ಡಮಾಸ್ಕಸ್: ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ದೇಶದಿಂದ ಪಲಾಯನ ಮಾಡಿದ್ದಾರೆ ಎಂಬ ವರದಿಗಳ ಮಧ್ಯೆ, ಸಿರಿಯನ್ ಬಂಡುಕೋರ ಪಡೆಗಳು ಭಾನುವಾರ (ಡಿ.08) ರಾಜಧಾನಿ ಡಮಾಸ್ಕಸ್ ನ ನಿಯಂತ್ರಣವನ್ನು ಪಡೆದುಕೊಂಡಿವೆ. ಬಂಡುಕೋರ ಗುಂಪುಗಳು ಸರ್ಕಾರಿ ಪಡೆಗಳಿಂದ ಯಾವುದೇ ಪ್ರತಿರೋಧವನ್ನು ಎದುರಿಸಲಿಲ್ಲ.
24 ವರ್ಷಗಳ ಕಾಲ ದೇಶವನ್ನು ಕಠಿಣ ಮುಷ್ಟಿಯಿಂದ ಆಳಿದ ಅಸ್ಸಾದ್ ಅವರು ಅಜ್ಞಾತ ಸ್ಥಳಕ್ಕೆ ವಿಮಾನದಲ್ಲಿ ಪರಾರಿಯಾಗಿದ್ದಾರೆ ಎಂದು ರಾಯಿಟರ್ಸ್ ಜೊತೆ ಮಾತನಾಡಿದ ಹಿರಿಯ ಸಿರಿಯಾ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ. ಅಸ್ಸಾದ್ ಆಡಳಿತ ಪತನಗೊಂಡಿದೆ ಎಂದು ಸೇನಾ ಕಮಾಂಡ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದು ವರದಿಯಾಗಿದೆ.
“ನಿರಂಕುಶಾಧಿಕಾರಿ ಬಶರ್ ಅಲ್-ಅಸ್ಸಾದ್ ಪಲಾಯನ ಮಾಡಿದ್ದಾನೆ. ನಾವು ಡಮಾಸ್ಕಸನ್ನು ನಿರಂಕುಶಾಧಿಕಾರಿ ಬಶರ್ ಅಲ್-ಅಸ್ಸಾದ್‌ನಿಂದ ಮುಕ್ತಗೊಳಿಸುತ್ತೇವೆ” ಎಂದು ಬಂಡುಕೋರರು ಘೋಷಿಸಿದರೆಂದು ಅಲ್ ಜಜೀರಾ ವರದಿ ಮಾಡಿದೆ.
ಹಯಾತ್ ತಹ್ರೀರ್ ಅಲ್-ಶಾಮ್ ಬಂಡಾಯ ಬಣವು ಹೇಳಿಕೆಯಲ್ಲಿ, “ನಾವು ಇಂದು 12-8-2024, ಈ ಕರಾಳ ಯುಗದ ಅಂತ್ಯ ಮತ್ತು ಸಿರಿಯಾದ ಹೊಸ ಯುಗದ ಆರಂಭವನ್ನು ಘೋಷಿಸುತ್ತೇವೆ” ಎಂದಿದೆ.
ಸಿರಿಯನ್ ಮಿಲಿಟರಿ ಮತ್ತು ಭದ್ರತಾ ಪಡೆಗಳು ಡಮಾಸ್ಕಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಿಂದೆ ಸರಿದಿವೆ ಎಂದು ಬ್ರಿಟನ್ ಮೂಲದ ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ. ಸಿರಿಯಾದೊಳಗಿನ ಮೂಲಗಳನ್ನು ಅವಲಂಬಿಸಿರುವ ಯುದ್ಧ ಮಾನಿಟರ್, ಬಂಡುಕೋರರ ಆಕ್ರಮಣದ ಮಧ್ಯೆ ಅಧಿಕಾರಿಗಳು ಮತ್ತು ಸೈನಿಕರು ವಿಮಾನ ನಿಲ್ದಾಣವನ್ನು ತ್ಯಜಿಸಿದ್ದಾರೆ ಎಂದು ವರದಿ ಮಾಡಿದೆ.