Advertisement

ಸ್ವರ್ಣಲತಾ: ಈ ಶತಮಾನದ ಮಾದರಿ ಹೆಣ್ಣು!

12:02 AM Dec 19, 2021 | Team Udayavani |

ವ್ಯಕ್ತಿಯೊಬ್ಬರಿಗೆ ಸ್ಟ್ರೋಕ್‌ ಆಯಿತೆಂದರೆ ಅವರ ಬದುಕಿನ ಅರ್ಧ ಆಯುಷ್ಯ ಮುಗಿಯಿತೆಂದೇ ಅರ್ಥ. ವಾಸ್ತವ ಹೀಗಿರುವಾಗ ಸ್ಟ್ರೋಕ್‌ಗೆ ಹತ್ತಿರದ ಸಮಸ್ಯೆಯೊಂದು ಜತೆಯಾದ ಅನಂತರವೇ ಸಾಧನೆಗಳ ಮೆಟ್ಟಿಲೇರಿ ಸೆಲೆಬ್ರಿಟಿ ಆಗಿರುವ ದಿಟ್ಟೆಯೊಬ್ಬಳ ಯಶೋಗಾಥೆ ಇಲ್ಲಿದೆ. ವ್ಹೀಲ್‌ಚೇರ್‌ನಲ್ಲಿ ಕುಳಿತೇ ಜಗತ್ತನ್ನು ನೋಡುವ ಸ್ಥಿತಿಯಲ್ಲಿರುವ ಈಕೆಯ ಹೆಸರು ಸ್ವರ್ಣಲತಾ. ಸುಮಧುರ ಗಾಯಕಿ, ಅತ್ಯುತ್ತಮ ಛಾಯಾಗ್ರಾಹಕಿ, ಅಷ್ಟ ಭಾಷಾ ತಜ್ಞೆ, ಅದ್ಭುತ ಭಾಷಣಕಾರ್ತಿ, ಉತ್ತಮ ಕಲಾವಿದೆ, ಸೌಂದರ್ಯ ಸ್ಪರ್ಧೆಯ ವಿಜೇತೆ, ಸಮಾಜ ಸೇವಕಿ, ಅತ್ಯುತ್ತಮ ಲೇಖಕಿ ಎಂದೆಲ್ಲ ಹೆಸರು ಮಾಡಿರುವ ಈಕೆಯ ಸಾಧನೆ ಕಂಡು ನಟ ಕಮಲ ಹಾಸನ್‌ ಬೆರಗಾಗಿದ್ದಾರೆ. ನಟಿ ಸುಹಾಸಿನಿ, ಕೈಮುಗಿದು ಸತ್ಕರಿಸಿದ್ದಾರೆ. ಸದ್ಯ ಕೊಯಮತ್ತೂರಿನಲ್ಲಿ ವಾಸಿಸುತ್ತಿರುವ ಸ್ವರ್ಣಲತಾ, ಕರ್ನಾಟಕದ, ನಮ್ಮ ಬೆಂಗಳೂರಿನ ಹೆಣ್ಣು­ಮಗಳು! ಸ್ಟ್ರೋಕ್‌ ಎಂಬ ಹೆಮ್ಮಾರಿಯನ್ನು ತಾವು ಎದುರಿಸಿ ಗೆದ್ದ ಬಗೆಯನ್ನು ಸ್ವರ್ಣಲತಾ ಅವರೇ ವಿವರವಾಗಿ ಹೇಳಿಕೊಂಡಿದ್ದಾರೆ; ಓದಿಕೊಳ್ಳಿ:
