ಮಣಿಪಾಲ : ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಶನಿವಾರ ಸಂಜೆ ಉದಯವಾಣಿ ಪ್ರಧಾನ ಕಚೇರಿಗೆ ಭೇಟಿ ನೀಡಿದರು.
‘ಗೋವಾ ದಲ್ಲಿ ಜಾರಿಯಲ್ಲಿರುವ ‘ಸ್ವಯಂಪೂರ್ಣ ಗೋವಾ’ ಉಪಕ್ರಮದ ಮಾದರಿ ಉಳಿದ ರಾಜ್ಯಗಳಲ್ಲೂ ಜಾರಿ ಮಾಡಬೇಕು ಎಂದು ಹೇಳಿದರು.
‘ಸ್ವಯಂಪೂರ್ಣ ಗೋವಾ’ ಕಾರ್ಯಕ್ರಮದ ಅಡಿಯಲ್ಲಿ, ರಾಜ್ಯ ಸರಕಾರಿ ಅಧಿಕಾರಿಯನ್ನು ‘ಸ್ವಯಂಪೂರ್ಣ ಮಿತ್ರ’ ಎಂದು ನೇಮಿಸಲಾಗುತ್ತದೆ, ಅವರು ಗೊತ್ತುಪಡಿಸಿದ ಪಂಚಾಯತ್ ಅಥವಾ ಪುರಸಭೆಗೆ ಭೇಟಿ ನೀಡುತ್ತಾರೆ, ಜನರೊಂದಿಗೆ ಸಂವಹನ ನಡೆಸುತ್ತಾರೆ, ಅನೇಕ ಸರಕಾರಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುತ್ತಾರೆ ಮತ್ತು ಅರ್ಹ ಫಲಾನುಭವಿಗಳಿಗೆ ಸರಕಾರದ ಎಲ್ಲಾ ಯೋಜನೆಗಳು ಮತ್ತು ಪ್ರಯೋಜನಗಳು ಲಭ್ಯವಾಗುವಂತೆ ನೋಡಿಕೊಳ್ಳುತ್ತಿದ್ದಾರೆ’ ಎಂದರು.
ಗೋವಾ ರಾಜ್ಯವನ್ನು ಸ್ವಾವಲಂಬಿಯಾಗಿಸಲು ಕೈಗೊಂಡಿರುವ ಸ್ವಯಂಪೂರ್ಣ ಕಾರ್ಯಕ್ರಮ ಇತರ ರಾಜ್ಯಗಳಲ್ಲಿಯೂ ಅನುಷ್ಠಾನ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಗೋವಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಹಕಾರದಿಂದ ಡಬಲ್ ಇಂಜಿನ್ ಸರಕಾರದಿಂದ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ.ಮುಂದಿನ ದಿನಗಳಲ್ಲಿ ಕರಾವಳಿ ರಾಜ್ಯವು ಸಂಪೂರ್ಣ ಸ್ವಾವಲಂಬಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಕ್ಲೀನ್ ಇಂಡಿಯಾ , ಫಿಟ್ ಇಂಡಿಯಾ ಸೇರಿ ಪ್ರಧಾನಿ ಮೋದಿ ಅವರ ವಿಷನ್ ನಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನವ ಭಾರತ ನಿರ್ಮಾಣದ ಕನಸು ನನಸಾಗುತ್ತಿದೆ ಎಂದು ಹೇಳಿದರು.
ಸಿಎಂ ಸಾವಂತ್ ಅವರ ಭೇಟಿಯ ವೇಳೆ ಮಣಿಪಾಲ್ ಟೆಕ್ನಾಲಜೀಸ್ ಲಿ. ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಗೌತಮ್ ಪೈ, ಶಾಸಕ ರಘುಪತಿ ಭಟ್, ಪ್ರಸಾದ್ ನೇತ್ರಾಲಯದ ಡಾ. ಕೃಷ್ಣ ಪ್ರಸಾದ್ ಸೇರಿ ಉದಯವಾಣಿಯ ಸಿಬಂದಿಗಳು ಉಪಸ್ಥಿತರಿದ್ದರು.