Advertisement

ಸಯ್ಯದ್‌ ಮುಷ್ತಾಕ್‌ ಅಲಿ ಟಿ20: ಕರುಣ್‌ ಶತಕ; ಕರ್ನಾಟಕಕ್ಕೆ ಜಯ

11:50 AM Jan 13, 2018 | |

ವಿಶಾಖಪಟ್ಟಣ: ಆರಂಭಿಕ ಆಟಗಾರ ಕರುಣ್‌ ನಾಯರ್‌ ಅವರ ಸ್ಫೋಟಕ ಶತಕದ ನೆರವಿನಿಂದ ಕರ್ನಾಟಕ ತಂಡ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಶುಕ್ರವಾರ ತಮಿಳುನಾಡು ತಂಡವನ್ನು 78 ರನ್‌ಗಳಿಂದ ಮಣಿಸಿದೆ. ಇದು ಈ ಕೂಟದಲ್ಲಿ ನಾಯರ್‌ ದಾಖಲಿಸಿದ 2ನೇ ಶತಕವಾಗಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ 20 ಓವರ್‌ಗಳಲ್ಲಿ 9 ವಿಕೆಟಿಗೆ 179 ರನ್‌ ಬಾರಿಸಿದರೆ, ತಮಿಳು ನಾಡು 16.3 ಓವರ್‌ಗಳಲ್ಲಿ 101 ರನ್ನಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ಹೀನಾಯವಾಗಿ ಸೋಲುಂಡಿತು. ತಮಿಳುನಾಡು ಪತನದಲ್ಲಿ ಲೆಗ್‌ಸ್ಪಿನ್ನರ್‌ ಪ್ರವೀಣ್‌ ದುಬೆ ಕೂಡ ನಿರ್ಣಾಯಕ ಪಾತ್ರ ವಹಿಸಿದರು. ಅವರ ಸಾಧನೆ 19 ರನ್ನಿಗೆ 4 ವಿಕೆಟ್‌.

Advertisement

ನಾಯರ್‌ ವೇಗದ ಬ್ಯಾಟಿಂಗ್‌
ಕರ್ನಾಟಕದ ಆರಂಭ ಆಘಾತಾಕಾರಿಯಾಗಿತ್ತು. 13 ರನ್‌ ಆಗುತ್ತಿದ್ದಂತೆ ಮಾಯಾಂಕ್‌ ಅಗರ್ವಾಲ್‌ (13) ಅನಗತ್ಯ ಹೊಡೆತಕ್ಕೆ ಯತ್ನಿಸಿ ಸಾಯಿ ಕಿಶೋರ್‌ಗೆ ವಿಕೆಟ್‌ ಒಪ್ಪಿಸಿದರು. ಕೂಡಲೇ ಕೆ. ಗೌತಮ್‌ ಶೂನ್ಯಕ್ಕೆ ಔಟಾದರು. ಕರ್ನಾಟಕ 14 ರನ್ನಿಗೆ 2 ವಿಕೆಟ್‌ ಉದುರಿಸಿಕೊಂಡಿತು. ಈ ಹಂತದಲ್ಲಿ ಕರುಣ್‌ ನಾಯರ್‌-ಆರ್‌. ಸಮರ್ಥ್ ಆಧಾರವಾಗಿ ನಿಂತರು. ತಂಡದ ಮೊತ್ತವನ್ನು 10 ಓವರ್‌ಗಳಲ್ಲಿ 97 ರನ್ನಿಗೆ ಏರಿಸಿದರು. ನಾಯರ್‌ ಸ್ಫೋಟಕ ಬ್ಯಾಟಿಂಗ್‌ನಿಂದ ತಮಿಳುನಾಡು ಬೌಲರ್‌ಗಳನ್ನು ಚೆಂಡಾಡತೊಡಗಿದರು. ಕೇವಲ 48 ಎಸೆತದಲ್ಲಿ ಶತಕ ಪೂರೈಸಿದರು. ಅಂತಿಮವಾಗಿ 52 ಎಸೆತಗಳಲ್ಲಿ 111 ರನ್‌ ಬಾರಿಸಿ ವಿಕೆಟ್‌ ಕಳೆದುಕೊಂಡರು. ನಾಯರ್‌ ಅವರ ಅಮೋಘ ಆಟದ ವೇಳೆ 8 ಬೌಂಡರಿ, 8 ಸಿಕ್ಸರ್‌ ಸಿಡಿಯಲ್ಪಟ್ಟಿತು. ತಮಿಳುನಾಡು ಪರ ಎ. ಡೇವಿಡ್ಸನ್‌ 30 ರನ್ನಿಗೆ 5 ವಿಕೆಟ್‌ ಪಡೆದು ಮಿಂಚಿದರು.

