Advertisement

ಮೂಸಂಬಿ ಕೃಷಿಯಲ್ಲಿ ಯಶಸ್ಸು ಕಂಡ ಕುಷ್ಟಗಿಯ ಪ್ರಗತಿಪರ ರೈತ : ವಿದೇಶಕ್ಕೂ ರಫ್ತಾಗುತ್ತಿದೆಯಂತೆ

02:52 PM Apr 21, 2022 | Team Udayavani |

ಕುಷ್ಟಗಿ : ಮೂಸಂಬಿ ಕೃಷಿ ನಂಬಿದರೆ ಯಾವೂದೇ ಕಾರಣಕ್ಕೂ ಆದಾಯಕ್ಕೆ ಮೋಸವಿಲ್ಲ ಎನ್ನುವುದನ್ನು ಕುಷ್ಟಗಿಯ ಪ್ರಗತಿ ಪರ ರೈತ ವೀರೇಶ ತುರಕಾಣಿ ನಿರೂಪಿಸಿದ್ದಾರೆ. ಈ ಬಾರಿ 7 ಎಕರೆ ಪ್ರದೇಶದಲ್ಲಿ ಮೂಸಂಬಿ ಬೆಳೆದು ಬರೋಬ್ಬರಿ 10 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ.

Advertisement

ಕುಷ್ಟಗಿಯ ವೀರೇಶ ತುರಕಾಣಿ ಅವರು, ತಾಲೂಕಿನ ಪ್ರಮುಖ ದಾಳಿಂಬೆ ಬೆಳೆಗಾರರು. ದಾಳಿಂಬೆ ಜೊತೆಯಲ್ಲಿ ಮೂಸಂಬಿ ಸಹ ಬೆಳೆಯಾಗಿ ಪ್ರಾಯೋಗಿಕವಾಗಿ ಬೆಳೆದಿದ್ದಾರೆ. ಕುಷ್ಟಗಿಯಿಂದ ಕಂದಕೂರು ಮಾರ್ಗದಲ್ಲಿ ಅವರ ತೋಟ ನಳನಳಿಸುವುದನ್ನು ಕಾಣಬಹುದು.

2016-2017ರಲ್ಲಿ ತಿರುಪತಿ ತೋಟಗಾರಿಕಾ ವಿಶ್ವ ವಿದ್ಯಾಲಯದಿಂದ ರಂಗಾಪೂರಿ ತಳಿಯ ಮೂಸಂಬಿ ನಾಟಿ ಮಾಡಿದ್ದಾರೆ. ಹನಿ ನೀರಾವರಿ ಆಧಾರಿತವಾಗಿ ಗಿಡದಿಂದ ಗಿಡಕ್ಕೆ 18 ಅಡಿ ಅಂತರದಲ್ಲಿ 1,600 ಗಿಡಗಳನ್ನು ನೆಡಲಾಗಿದೆ. ನಾಟಿ ಮಾಡಿ ಎರಡೂವರೆ ವರ್ಷದಿಂದ ಇಳುವರಿ ನೀಡುತ್ತಿದ್ದು, ಸದ್ಯ ಇದು ನಾಲ್ಕನೇಯ ಕಟಾವು ಆಗಿದೆ.

ಕುಷ್ಟಗಿ ಮೂಸಂಬಿ ದುಬೈಗೆ: ಕಳೆದ ಎರಡು ವರ್ಷದಲ್ಲಿ ಕೊರೊನಾದಿಂದಾಗಿ ಸೂಕ್ತ ಮಾರುಕಟ್ಟೆ, ಮೂಸಂಬಿಗೂ ಬೆಲೆ ಸಿಗಲಿಲ್ಲ. ಪ್ರತಿ ಕೆ.ಜಿಗೆ 15ರಿಂದ 20 ರೂ. ಗೆ ಮಾರಾಟವಾಗಿತ್ತು. ಇದೀಗ ಪ್ರತಿ ಕೆ.ಜಿ.ಗೆ 40 ರೂ. ಆಂಧ್ರಪ್ರದೇಶದ ಮೂಲದ ಮಧ್ಯವರ್ತಿಯೊಬ್ಬರು ಖರೀದಿಸಿದ್ದು, ದುಬೈಗೆ ರಪ್ತಾಗುತ್ತಿದೆ. ಈ ವಾರದಲ್ಲಿ ಕಟಾವು ಆರಂಭವಾಗಲಿದ್ದು, 24 ಟನ್ ಇಳುವರಿ ಪಡೆದಿದ್ದು 10 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ ಎನ್ನುತ್ತಾರೆ ವೀರೇಶ ತುರಕಾಣಿ.