***
ನಾವು ವಾಸವಿದ್ದದ್ದು ಬೆಂಗಳೂರಿನ ನಂದಿನಿ ಲೇ ಔಟ್‌ನಲ್ಲಿ. ನಮ್ಮದು ಮಧ್ಯಮ ವರ್ಗದ ಕುಟುಂಬ. ನಾಲ್ಕು ಜನ ಹೆಣ್ಣುಮಕ್ಕಳಲ್ಲಿ ನಾನು ಎರಡನೇಯವಳು. ಒಳ್ಳೆಯ ನೌಕರಿ ಪಡೆಯುವ ಉದ್ದೇಶದಿಂದ ಕಂಪ್ಯೂಟರ್‌ ಸೈನ್ಸ್‌ ಡಿಪ್ಲೊಮಾಗೆ ಸೇರಿಕೊಂಡೆ. ಈ ಸಂದರ್ಭದಲ್ಲಿಯೇ ಅಪ್ಪ ತೀರಿಕೊಂಡರು. ಅಕ್ಕ ಗಂಡನ ಮನೆ ಸೇರಿದ್ದಳು. ಹಾಗಾಗಿ ಕುಟುಂಬ ನಿರ್ವಹಣೆಯಲ್ಲಿ ಅಮ್ಮನಿಗೆ ಸಹಾಯ ಮಾಡಲು ನಿರ್ಧರಿಸಿದೆ. ಓದಿನ ಜತೆಜತೆಗೇ ಸಣ್ಣಪುಟ್ಟ ಕೆಲಸ ಮಾಡಲು ಆರಂಭಿಸಿದೆ. ಡಿಪ್ಲೋಮಾ ಮುಗಿಯುತ್ತಿದ್ದಂತೆಯೇ ದೊಡ್ಡ ಕಂಪೆನಿಯಲ್ಲಿ ನೌಕರಿ ಸಿಕ್ಕಿತು. ಆಗ ಪರಿಚಯವಾದವನೇ ಗುರುಪ್ರಸಾದ್‌. ನಾನೋ ಮಾತಿನಮಲ್ಲಿ. ಅವನು ಮಹಾ ಮೌನಿ. ಈ ವಿಭಿನ್ನ ಸ್ವಭಾವವೇ ನಮ್ಮನ್ನು ಹತ್ತಿರ ತಂದಿತು. ಗೆಳೆತನ ಪ್ರೇಮವಾಗಿ, ಮದುವೆಯಲ್ಲಿ ಕೊನೆಗೊಂಡಿತು. ಮನ ಮೆಚ್ಚಿದ ಹುಡುಗ, ಆರ್ಥಿಕ ಭದ್ರತೆಯ ನೌಕರಿ, ಕೈತುಂಬಾ ಕಾಸು, ನನಸಾದ ಕನಸು- ಇದೆಲ್ಲ ಜತೆಯಾಗಿದ್ದ ಸಂದರ್ಭದಲ್ಲಿಯೇ ನನ್ನ ಮಡಿಲಿಗೆ ಮುದ್ದು ಕಂದನೂ ಬಂದ. ಅವನಿಗೆ ಗಗನ್‌ ಎಂದು ಹೆಸರಿಟ್ಟು, ಈ ಜಗತ್ತಿನಲ್ಲಿ ನಾನೇ ಸುಖೀ ಎಂದುಕೊಂಡು ಸಂಭ್ರಮಿಸಿದೆ.

