ್ಟಿ, ಟ್ರಕ್‌ಗಳಿಗೆ ತುಂಬಿ ಮತ್ತೂಂದೆಡೆಗೆ ಕರೆದೊಯ್ದು, ನೇಣು ಹಾಕಲಾಗುತ್ತಿತ್ತು. ವಾರಕ್ಕೆ 2 ಬಾರಿ ತಲಾ 50 ಮಂದಿಯನ್ನು ಗಲ್ಲಿಗೇರಿಸಲಾಗುತ್ತಿತ್ತು ಎಂದು ವರದಿ ಹೇಳಿದೆ.
ಅಸಾದ್ ಆಡಳಿತ ಕೊನೆಯಾಗುತ್ತಿದ್ದಂತೆ ಬಂಡುಕೋರರು ಮೊದಲು ಹೋಗಿದ್ದೇ ಡಮಾಸ್ಕಸ್‌ನ “ಮಾನವ ವಧಾಗೃಹ’ ಎಂದೇ ಕರೆಯಲ್ಪಡುವ ಈ ಸೈದ್ನಾಯಾ ಜೈಲಿಗೆ! ಅಲ್ಲಿಗೆ ಹೋಗಿ ಅಲ್ಲಿದ್ದ ಸಾವಿರಾರು ಕೈದಿಗಳನ್ನು ಬಂಡುಕೋರರು ಬಿಡುಗಡೆ ಮಾಡಿದ್ದಾರೆ.
ಮಧ್ಯಪ್ರಾಚ್ಯದ ಮತ್ತೊಬ್ಬ ಸರ್ವಾಧಿಕಾರಿ ಯುಗಾಂತ್ಯ
ಯೆಮೆನ್, ಈಜಿಪ್ಟ್, ಲಿಬಿಯಾ, ಟುನಿಶಿಯಾ ಮತ್ತು ಇದೀಗ ಸಿರಿಯಾ ! ಮಧ್ಯಪ್ರಚಾದ್ಯಲ್ಲಿ ದುರಂತ ಪತನಕಂಡ ಸರ್ವಾಧಿಕಾರಿಗಳ ಸಾಲಿಗೆ ಅಸಾದ್ ಸೇರ್ಪಡೆಯಾಗಿದ್ದಾರೆ. 1979 ರಿಂದ 2003ರ ವರೆಗೆ ಇರಾಕ್‌ನಲ್ಲಿ ಸರ್ವಾಧಿಕಾರಿಯಾಗಿ ಮೆರೆದ ಸದ್ಧಾಂ ಹುಸೇನ್ 2003ರಲ್ಲಿ ತನ್ನ ಸೇನೆಯನ್ನು ಗಲ್ಫ್ ಯುದ್ಧಕ್ಕೆ ಅಣಿಯಾಗಿಸಿ ಪಾಶ್ಚಿಮಾತ್ಯ ರಾಷ್ಟ್ರಗಳನ್ನ ತಾನೇ ಮೈಮೇಲೆ ಎಳೆದುಕೊಂಡು ನಾಶವಾದರು.
1969 ರಿಂದ 2011ರ ವರೆಗೂ ಲಿಬಿಯಾದಲ್ಲಿ ನಿರಂಕುಶಾಧಿಕಾರಿಯಾಗಿದ್ದ ಮೊಹಮ್ಮದ್ ಗಡಾಫಿ ವಿರುದ್ಧ 2011ರಲ್ಲಿ ಬಂಡುಕೋರರು ಹೋರಾಟ ನಡೆಸಿ, ಅವರನ್ನು ಹತ್ಯೆ ಮಾಡಿದ್ದರು. 1987 ರಿಂದ 2011ರ ವರೆಗೆ ಟುನಿಶೀಯಾ ಅಧ್ಯಕ್ಷನಾಗಿದ್ದ ಜೈನ್ ಎಲ್ ಅಬಿದಿನ್ ಬೆನ್ ಅಲಿಯನ್ನೂ ನಾಗರಿಕ ದಂಗೆಗಳು ಬುಡಮೇಲು ಮಾಡಿದ ಪರಿಣಾಮ ಆತ ಸೌದಿ ಅರೇಬಿಯಾಗೆ ಪಲಾಯನ ಮಾಡಬೇಕಾಯ್ತು. ಈಜಿಪ್ಟ್ನ ಸರ್ವಾಧಿಕಾರಿ ಮೊಹಮ್ಮದ್ ಮರ್ಸಿ ಅವರ ಆಡಳಿತವನ್ನೂ ನಾಗರಿಕ ದಂಗೆಗಳು ಬುಡಮೇಲು ಮಾಡಿದ್ದವು.
ಸಿರಿಯಾದಲ್ಲಿರುವ ಭಾರತೀಯರು ಸುರಕ್ಷಿತ: ಕೇಂದ್ರ ಸರ್ಕಾರ
ನವದೆಹಲಿ: ಸಿರಿಯಾದಲ್ಲಿರುವ ಭಾರತೀಯರು ಸುರಕ್ಷಿತರಾಗಿದ್ದಾರೆ. ಡಮಾಸ್ಕಸ್‌ನಲ್ಲಿರುವ ರಾಯಭಾರ ಕಚೇರಿ ಕಾರ್ಯವೆಸಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುವ 14 ಮಂದಿ ಸೇರಿದಂತೆ ಒಟ್ಟು 90 ಮಂದಿ ಭಾರತೀಯರು ಸಂಘರ್ಷ ಪೀಡಿತ ದೇಶದಲ್ಲಿದ್ದಾರೆ.