Advertisement

ಸಿಹಿ ಗೆಣಸು ಬೆಳೆಯುವುದು ಸುಲಭ; ಕೃಷಿ ಹೇಗೆ ?

02:54 PM Jul 09, 2021 | Team Udayavani |

ಉಷ್ಣ ವಲಯದ ಪ್ರಮುಖ ತರಕಾರಿಗಳಲ್ಲಿ ಸಿಹಿಗೆಣಸು ಕೂಡ ಒಂದು. ಉಪಬೆಳೆಯಾಗಿ ಇದರಲ್ಲಿ ಉತ್ತಮ ಆದಾಯ ಗಳಿಸಬಹುದು. ಇದು ಒಂದು ಗೆಡ್ಡೆ ತರಕಾರಿಯಾಗಿದ್ದು, ಬಳ್ಳಿಯಂತೆ ಹಬ್ಬಿ ಬೆಳೆಯುವ ಸಸಿ. ಮುಖ್ಯವಾಗಿ ಬಿಳಿ, ಹೊಂಬಣ್ಣ, ಕಿತ್ತಳೆ, ಕೆಂಪು ಮಿಶ್ರಿತ ಕಂದು ಬಣ್ಣ ಇತ್ಯಾದಿ ಬಗೆಗಳಿವೆ.

Advertisement

ಕೃಷಿ ಹೇಗೆ ?
ಗೆಣಸು ಗೆಡ್ಡೆಗಳಲ್ಲಿ ಬರುವ ಮೊಳಕೆಗಳನ್ನು ನೆಡುವ ಮೂಲಕ ಅಥವಾ ಬಳ್ಳಿಯ ಕಾಂಡ (ಹಂಬು) ತುಂಡು ಮಾಡಿ ನಾಟಿ ಮಾಡುವ ಮೂಲಕ ಕೃಷಿ ಮಾಡಲಾಗುತ್ತದೆ. ಉತ್ತಮ ಇಳುವರಿಗೆ ಆಯ್ದ ಗೆಣಸಿನ ಮೊಳಕೆಗಳನ್ನು ನಾಟಿ ಮಾಡುವುದು ಉತ್ತಮ. ಆದರೆ ಹೆಚ್ಚಿನ ಕಡೆ ಸುಲಭ ವಿಧಾನವಾದ ಕಾಂಡ ತುಂಡರಿಸಿ ನಾಟಿ ಮಾಡುವುದನ್ನು ಅನುಸರಿಸಲಾಗುತ್ತದೆ.

ಸುಮಾರು ಎರಡು ಅಡಿ ಅಗಲಕ್ಕೆ ಒಂದು ಅಡಿ ಆಳ ಮಣ್ಣನ್ನು ಅಗೆದು ಅದಕ್ಕೆ ಸ್ವಲ್ಪ ಸುಡು ಮಣ್ಣು, ಒಣಗಿದ ಹಟ್ಟಿಗೊಬ್ಬರ ಸೇರಿ ಮಡಿ ತಯಾರಿಸಿ ಅದರಲ್ಲಿ ಮೂರು ಅಡಿ ದೂರಕ್ಕೆ ಗೆಣಸಿನ ಮೊಳಕೆ ಅಥವಾ 2ರಿಂದ 3 ಅಡಿ ಉದ್ದದ ಗೆಣಸಿನ ಬಳ್ಳಿಯ ಕಾಂಡ (ಹಂಬು)ಗಳನ್ನು ತುಂಡರಿಸಿ ನಾಟಿ ಮಾಡಬೇಕು. ಬಳಿಕ ಅದಕ್ಕೆ ಬೇರೆಡೆಯಿಂದ ಸ್ವಲ್ಪ ಮಣ್ಣು ಸೇರಿಸಿ ನೆಲದಿಂದ ಒಂದು ಅಡಿ ಎತ್ತರಿಸಬೇಕು. ಮಡಿ ಗಳು ಸುಮಾರು ಐದು ಅಡಿ ದೂರ ಇದ್ದರೆ ಬಳ್ಳಿ ಹಬ್ಬಿ ಬೆಳೆಯಲು ಸಹಕಾರಿ.