Advertisement

ನನಗೀಗಲೂ ಚೆನ್ನಾಗಿ ನೆನಪಿದೆ: ಅವತ್ತು 26-10- 2009ರ ಸೋಮವಾರ. ಮರುದಿನವೇ ನಮ್ಮ ವಿವಾಹ ವಾರ್ಷಿಕೋತ್ಸವ! ನಾಳೆ ಬೆಳಗ್ಗೆ ತಿಂಡಿ ಏನು ಮಾಡಲಿ? ಮಧ್ಯಾಹ್ನ ಊಟಕ್ಕೆ ಏನು ಸ್ಪೆಷಲ್‌ ಮಾಡಲಿ? ರಾತ್ರಿ ಎಲ್ಲಿ ಸೆಲೆಬ್ರೆಷನ್‌ ಮಾಡೋದು ಎಂದೆಲ್ಲ ಯೋಚಿಸುತ್ತಲೇ ಕಣ್ತೆರೆದೆ. ಯಾಕೋ ತಲೆಭಾರ ಅನ್ನಿಸಿತು. ಇನ್ನಷ್ಟು ಹೊತ್ತು ನಿದ್ರೆ ಮಾಡಿದರೆ ಸರಿಯಾಗಬಹುದು ಅನ್ನಿಸಿ, ಆಫೀಸ್‌ಗೆ ರಜೆ ಹಾಕಿ ಹಾಗೇ ಕಣ್ಮುಚ್ಚಿದೆ. ಮಧ್ಯಾಹ್ನ ಎಚ್ಚರವಾದಾಗ ಮೈ ಕೆಂಡದಂತೆ ಸುಡುತ್ತಿತ್ತು. ಜ್ವರದ ಮಾತ್ರೆ ನುಂಗಿ ಮತ್ತೆ ನಿದ್ರೆಗೆ ಜಾರಿದೆ. ಎಚ್ಚವಾದಾಗ ಸಂಜೆಯಾಗಿತ್ತು. ಅರೆ, ಇದೇನಾಯಿತು ಎಂದುಕೊಂಡು ಕೈ-ಕಾಲು ಆಡಿಸಲು ನೋಡಿದರೆ, ಕೈ ಎತ್ತಲು ಆಗುತ್ತಿಲ್ಲ. ಕಾಲು ಇ¨ªಾವಾ? ಗೊತ್ತಾಗುತ್ತಿಲ್ಲ!. ಕುತ್ತಿಗೆಯಿಂದ ಕೆಳಕ್ಕೆ ಸ್ಪರ್ಶ ಜ್ಞಾನವೇ ಇರಲಿಲ್ಲ. ಅಂಥ ಸಂದರ್ಭದಲ್ಲಿ ಹೇಗೆ ಫೋನ್‌ ತಗೊಂಡೆನೋ, ಏನು ಹೇಳಿದೆನೋ; ಭಗವಂತ ಬಲ್ಲ. ಅನಂತರದ ಕೆಲವೇ ನಿಮಿಷಗಳಲ್ಲಿ ಗುರುಪ್ರಸಾದ್‌ ಧಾವಿಸಿ ಬಂದು, ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು.

“ನಿಮಗಿರುವುದು ಮಲ್ಟಿಪಲ್‌ ಸ್ಕೆಲೆರೋಸಿಸ್‌ (Multiple sclerosis) ಎಂಬ ಕಾಯಿಲೆ. ಇದು ಲಕ್ಷದಲ್ಲಿ ಒಬ್ಬರಿಗೆ ಬರುತ್ತೆ. ನರದ ಮೇಲಿನ ಪದರ ಕಳಚಿ ಹೋದರೆ ಆಗುವ ಸಮಸ್ಯೆ ಇದು. ಹೀಗೆ ಆದಾಗ ಮೆದುಳಿನಿಂದ ನರಗಳಿಗೆ ಸರಿಯಾದ ಸಂದೇಶ ಬರುವುದಿಲ್ಲ. ಪರಿಣಾಮ, ದೇಹದ ಹೆಚ್ಚಿನ ಭಾಗ ನಿಷ್ಕ್ರಿಯವಾದಂತೆ ಆಗಿಬಿಡುತ್ತದೆ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ವಿಲ್‌ ಪವರ್‌ ಮತ್ತು ಪಾಸಿಟಿವ್‌ ಚಿಂತನೆ ಮಾತ್ರ ನಿಮ್ಮನ್ನು ಕಾಪಾಡಬಲ್ಲದು’ ಎಂದರು ಡಾಕ್ಟರ್‌. ಓಹ್‌, ಇನ್ನು ಮುಂದೆ ನಾನು ಸರಭರ ಓಡಾಡಲು, ಚಿಗರೆಯಂತೆ ನಲಿಯಲು ಆಗುವುದಿಲ್ಲ ಎಂಬ ಕಹಿಸತ್ಯ ಗೊತ್ತಾದ ಕ್ಷಣ ಅದು.

