ಮೋಡ ಕವಿದು ಬಾನಂಗಳ ಕರಿಯ ಬಣ್ಣ ತಾಳಿದಾಗ ಎಲ್ಲೋ ಮರೆಯಲ್ಲಿ ಮುದುಡಿದ್ದ ಸೂರ್ಯ ಸಣ್ಣಗೆ ಮಿಂಚಿನ ಬಾನು-ಭುವಿಯಲ್ಲ ಬೆಳಕಾಗಿಸಲು ಹೊರಟಂತೆ, ಬದುಕೆಂಬ ಭವಣೆಯಲಿ ಬೆಂದು ನೊಂದಿದ್ದ ಮನವ ನೋಡಿ ಮೂಲೆಯಲ್ಲಿ ಉರಿಯುತ್ತಿದ್ದ ಹಣತೆ ನಗುತ್ತಿತ್ತು, ಹೇ ಮನುಜ! ನಿನಗೆ ಬೆಳಕ ನೀಡಲು ಹೋಗಿ ನಾನು ನನ್ನ ದೇಹವನ್ನೇ ಉರಿಸಿಕೊಂಡೆಯಲ್ಲೋ ಮೂರ್ಖ..!
ಹಣತೆಯ ಗಾತ್ರ ಕಿಂಚಿತ್ತಾದರೂ ಅವು ಜೀವನಕ್ಕೆ ನೀಡುವ ಸ್ಫೂರ್ತಿ ಬಹಳ ಮಹತ್ತರವಾದದ್ದು. ಜಗಕೆಲ್ಲ ಬೆಳಕ ನೀಡುವಾತ ಎಷ್ಟೇ ಪ್ರಕಾಶಮಾನವಾಗಿದ್ದರೂ ಇರುಳ ಕಳೆಯಲು ಅದೊಂದು ದಿನ ಹಣತೆಯ ಮೊರೆ ಹೋದ ಅದೆಷ್ಟೋ ನೆನಪುಗಳಿವೆ.
ಒಂದು ಹಣತೆಯ ಬೆಳಕಿನೆದುರಲ್ಲಿ ಹತ್ತಾರು ಮಂದಿ ಕುಳಿತು ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗುತ್ತಿದ್ದ ಸನ್ನಿವೇಶಗಳನ್ನು ನಮ್ಮ ಹಿರಿಯರಿಂದ ಕೇಳಿರಬಹುದು. ಹೀಗೆ ಹಣತೆಯ ಬೆಳಕು ನಮ್ಮ ಹಿರೀಕರಿಗೆ ಆತ್ಮೀಯವಾಗಿ ಇದ್ದಷ್ಟು ಇಂದಿನ ಯುವಜನತೆಗೆ ಹತ್ತಿರವಾಗಿಲ್ಲ. ಯಾಕಂದ್ರೆ ನಾವೆಲ್ಲ ಇಂದು ಇರುಳಿನಲ್ಲೂ ಸೂರ್ಯನನ್ನು ಕಲ್ಪಿಸಿಕೊಂಡವರು. ಆದರೂ ಕೂಡ ಬೆಳಕಿನ ಹಬ್ಬ ದೀಪಾವಳಿ ಎಂದಾಕ್ಷಣ ಮೊದಲಿಗೆ ನೆನಪಾಗುವುದೇ ಮನೆ ಜಗುಲಿಯಲ್ಲಿ ಕುಣಿಯುತ್ತಿದ್ದ ಸಾಲು ಸಾಲು ಹಣತೆಗಳು.
ಹಿಂದೊಂದು ದಿನ ಮಕ್ಕಳಾಟಿಕೆಯಲ್ಲಿ ಜಾನುವಾರುಗಳನ್ನು ಕೆರೆಯಲ್ಲಿ ಮೀಯಲು ಇಳಿಸಿ ಅಪರಾಹ್ನದ ವರೆಗೂ ನೀರಿನಲ್ಲೇ ಕಳೆದದ್ದು… ತುಳಸಿ, ದಾಸವಾಳ, ಕಾಡು ಹೂಗಳ ಪೋಣಿಸಿ ಕೊಟ್ಟಿಗೆಯ ಗಂಗೆ ತುಂಗೆ ಗೌರಿಗೆ ಹಾರ ಹಾಕಿದ್ದು… ಅಮ್ಮ ಸೆಗಣಿ ಸಾರಿಸಿದ ಮನೆಯಂಗಳಕ್ಕೆ ರಂಗೋಲಿಯ ಬಣ್ಣ ತುಂಬಿದ್ದು… ಅತ್ತೆ-ಮಾವ, ಚಿಕ್ಕಪ್ಪ-ಚಿಕ್ಕಮ್ಮ ಹೀಗೆ ಕುಟುಂಬ ಸಮೇತರಾಗಿ ಹರಟೆ ಹೊಡೆದಿದ್ದು… ಮುಂದೆ ಕುಂತಿದ್ದ ಅಜ್ಜಿ ಹೊಗೆ ತಾಳಲಾರದೆ ಕೆಮ್ಮುತ್ತಾ ದೋಸೆ ಹುಯ್ಯುತ್ತಿದ್ದಾಗ ಅದನ್ನು ನಾವೆಲ್ಲ ಕದ್ದು ತಿಂದಿದ್ದು… ಇರುಳಾಗುತ್ತಿದ್ದಂತೆ ಅಪ್ಪನೊಂದಿಗೆ ಪೂಜೆಯಲ್ಲಿ ಭಾಗವಹಿಸಿದ್ದು… ತೋಟದ ಮನೆಗೆ ಹೋಗಿ ಕೂ..ಕೂ ಎಂದು ಬಲೀಂದ್ರನನ್ನು ಕರೆದದ್ದು… ಪಟಾಕಿಗಳ ಸದ್ದು ತಾಳಲಾರದೆ ಕಿವಿ ಮುಚ್ಚಿಕೊಂಡಿದ್ದು…ಭಯವಿದ್ದರೂ ಬಣ್ಣದ ಸಿಡಿಮದ್ದುಗಳ ಹಾರಾಟ ಕಿರುಚಾಟ ನೋಡಬೇಕೆಂಬ ಆಸೆಯಿಂದ ಬಾಗಿಲ ಬಳಿ ಇಣುಕಿದ್ದು.. ಹೀಗೆ ದೀಪಾವಳಿ ಎಂದಾಕ್ಷಣ ಒಂದೊಮ್ಮೆ ಬಾಲ್ಯದ ಸಾಲು ಸಾಲು ನೆನಪುಗಳು ಕಣ್ಣಮುಂದೆ ಬಂದಾಗ ಹಾಯೆನಿಸುತ್ತದೆ.
ಅಂದು ದೀಪಾವಳಿಕೆಂದು ಕೊಡಿಸುತ್ತಿದ್ದ ಹೊಸ ಬಟ್ಟೆಯಲ್ಲಿ ಎಷ್ಟೆಲ್ಲಾ ಆಸೆಗಳು ಕನಸುಗಳು ತುಂಬಿರುತ್ತಿದ್ದವು ಎನ್ನುವುದನ್ನು ವರ್ಣಿಸಲು ಅಸಾಧ್ಯ. ಬಹುಶಃ ಇಂದಿನ ನಮ್ಮ ಯುವ ಪೀಳಿಗೆ ಕ್ರಮೇಣ ಎಲ್ಲಾ ಸುಖ ಸಂತೋಷಗಳನ್ನು ಕಳೆದುಕೊಂಡಿದೆ. ದೀಪಾವಳಿ ಎಂದರೆ ಕೇವಲ ಪಟಾಕಿ ಮೋಜು-ಮಸ್ತಿಗಳು ಮಾತ್ರ ಕಣ್ಣಿಗೆ ಗೋಚರಿಸುತ್ತವೆ. ಆದರೆ ಈ ಬೆಳಕಿನ ಹಬ್ಬದ ಮಹತ್ವ, ತಿಳಿವಳಿಕೆ ಇಂದು ಯಾರಿಗೂ ತಿಳಿದಂತೆ ಕಾಣುವುದಿಲ್ಲ. ಸದಾ ಬ್ಯುಸಿಯಾಗಿರು ಬ್ಯುಸಿನೆಸ್ ಲೈಫ್ ನಲ್ಲಿ ದೀಪಾವಳಿಯ ನಾಲ್ಕು ದಿನದ ರಜೆ ರಜೆ ಕೇವಲ ಪಿಕ್ನಿಕ್, ಫಿಲಂ, ಪಾರ್ಟಿ ಎಂದೇ ಕಳೆದು ಹೋಗುತ್ತೆ. ಆದರೆ ಒಂದು ಬಾರಿ ಕುಟುಂಬ ಸಮೇತರಾಗಿ ಹಬ್ಬ ಆಚರಿಸಿದಾಗ ಅಲ್ಲಿ ಸಿಗುವ ನೆಮ್ಮದಿ ,ಖುಷಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ…! ಹಾಗಾಗಿ ಈ ಬಾರಿ ನಿಮ್ಮ ದೀಪಾವಳಿ ಮನೆ ಮಂದಿಯ ಜತೆಗೆ ಸುಖ ಸಂತೋಷದಿಂದ ಕೂಡಿರಲಿ.
-ರೇಷ್ಮಾ ಎನ್ . ಬೆಳಾಲ್
ಎಸ್.ಡಿ.ಎಂ. ಕಾಲೇಜು ಉಜಿರೆ