ಕಾಂಡ ತುಂಡುಗಳನ್ನು ನೆಟ್ಟ ಸುಮಾರು 10ರಿಂದ 15 ದಿನಗಳಲ್ಲಿ ಅವುಗಳು ಬೇರು ಬಿಟ್ಟು 3 ವಾರಗಳೊಳಗಾಗಿ ಹುಲುಸಾಗಿ  ಬೆಳೆಯಲಾರಂಭಿಸುತ್ತವೆ. ಆಗ ಗೊಬ್ಬರ, ಸೊಪ್ಪು ನೀಡಿ ಅದರ ಮೇಲೆ ಮಣ್ಣು ಹಾಕಿ ಮುಚ್ಚಬೇಕು. ಮಡಿಯ ಮೇಲೆ ಹುಟ್ಟುವ ಕಳೆ ಕೀಳುವುದು
ಬಳ್ಳಿ ಚೆನ್ನಾಗಿ ಬೆಳೆಯಲು ಸಹಕಾರಿ. ಪ್ರತಿ ದಿನ ಸ್ವಲ್ಪ ನೀರು ಹಾಕಬೇಕು.

Advertisement

ನಾಟಿ ಮಾಡಿ 4ರಿಂದ 6 ತಿಂಗಳುಗಳಲ್ಲಿ ಗೆಣಸು ಕೊಯ್ಲಿಗೆ ಬರುತ್ತವೆ. ಗೆಣಸಿನ ಎಲೆಗಳು ಹಣ್ಣಾಗಲಾರಂಭಿಸುವುದೇ ಗೆಡ್ಡೆ ಕೊಯ್ಲಿಲಿಗೆ ಸಿದ್ಧವಾಗಿದೆ ಎಂಬುದರ ಸೂಚನೆ.

ರೋಗ, ಪ್ರಾಣಿಗಳ ಕಾಟ
ಸಿಹಿಗೆಣಸಿಗೆ ವಿವಿಧ ರೀತಿಯ ಶಿಲೀಂಧ್ರ ರೋಗಗಳು, ಕಪ್ಪುಕೊಳೆ ರೋಗ, ಕಾಂಡದ ಕೊಳೆಯುವಿಕೆ, ಕೀಟಗಳು, ಕಂಬಳಿ ಹುಳ, ಗೆದ್ದಲುಗಳ ಕಾಟ ಬಹಳಷ್ಟಿರುತ್ತದೆ ಮತ್ತು ಪ್ರಾಣಿಗಳ ಉಪಟಳದ ಬಗ್ಗೆಯೂ ಕೃಷಿಕರು ಎಚ್ಚರ ವಹಿಸಬೇಕಾಗುತ್ತದೆ.

ಹವಾಗುಣ ಮತ್ತು ಮಣ್ಣು
ವಿಪರೀತ ಮಳೆ ಬೀಳುವ, ಚಳಿ ಪ್ರದೇಶ ಸಿಹಿಗೆಣಸಿ ಕೃಷಿಗೆ ಅಷ್ಟು ಸೂಕ್ತವಲ್ಲ. ಇದು ಮುಖ್ಯವಾಗಿ ಉಷ್ಣ ವಲಯದ ಬೆಳೆ. 21-26 ಡಿಗ್ರಿ ಸೆ. ಉಷ್ಣಾಂಶ ಇರುವ ಪ್ರದೇಶವಾದರೆ ಉತ್ತಮ. ಜೂನ್‌ -ಜುಲೈ ಅಥವಾ ಡಿಸೆಂಬರ್‌ -ಜನವರಿ ಇದರ ನಾಟಿಗೆ ಸೂಕ್ತ ಸಮಯ. ಗೆಣಸು ಎಲ್ಲ ರೀತಿಯ ಮಣ್ಣುಗಳಲ್ಲಿ ಬೆಳೆಯಬಹುದಾದರೂ ಮರಳು ಮಿಶ್ರಿತ ಗೋಡು ಮಣ್ಣು ಅತ್ಯುತ್ತಮ. ಮಣ್ಣು ಸರಾಗವಾಗಿ ನೀರು ಬಸಿದು ಹೋಗುವಂತೆ ಇದ್ದರೆ ಇಳುವರಿ ಹೆಚ್ಚು. ಈ ಕೃಷಿಗೆ ಸಮತಟ್ಟಾದ ಬಿಸಿಲು ಬೀಳುವ ಬಯಲು ಪ್ರದೇಶ ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next