ಅನಂತರದಲ್ಲಿ ನಾನು ನಂಬಲಾಗದಂಥ ಘಟನೆಗಳು ನಡೆದು­ಹೋದವು. ಮೊದಲಿಗೆ ನನ್ನ ನೌಕರಿ ಹೋಯಿತು. ಆಪ್ತರೆಂದು ನಂಬಿದ್ದ­ವರು ದೂರವಾದರು. ಪರಿಚಿತರು/ ಬಂಧುಗಳು ಮಾತಿಗೆ ಸಿಗದೆ ತಪ್ಪಿಸಿ­ಕೊಂಡರು. “ಬೆಳಗ್ಗೆ ಚೆನ್ನಾಗಿದÛಂತೆ, ಸಂಜೆ ಹೊತ್ತಿಗೆ ಕೈ-ಕಾಲು ಬಿದ್ದು ಹೋದ­ವಂತೆ’ ಎಂದು ನೆರೆಹೊರೆಯವರು ಆಡಿಕೊಂಡರು. ನಾವು ಬೆಂಗಳೂ­ರಿ­­ನಿಂದ ಕೊಯಮತ್ತೂರಿಗೆ ಶಿಫ್ಟ್ ಆದದ್ದು ಈ ಸಂದರ್ಭದಲ್ಲಿಯೇ.

ಇನ್ನು ಬದುಕಿಡೀ ಹಾಸಿಗೆಯಲ್ಲಿಯೇ ಬಿದ್ದಿರಬೇಕು ಅನ್ನಿಸಿದಾಗ ಸಂಕಟವಾಯಿತು. ವರ್ಷಾನುಗಟ್ಟಲೆ ಹೀಗೆ ಬದುಕುವ ಬದಲು ಒಮ್ಮೆಗೇ ಸತ್ತು ಹೋದರೆ ಚೆಂದ ಅನ್ನಿಸಿತು. ಅದೊಂದು ದಿನ ಗುರುಪ್ರಸಾದ್‌ಗೂ ಇದನ್ನೇ ಹೇಳಿದೆ. ಆತ ತತ್‌ಕ್ಷಣವೇ- “ಛೇ, ಎಂಥಾ ಮಾತು ಹೇಳ್ತಾ ಇದ್ದೀಯ? ಸತ್ತು ಏನು ಸಾಧಿಸ್ತೀಯ? ನೀನು ಇಲ್ಲದೇ ಹೋದ್ರೆ ಮಗುವಿಗೆ-ನನಗೆ ಯಾರು ದಿಕ್ಕು? ಸ್ಟ್ರೋಕ್‌ಗೆ ಹತ್ತಿರದ ಸಮಸ್ಯೆ ಇದ್ದೂ ಸಾಧನೆ ಮಾಡಿದಳು ಅನ್ನಿಸ್ಕೊಬೇಕೇ ಹೊರತು, ಸ್ಟ್ರೋಕ್‌ ಆಗಿ ಸತ್ತು ಹೋದಳು ಅನ್ನಿಸ್ಕೊಬೇಡ. ಫಿಸಿಯೋಥೆರಪಿ  ತಗೋ. ಕೈ-ಕಾಲು ಆಡಿಸ್ತಾ ಇರು. ವ್ಹೀಲ್‌ ಚೇರ್‌/ ವಾಕಿಂಗ್‌ ಸ್ಟಿಕ್‌ ತಂದುಕೊಡ್ತೇನೆ. ಬಾಡಿ ಗಾರ್ಡ್‌ ಥರ ನಾನೇ ಇತೇìನೆ. ನಿನಗಿಷ್ಟ ಬಂದಂತೆ ಬದುಕು. ಚಿತ್ರ ಬರಿ, ಆನ್‌ಲೈನ್‌ ಕ್ಲಾಸ್‌ನಲ್ಲಿ ಸಂಗೀತ ಕಲಿ. ಫೋಟೋಗ್ರಫಿ ಮಾಡು. ಸದಾ ಚಟುವಟಿಕೆಯಿಂದ ಇದ್ರೆ ನೂರು ವರ್ಷ ಬದುಕಬಹುದು’ ಎಂದ!