ಗೆಲುವಿಗೆ ದೊಡ್ಡ ಮೊತ್ತದ ಗುರಿ ಪಡೆದ ತಮಿಳುನಾಡು ಬ್ಯಾಟ್ಸ್‌ಮನ್‌ಗಳು ಆರಂಭದಿಂದಲೇ ತಿಣುಕಾಡಿದರು. ತಂಡದ ಮೊತ್ತ 6 ರನ್‌ ಆಗುತ್ತಿದ್ದಂತೆ ಮುಕುಂದ್‌, ದಿನೇಶ್‌ ಕಾರ್ತಿಕ್‌ ವಿಕೆಟ್‌ ಉರುಳಿತು. 3ನೇ ವಿಕೆಟಿಗೆ ಜತೆಯಾದ ವಾಷಿಂಗ್ಟನ್‌ ಸುಂದರ್‌-ವಿಜಯ್‌ ಶಂಕರ್‌ ತಂಡಕ್ಕೆ ಅಲ್ಪ ಚೇತರಿಕೆ ನೀಡಿದರು. ಆದರೆ ಕರ್ನಾಟಕದ ಬೌಲರ್‌ಗಳು ಈ ಜೋಡಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲು ಅವಕಾಶ ನೀಡಲಿಲ್ಲ. ಅನಂತರ ಬಂದ ಆಟಗಾರರು ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್‌ನತ್ತ ಹೆಜ್ಜೆಹಾಕಿದರು.

ಸಂಕ್ಷಿಪ್ತ ಸ್ಕೋರ್‌
ಕರ್ನಾಟಕ-20 ಓವರ್‌ಗಳಲ್ಲಿ 9 ವಿಕೆಟಿಗೆ 179 (ಕರುಣ್‌ ನಾಯರ್‌ 111, ಆರ್‌. ಸಮರ್ಥ್ 19, ಮಾಯಾಂಕ್‌ ಅಗರ್ವಾಲ್‌ 13, ಎ. ಡೇವಿಡ್ಸನ್‌ 30ಕ್ಕೆ 5, ಮುರುಗನ್‌ ಅಶ್ವಿ‌ನ್‌ 33ಕ್ಕೆ 2). 
ತಮಿಳುನಾಡು-16.3 ಓವರ್‌ಗಳಲ್ಲಿ 101ಆಲೌಟ್‌  (ವಾಷಿಂಗ್ಟನ್‌ ಸುಂದರ್‌ 34, ವಿಜಯ್‌ ಶಂಕರ್‌ 20, ಪ್ರವೀಣ್‌ ದುಬೆ 19ಕ್ಕೆ 4, ಕೆ. ಗೌತಮ್‌ 14ಕ್ಕೆ 2).

ಅಗ್ರಸ್ಥಾನದಲ್ಲಿ ಕರ್ನಾಟಕ
ಸದ್ಯ ಕರ್ನಾಟಕ 4 ಪಂದ್ಯಗಳಿಂದ 3 ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ (12 ಅಂಕ). ತಮಿಳು ನಾಡು, ಆಂಧ್ರಪ್ರದೇಶ ಕೂಡ 12 ಅಂಕ ಹೊಂದಿವೆ. ಈ ಮೂರೂ ತಂಡಗಳಿಗೆ ಒಂದೊಂದು ಪಂದ್ಯವಿದೆ. ರನ್‌ರೇಟ್‌ನಲ್ಲಿ ಮುಂದಿರುವುದು ಕರ್ನಾಟಕ ಪಾಲಿಗೊಂದು ಪ್ಲಸ್‌ಪಾಯಿಂಟ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next