ಬೆಂಗಳೂರು : ಆರ್ ಎಸ್.ಎಸ್ ನವರು ಹಿಂದೆ ಚಡ್ಡಿ ಹಾಕುತ್ತಿದ್ದರು, ಈಗ ಪ್ಯಾಂಟ್ ಹಾಕುತ್ತಿದ್ದಾರೆ. ನಮ್ಮವರು ಪ್ರತಿಭಟನೆ ಸಂದರ್ಭದಲ್ಲಿ ಸಾಂಕೇತಿಕವಾಗಿ ಒಂದೇ ಒಂದು ಚಡ್ಡಿ ಸುಟ್ಟು ಹಾಕಿದ್ದಾರೆ. ಅದು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ದೊಡ್ಡ ಅಪರಾಧವಾಗಿ ಕಂಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಾಖ್ಯಾನಿಸಿದ್ದಾರೆ.
ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು, ಇವರೇನು ಮನೆಗೆ ಬೆಂಕಿ ಹಚ್ಚುವ ಅಥವಾ ಬೆಂಕಿಯನ್ನು ಸಮಾಜ ವಿರೋಧಿ ಕೆಲಸಕ್ಕೆ ಬಳಸಿಲ್ಲ. ಇದು ಕಾನೂನು ವಿರೋಧಿ ಕೃತ್ಯ ಹೇಗಾಗುತ್ತದೆ? ಕಾನೂನು ಉಲ್ಲಂಘನೆಗಾಗಿ ಗುಂಪುಗೂಡಿರುವುದು ಹೇಗಾಗುತ್ತದೆ ? ಒಬ್ಬರೇ ಪ್ರತಿಭಟನೆ ಮಾಡುವುದಕ್ಕಾಗುತ್ತದೆಯೇ ? ಇವರು ಕಾಂಪೌಂಡ್ ಗೇಟ್ ನ ಒಳಗಡೆ ಪ್ರವೇಶಿಸಿದ್ದಾರೆ, ಮನೆಗೆ ಪ್ರವೇಶ ಮಾಡಿಲ್ಲ. ಆಗ ಪೊಲೀಸರು ಏನು ಮಾಡುತ್ತಿದ್ದರು? ತಡೆಯಬೇಕಿತ್ತು ಅಲ್ಲವೇ? ಎಂದು ಪ್ರಶ್ನಿಸಿದರು.
ಈಶ್ವರಪ್ಪ 144 ಸೆಕ್ಷನ್ ಹಾಕಿದಾಗ ಮೆರವಣಿಗೆ ಮಾಡಿದ್ದು ಕಾನೂನು ಉಲ್ಲಂಘನೆ ಅಲ್ಲವೇ? ಜನರಲ್ಲಿ ದ್ವೇಷ ಭಾವನೆ ಹುಟ್ಟು ಹಾಕುವ ಕೆಲಸ ಮಾಡಿದ ಈಶ್ವರಪ್ಪ ಅವರ ಮೇಲೆ ಗೃಹ ಸಚಿವರು ಏನು ಕ್ರಮ ಕೈಗೊಂಡಿದ್ದಾರೆ? ಅವರೂ ಶಿವಮೊಗ್ಗ ಜಿಲ್ಲೆಯವರೇ ಅಲ್ವಾ? ಬೀದರ್ ನಲ್ಲಿ 144 ಸೆಕ್ಷನ್ ಇದ್ದಾಗ ಕೇಂದ್ರ ಸಚಿವ ಭಗವಂತ್ ಖೂಬಾ ಅವರು ಕಾನೂನು ಉಲ್ಲಂಘನೆ ಮಾಡಿದ್ದರು, ಅವರ ಮೇಲೆ ಏನು ಕ್ರಮ ಕೈಗೊಂಡಿದ್ದಾರೆ? 25-30 ಜನ ಎನ್,ಎಸ್,ಯು,ಐ ಸಂಘಟನೆ ಸದಸ್ಯರು ಪ್ರತಿಭಟನೆ ಮಾಡಿದರೆ ಕಾನೂನು ಉಲ್ಲಂಘನೆ ಹೇಗಾಗುತ್ತದೆ ಎಂದರು.
ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪಠ್ಯ ಪರಿಷ್ಕರಣೆ ಸಮಿತಿ ಮಾಡಿ, ಪಠ್ಯವನ್ನು ಕೇಸರೀಕರಣ ಮಾಡುತ್ತಿದ್ದಾರೆ ಎಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಈ ಬಗ್ಗೆ 71 ಸಾಹಿತಿಗಳು ಪ್ರತಿಭಟನೆ ಮಾಡಿ, ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ, 10 ಮಂದಿ ಸಾಹಿತಿಗಳು ನಮ್ಮ ಸಾಹಿತ್ಯವನ್ನು ಪಠ್ಯದಿಂದ ತೆಗೆದುಹಾಕಿ ಎಂದು ಹೇಳಿದ್ದಾರೆ. ಪ್ರತಿಭಟನೆ ಮಾಡುವುದು ನಾಗರಿಕರ ಮೂಲಭೂತ ಹಕ್ಕು, ಅದನ್ನೇ ನಮ್ಮ ವಿದ್ಯಾರ್ಥಿ ಸಂಘಟನೆಗಳು ಮಾಡಿವೆ. ಅವರ ಮೇಲೆ ಕೇಸ್ ದಾಖಲು ಮಾಡಿರುವುದು ತಪ್ಪು ಎಂದರು.
ಇದನ್ನೂ ಓದಿ : ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವುದೇ ಪಠ್ಯಪುಸ್ತಕದ ಆದ್ಯತೆಯಾಗಿದೆ: ಎಸ್.ಎಂ.ಪಾಟೀಲ ಗಣಿಹಾರ
ಅದೇ ದಿನ ತುಮಕೂರಿನಲ್ಲಿ ಕೆಡಿಪಿ ಸಭೆ ಇತ್ತು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು. ಅವರು ಪೊಲೀಸರ ಮೇಲೆ ಒತ್ತಡ ಹಾಕಿ ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಿಸಿ, ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರತಿಭಟನೆ ಮಾಡುವವರನ್ನು ಕರೆದುಕೊಂಡು ಹೋಗಿ ಒಂದು ಸಹಿ ಪಡೆದು ಬಿಟ್ಟು ಕಳುಹಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಗೃಹ ಸಚಿವರು ಎಲ್ಲಿ ಕ್ರಮ ಕೈಗೊಳ್ಳಬೇಕು ಅಲ್ಲಿ ಕ್ರಮ ತೆಗೆದುಕೊಳ್ಳುವುದಿಲ್ಲ. ಎಲ್ಲಿ ಕ್ರಮ ಕೈಗೊಳ್ಳುವ ಅಗತ್ಯ ಇಲ್ಲ ಅಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ. ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳ ಮೇಲೆ ಆರೇಳು ಜನ ರೌಡಿ ಶೀಟರ್ ಗಳು ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಯಾವ ಕ್ರಮ ಕೈಗೊಂಡಿಲ್ಲ. ಕಾನೂನು ಎಲ್ಲರಿಗೂ ಒಂದೇ ಅಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.