Advertisement

ನೀನಿಲ್ಲದೇ ಹೋದರೆ ನನಗೂ, ಮಗುವಿಗೂ ಯಾರು ದಿಕ್ಕು ಎಂಬ ಮಾತನ್ನು ನನ್ನ ಗಂಡ ಹೇಳಿದನಲ್ಲ; ಆ ಕ್ಷಣದಿಂದಲೇ ನನ್ನೊಳಗೆ ಹೊಸ ಚೈತನ್ಯ ಹುಟ್ಟಿತು. ಸಾಧನೆ ಮಾಡಿಯೇ ಸಾಯಬೇಕು ಎಂಬ ಹಠ ಜತೆಯಾಯಿತು. ಅಡಿ, ಮಿತ್ಸುಭಿಷಿ, ಐಟಿಸಿಯಂಥ ಕಂಪೆನಿಗಳಲ್ಲಿ ದೊಡ್ಡ ಹೊಣೆಯನ್ನು ನಿರ್ವಹಿಸಿದ್ದವಳು ನಾನು. ಅಂಥವಳಿಗೆ ಈ ಮಲ್ಟಿಪಲ್‌ ಸ್ಕೆಲರೋಸಿಸ್‌ ಯಾವ ಲೆಕ್ಕ ಅಂದುಕೊಂಡು ಉತ್ಸಾಹದಿಂದಲೇ ಬದುಕಿನ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಲು ನಿರ್ಧರಿಸಿದೆ. ಒಂದು ಕ್ಷಣವೂ ಬಿಡುವಿಲ್ಲದಂಥ ಜೀವನ ಕ್ರಮ ಅಳವಡಿಸಿಕೊಂಡೆ. ಕೆಲವೇ ದಿನಗಳಲ್ಲಿ, ಎದ್ದು ಕುಳಿತುಕೊಳ್ಳವಷ್ಟು ಚೈತನ್ಯ ಬಂತು. ಕೆಮರಾ ಹಿಡಿ­ಯಲು, ಕ್ಯಾನ್ವಾಸ್‌ ತುಂಬಾ ಬ್ರಶ್‌ ಆಡಿಸಲು ಕೈಗಳಿಗೆ ಶಕ್ತಿ ಬಂತು!

ಜತೆಗೆ ಮಗಳೂ ಮಡಿಲು ತುಂಬಿದ್ದಳು. ಅವಳಿಗೆ ಗಾನ ಎಂದು ಹೆಸರಿಟ್ಟೆವು. ನನ್ನ ಪಾಲಿಗೇನೋ ಫ್ರೆಂಡ್‌, ಗೈಡ್‌, ಫಿಲಾಸಫ‌ರ್‌ ಮತ್ತು ಗಾಡ್‌ ಆಗಿ ಗಂಡ ಜತೆಗಿದ್ದ. ಆದರೆ ಸ್ಟ್ರೋಕ್‌ನ ಕಾರಣದಿಂದ ಆಸ್ಪತ್ರೆಗೆ ಬರುತ್ತಿದ್ದ ಹೆಚ್ಚಿನವರ ಸ್ಥಿತಿ ಕರುಳು ಹಿಂಡುವಂತೆ ಇರುತ್ತಿತ್ತು. ಹೆಚ್ಚಿನವರು, ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದರು. ಈ ನರಕ ಸಾಕಪ್ಪಾ ಎನ್ನುತ್ತಿದ್ದರು. ಅಂಥ­ವರಿಗೆ ನೆರವಾಗಬೇಕು ಅನ್ನಿಸಿತು. ನನ್ನ ಯೋಚನೆಯನ್ನು ಗಂಡನಲ್ಲಿ ಹೇಳಿ­ಕೊಂಡೆ. ಆತ ನಗುತ್ತಾ- “ನೀನು ಏನು ಹೇಳಿದ್ರೂ ಜೈ’ ಅಂದ! ತನ್ನ ಸಂಪಾ­ದನೆಯ ಒಂದು ಭಾಗವನ್ನು ಅವತ್ತೇ ಕೊಟ್ಟ. ಆಗ ಶುರುವಾದದ್ದೇ- ಸ್ವರ್ಗ ಫೌಂಡೇಶನ್‌. ನನ್ನ ಮತ್ತು ಗಂಡ-ಮಕ್ಕಳ ಹೆಸರಿನ ಮೊದಲಕ್ಷರ ತಗೊಂಡು “ಸ್ವರ್ಗ’ ಮಾಡಿಕೊಂಡೆವು. ಅದಕ್ಕೆ “ಫೌಂಡೇಶನ್‌’ನ ರೂಪ ಕೊಟ್ಟೆವು. ಸುತ್ತಮುತ್ತ ಇರುವವರಿಗೆ ಕೈಲಾದಷ್ಟು ಸಹಾಯ ಮಾಡಿ ಅವರ ಕಷ್ಟ ತಗ್ಗಿಸುವುದು ನಮ್ಮ ಉದ್ದೇಶವಾಗಿತ್ತು. ಮತ್ತಷ್ಟು ಹಣ ಬೇಕು ಅನ್ನಿಸಿದಾಗ, ಫೋಟೋಗ್ರಫಿ ಎಕ್ಸಿಬಿಷನ್‌ ಮಾಡಿದೆ. ನಾ ಬರೆದ ಚಿತ್ರಗಳನ್ನು ಮಾರಾಟಕ್ಕಿಟ್ಟೆ. ಅಂಗವೈಕಲ್ಯವನ್ನು ಮೀರಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ತೆರೆಮರೆಯ ಸಾಧಕರ ಚಿತ್ರಗಳನ್ನು ಬಳಸಿ ಕ್ಯಾಲೆಂಡರ್‌ ರೂಪಿಸಿ ಮಾರುಕಟ್ಟೆಗೆ ಬಿಟ್ಟೆ. ಅದ್ಭುತ ಎನ್ನುವಂಥ ಪ್ರತಿಕ್ರಿಯೆ ಸಿಕ್ಕಿತು. ನನ್ನ ಪೇಂಟಿಂಗ್‌, ಕ್ಯಾಲೆಂಡರ್‌, ಫೋಟೋಗ್ರಫಿಯ ಪೋಸ್ಟರ್‌ಗಳನ್ನು ಜನ ಮುಗಿಬಿದ್ದು ಖರೀದಿಸಿದರು. ಆ ಮೂಲಕ ವ್ಹೀಲ್‌ ಚೇರ್‌ನಲ್ಲಿದ್ದವಳಿಗೆ ಊರುಗೋಲಾಗಿ ನಿಂತರು.