ಇದನ್ನೂ ಓದಿ : ನಾಯಕನಹಟ್ಟಿ ದೇಗುಲದಲ್ಲಿ 67.65 ಲಕ್ಷ ರೂ. ಕಾಣಿಕೆ ಸಂಗ್ರಹ

Advertisement

ಜೂಸ್ ಗೆ ಬೇಡಿಕೆ: ಮೂಸಂಬಿ ಚಳಿಗಾಲದಲ್ಲೂ ಇಳುವರಿ ನಿರೀಕ್ಷಿಸಬಹುದಾಗಿದ್ದು ಆದರೆ ಮಾರುಕಟ್ಟೆಯಲ್ಲಿ ಆಗ ಈ ಹಣ್ಣಿಗೆ ಬೇಡಿಕೆ ಕಡಿಮೆ ಹೀಗಾಗಿ ಬೇಸಿಗೆಯಲ್ಲಿ ಇಳುವರಿ ಬರುವಂತೆ ಮಾಡುವುದೇ ಈ ಕೃಷಿಯ ಟೆಕ್ನಿಕ್ ಆಗಿದೆ. ಅಲ್ಲದೇ ಬೇಸಿಗೆಯಲ್ಲಿ ಮೂಸಂಬಿಯಲ್ಲಿನ ಸಿಟ್ರಿಕ್ ಅಂಶ ಹಣ್ಣಾದಂತೆ ಸ್ವಲ್ಪ ಸಿಹಿಗೆ ತಿರುಗುತ್ತಿದ್ದು ಹೀಗಾಗಿ ಬೇಸಿಗೆಯಲ್ಲಿ ಜ್ಯೂಸ್ ಗೆ ಬೇಡಿಕೆ ಇದೆ.

ಮಂಗಗಳ ಕಾಟವಿಲ್ಲ: ಮೂಸಂಬಿಗೆ ಮಂಗಗಳ ಕಾಟ ಇಲ್ಲ.‌ಯಾಕೆಂದರೆ ಈ ಹಣ್ಣಿನ ತಿರುಳು ಕಹಿಯಾಗಿದ್ದು, ಮಂಗಗಳು ಇದರ ಸಮೀಪ ಹೋಗುವುದಿಲ್ಲ. ಹೀಗಾಗಿ ಸಕಾಲಿಕ ನೀರು ನಿರ್ವಹಣೆ ಇದ್ದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ತೆಗೆಯಲು ಸಾಧ್ಯವಿದೆ.

ನೇರ ಮಾರುಕಟ್ಟೆ ವ್ಯವಸ್ಥೆ ಇಲ್ಲ: ಮೂಸಂಬಿ ನಂಬಿ ಕೃಷಿ ಮಾಡಿದರೆ ಬಡತನ ಇಲ್ಲ ಆದರೆ ನೀರಿನ ಗ್ಯಾರಂಟಿ ಇರಬೇಕು. ಪ್ರತಿ ನಿತ್ಯ ಪ್ರತಿ ಗಿಡಕ್ಕೆ 80 ಲೀಟರ್ ನೀರು ಬೇಕು. ಹೂ ಕಟ್ಟುವ ವೇಳೆ ಹೂಗಳು ಉದುರದಂತೆ ಹಾಗೂ ಮೂಸಂಬಿ ತೊಗಟೆ ಮೃದುವಾಗಿರಲು ಒಮ್ಮೆ ಸಿಂಪರಣೆ ಮಾಡಿದರೆ ಸಾಕು. ನೀರು ನಿರ್ವಹಣೆಯಲ್ಲಿ ವ್ಯತ್ಯಾಸವಾಗಬಾರದು ಹೀಗಾದರೆ ಉತ್ತಮ ಬೆಳೆ ತೆಗೆಯಬಹುದಾಗಿದೆ. 18 ಟನ್ ನಿಂದ ಇಳುವರಿ ಆರಂಭವಾಗಿದ್ದು, ಇದೀಗ 24 ಟನ್ ನಿರೀಕ್ಷಿಸಲಾಗಿದೆ. ಉತ್ತಮ ಇಳುವರಿ ಆದಾಯದಲ್ಲಿ ಎರಡೂ ಮಾತಿಲ್ಲ ಆದರೆ ನೇರ ಮಾರುಕಟ್ಟೆಯ ವ್ಯವಸ್ಥೆ ಇಲ್ಲ. ಮಧ್ಯವರ್ತಿಗಳನ್ನು ನಂಬಬೇಕಿದೆ. ರೈತರೇ ನೇರವಾಗಿ ಮಾರಾಟ ಮಾಡುವ ವ್ಯವಸ್ಥೆ ಸರ್ಕಾರದಿಂದ ಆಗಬೇಕಿದೆ. ಇಲ್ಲವಾದರೆ ಮಧ್ಯವರ್ತಿಗಳು ನಿಗದಿ ಪಡಿಸಿದ ಬೆಲೆಗೆ ಮಾರಾಟ ಮಾಡಬೇಕಿದೆ. ಕುಷ್ಟಗಿಯ ತಾಲೂಕಿನ ಬಿಸಿಲಿನ ವಾತವರಣದಲ್ಲಿ ಮುಸುಂಬಿಯನ್ನು ಉತ್ಕೃಷ್ಟ ಬೆಳೆ ಬೆಳೆಯಬಹುದಾಗಿದ್ದು, ನ್ಯಾಯಯುತ ಬೆಲೆ ಸಿಗಬೇಕಿದೆ ಎನ್ನುತ್ತಾರೆ ವೀರೇಶ ತುರಕಾಣಿ.

– ಮಂಜುನಾಥ ಮಹಾಲಿಂಗಪುರ ಕುಷ್ಟಗಿ

Advertisement

Udayavani is now on Telegram. Click here to join our channel and stay updated with the latest news.

Next