Advertisement

ಸೈಯದ್‌ ಮುಷ್ತಾಕ್‌ ಅಲಿ ಟಿ20 : ಕರ್ನಾಟಕ ಸೂಪರ್‌ಲೀಗ್‌ಗೆ

06:30 AM Jan 15, 2018 | Team Udayavani |

ವಿಶಾಖಪಟ್ಟಣ: ಅಮೋಘ ಹೋರಾಟ ಪ್ರದರ್ಶಿಸಿದ ಕರ್ನಾಟಕ ತಂಡ ಸೈಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಕೇರಳ ವಿರುದ್ಧ ಗೆಲುವು ಸಾಧಿಸಿ ಸೂಪರ್‌ ಲೀಗ್‌ ಹಂತಕ್ಕೇರಿದೆ. ಇದು ಕರ್ನಾಟಕ ತಂಡಕ್ಕೆ ಲೀಗ್‌ ಹಂತದಲ್ಲಿ ಕೊನೆಯ ಪಂದ್ಯವಾಗಿತ್ತು. ದಕ್ಷಿಣ ವಲಯ ಗುಂಪಿನಲ್ಲಿ ರಾಜ್ಯ ತಂಡ ಒಟ್ಟು 16 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿ ಸೂಪರ್‌ ಲೀಗ್‌ಗೆ ಪ್ರವೇಶಿಸಿದೆ. ಇದೇ ಗುಂಪಿನಲ್ಲಿರುವ ತಮಿಳುನಾಡು ತಂಡ ಕೂಡ 16 ಅಂಕ ಸಂಪಾದಿಸಿ ರನ್‌ರೇಟ್‌ ಆಧಾರದಲ್ಲಿ 2ನೇ ತಂಡವಾಗಿ ಸೂಪರ್‌ ಲೀಗ್‌ಗೇರಿದೆ.

Advertisement

ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ 20 ಓವರ್‌ಗೆ 6 ವಿಕೆಟ್‌ ಕಳೆದುಕೊಂಡು 181 ರನ್‌ ದಾಖಲಿಸಿತ್ತು. ಗುರಿ ಬೆನ್ನುಹತ್ತಿದ ಕೇರಳ ತಂಡ 19.2 ಓವರ್‌ಗೆ 161 ರನ್‌ ಬಾರಿಸಿ ಆಲೌಟ್‌ ಆಗಿದೆ.

ಆರಂಭದಲ್ಲಿ ಮಿನುಗಿದ ಕೇರಳ: ಗುರಿ ಬೆನ್ನುಹತ್ತಿದ ಕೇರಳ ತಂಡಕ್ಕೆ ಆರಂಭಿಕರಾದ ಸಂಜು ಸ್ಯಾಮ್ಸನ್‌ ಮತ್ತು ವಿಷ್ಣು ವಿನೋದ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿ ಗೆಲುವಿನ ಭರವಸೆ ನೀಡಿದ್ದರು. ಈ ಜೋಡಿ ಮೊದಲ ವಿಕೆಟ್‌ಗೆ 9.3 ಓವರ್‌ಗೆ 109 ರನ್‌ ಬಾರಿಸಿತ್ತು. 

ಈ ಹಂತದಲ್ಲಿ ಕೇರಳ ತಂಡ ಸುಲಭ ಗೆಲುವು ಸಾಧಿಸುತ್ತೆ ಎಂದೇ ಅಂದಾಜಿಸಲಾಗಿತ್ತು. ಆದರೆ ನಂತರ ನಡೆದಿದ್ದೇ
ಬೇರೆ. ಕರ್ನಾಟಕದ ಬೌಲರ್‌ಗಳು ಭರ್ಜರಿ ದಾಳಿ ನಡೆಸುವ ಮೂಲಕ ಪಂದ್ಯದ ದಿಕ್ಕನ್ನು ಬದಲಿಸಿದರು. ಆ ನಂತರ ಬಂದ ಯಾವ ಬ್ಯಾಟ್ಸ್‌ಮನ್‌ ಕೂಡ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನೀಲ್ಲದಿರುವುದೇ ಕೇರಳ ಸೋಲಿಗೆ ಕಾರಣವಾಯಿತು.

ಕೇರಳ ಪರ ಸ್ಯಾಮ್ಸನ್‌ (71 ರನ್‌), ವಿಷ್ಣು ವಿನೋದ್‌ (46ರನ್‌) ಗರಿಷ್ಠ ರನ್‌ ಬಾರಿಸಿದರು. ಕರ್ನಾಟಕದ ಪರ
ಪ್ರವೀಣ್‌ ದುಬೆ 3, ವಿನಯ್‌ ಕುಮಾರ್‌ 2 ವಿಕೆಟ್‌ ಪಡೆದರು.

Advertisement

ಅಗರ್ವಾಲ್‌ ಸ್ಫೋಟಕ ಬ್ಯಾಟಿಂಗ್‌: ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ರಾಜ್ಯ ತಂಡಕ್ಕೆ ಆರಂಭಿಕ ಆಟಗಾರ
ಮಾಯಾಂಕ್‌ ಅಗರ್ವಾಲ್‌ ಆಸರೆಯಾದರು. ಮೊದಲ ವಿಕೆಟ್‌ಗೆ ಮಾಯಾಂಕ್‌ ಮತ್ತು ಕರುಣ್‌ ನಾಯರ್‌ 42 ರನ್‌
ಬಾರಿಸಿದರು. ಈ ಹಂತದಲ್ಲಿ ಕರುಣ್‌(18 ರನ್‌) ವಿಕೆಟ್‌ ಕಳೆದುಕೊಂಡರು. ನಂತರ ಬಂದ ಮನೀಶ್‌ ಪಾಂಡೆ (9
ರನ್‌) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ 3ನೇ ವಿಕೆಟ್‌ಗೆ ಜತೆಯಾದ ಮಾಯಾಂಕ್‌ ಮತ್ತು ಆರ್‌.ಸಮರ್ಥ್ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸುವಲ್ಲಿ ನೆರವಾದರು. ಮಾಯಾಂಕ್‌ 58 ಎಸೆತದಲ್ಲಿ 86 ರನ್‌ ಬಾರಿಸಿ ಔಟ್‌ ಆದರು. ಅವರ ಆಟದಲ್ಲಿ 9 ಬೌಂಡರಿ, 3 ಸಿಕ್ಸರ್‌ ಸೇರಿತ್ತು. ಉಳಿದಂತೆ ಆರ್‌.ಸಮರ್ಥ (27 ರನ್‌), ಕೆ.ಗೌತಮ್‌ (21 ರನ್‌) ಉತ್ತಮ ಕೊಡುಗೆ ನೀಡಿದರು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ 20 ಓವರ್‌ಗೆ 181/6 (ಮಾಯಾಂಕ್‌ 86, ಆರ್‌.ಸಮರ್ಥ್ 27, ಕೆಎಂ ಆಸಿಫ್
34ಕ್ಕೆ 2), ಕೇರಳ 19.2 ಓವರ್‌ಗೆ 161/10 (ಸ್ಯಾಮ್ಸನ್‌ 71, ವಿಷ್ಣು ವಿನೋದ್‌ 46, ಪ್ರವೀಣ್‌ ದುಬೆ 35ಕ್ಕೆ 3)

Advertisement

Udayavani is now on Telegram. Click here to join our channel and stay updated with the latest news.

Next