2015ರಲ್ಲಿ, ಮೀಟಿಂಗ್‌ ಒಂದರಲ್ಲಿ ಪಾಲ್ಗೊಳ್ಳಲು ಹೊರಟೆ. ಕ್ಯಾಬ್‌ ಡ್ರೈವರ್‌, ಕಾರ್‌ನಲ್ಲಿ ನಿಮಗೆ ಮಾತ್ರ ಪ್ರವೇಶ. ನಿಮ್ಮ ವ್ಹೀಲ್‌ ಚೇರ್‌ ತರಬೇಡಿ ಎಂದು ನಿಷ್ಠುರವಾಗಿ ಹೇಳಿಬಿಟ್ಟರು. ನನ್ನ ಪರಿಸ್ಥಿತಿಯನ್ನು ಆತ ಅರ್ಥ ಮಾಡಿಕೊಳ್ಳಲೇ ಇಲ್ಲ. ಹಿಂದೆ ಡಿಕ್ಕಿಯಲ್ಲಿ ವ್ಹೀಲ್‌ಚೇರ್‌ ಇಡಲಿಕ್ಕೂ ಅವಕಾಶ ಕೊಡಲಿಲ್ಲ. ಅವತ್ತೇ ಸಂಜೆ ಗಂಡನೊಂದಿಗೆ ಇದನ್ನೆಲ್ಲ ಹೇಳಿಕೊಂಡೆ. “ಅಕಸ್ಮಾತ್‌ ನನ್ನಂಥವರು ದೂರ ಪ್ರಯಾಣ ಮಾಡಬೇಕಾಗಿ ಬಂದರೆ ಎಷ್ಟು ಕಷ್ಟ ಅಲ್ಲವಾ?’ ಅಂದೆ. ಆಗ ಗುರುಪ್ರಸಾದ್‌- “ಸಕಲ ವ್ಯವಸ್ಥೆ ಹೊಂದಿರುವ ಒಂದು ಕ್ಯಾಬ್‌ನ ನಾವೇ ಖರೀದಿಸಿ ಅದನ್ನು ಅಂಗವಿಕಲರು ಮತ್ತು ವೃದ್ಧರ ಸೇವೆಗೆ ಮೀಸಲಿಡೋಣ’ ಎಂದರು. ಅಷ್ಟೇ ಅಲ್ಲ, ಆಟೋಮೊಬೈಲ್‌ ಕಂಪೆನಿಗಳೊಂದಿಗೆ ತಿಂಗಳುಗಳ ಕಾಲ ಚರ್ಚಿಸಿ, ಶೌಚಾಲಯದ ವ್ಯವಸ್ಥೆ­ಯನ್ನೂ ಹೊಂದಿರುವ ಕ್ಯಾಬ್‌ ಖರೀದಿಸಿ ಅದಕ್ಕೆ “ಸಾರಥಿ’ ಎಂದು ಹೆಸ­ರಿಟ್ಟು ಸೇವೆಗೆ ಬಿಟ್ಟರು. “ಸೇವೆ ಉಚಿತ- ಸಂತೋಷ ಖಚಿತ’ ಎಂಬುದು ನಮ್ಮ ಸಂಸ್ಥೆಯ ಘೋಷವಾಕ್ಯ. ಆ ವಿಶೇಷ ವಾಹನದಲ್ಲಿ ಕುಳಿತ ಪ್ರತಿಯೊ­ಬ್ಬರೂ ಸಂತೋಷದಿಂದ ಕಣ್ತುಂಬಿಕೊಂಡಿದ್ದಾರೆ. ನಮ್ಮನ್ನು ಹರಸಿದ್ದಾರೆ.

ಇದಿಷ್ಟನ್ನೂ ಓದಿದವರು, ನೀವೀಗ ಹೇಗಿದ್ದೀರಿ? ಎಂದು ಕೇಳಬಹುದು. ಅದಕ್ಕೆ ನನ್ನ ಉತ್ತರವಿಷ್ಟೇ: ದೇಹದ ಒಟ್ಟು ಬಲದಲ್ಲಿ ಶೇ.40ರಷ್ಟನ್ನು ನಾನೀಗಾಗಲೇ ಕಳೆದುಕೊಂಡಿರುವೆ. ಉಳಿದಿರುವ 60 ಪರ್ಸೆಂಟಿನ ಬಲವೂ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ನನಗಿರುವ ಕಾಯಿಲೆ, ತಲೆಯಿಂದ ಆರಂಭಗೊಂಡು ಅನಂತರ ಕಣ್ಣಿಗೆ ಬರುತ್ತಂತೆ. ಅನಂತರ ಒಂದೊಂದೇ ಭಾಗ ತನ್ನ ಬಲವನ್ನು ಕಳೆದುಕೊಳ್ತದಂತೆ. ಆ ಕುರಿತು ಹೆಚ್ಚು ಯೋಚಿಸಲಾರೆ. ಪ್ರತೀ ಕ್ಷಣವನ್ನೂ ಸಂಭ್ರಮದಿಂದ ಕಳೆಯಬೇಕೆನ್ನುವುದೇ ನನ್ನಾಸೆ. ದೇವರಂಥ ಗಂಡ, ಬಂಗಾರದಂಥ ಮಕ್ಕಳು, ಸಾವಿರಾರು ಮಂದಿಯ ಹಾರೈಕೆ ಜತೆಗಿದೆ. ನನಗಷ್ಟೇ ಸಾಕು..
***
ಕೇಳಿ: ಮೋಟಿವೇಶನಲ್‌ ಸ್ಪೀಕರ್‌ ಆಗಿರುವ ಸ್ವರ್ಣಲತಾ, ಈವರೆಗೂ 275ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಭಾಷಣ ಮಾಡಿದ್ದಾರೆ. ಫ್ಯಾಷನ್‌ ಶೋದಲ್ಲಿ ಭಾಗವಹಿಸಿ ಗೆಲುವಿನ ನಗೆ ಬೀರಿದ್ದಾರೆ. ಸಂಗೀತ ಕಛೇರಿ ನೀಡಿದ್ದಾರೆ. ಅಡುಗೆ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಕಥಾಸ್ಪರ್ಧೆಯಲ್ಲೂ ಬಹುಮಾನ ಪಡೆದಿದ್ದಾರೆ. “ಪೋಕರಿ ರಾಜ’ ಸಿನೆಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಗಾಯಕಿಯಾಗಿ ಹಾಡಿದ್ದಾರೆ. ವಾಕಿಂಗ್‌ ಸ್ಟಿಕ್‌ ಹಿಡಿದು ರ್‍ಯಾಂಪ್‌ ವಾಕ್‌ ಮಾಡಿದ್ದಾರೆ. ಮಾಡೆಲಿಂಗ್‌ನಲ್ಲೂ ಮಿಂಚಿದ್ದಾರೆ. ಕೊಯಮತ್ತೂರು ಚುನಾವಣ ಆಯೋಗ, ಈಕೆಯನ್ನು ತನ್ನ ಬ್ರಾಂಡ್‌ ಅಂಬಾಸಿಡರ್‌ ಎಂದು ಕರೆದು ಗೌರವಿಸಿದೆ. ತಮಿಳುನಾಡು ಸರಕಾರ, ವರ್ಷದ ಮಹಿಳೆ ಪುರಸ್ಕಾರ ನೀಡಿ ಅಭಿಮಾನ ತೋರಿದೆ. ನಟ-ನಟಿಯ ರಾದ ಕಮಲ ಹಾಸನ್‌ ಮತ್ತು ಸುಹಾಸಿನಿ, ನಿಜವಾದ ರೋಲ್‌ ಮಾಡೆಲ್‌ ಎಂದರೆ ನೀವೇ ಎಂದು ಈಕೆಗೆ ಕೈಮುಗಿದು ಸಂಭ್ರಮಿಸಿದ್ದಾರೆ.

ಸ್ಟ್ರೋಕ್‌ ಎಂದಾಕ್ಷಣ ಬದುಕಿನಲ್ಲಿ ಆಸಕ್ತಿಯನ್ನೇ ಕಳೆದುಕೊಳ್ಳು­ವವರ ಮಧ್ಯೆ, ಸ್ಟ್ರೋಕ್‌ಗೆ ಹತ್ತಿರವಿರುವ ಮಲ್ಟಿಪಲ್‌ ಸ್ಕೆಲರೋಸಿಸ್‌ಗೆ ಸೆಡ್ಡು ಹೊಡೆದು ಸಾಧನೆಗಳ ಸರಮಾಲೆಗೆ ಕೊರಳೊಡ್ಡಿರುವ ಸ್ವರ್ಣಲತಾ, ಎಲ್ಲ ಅರ್ಥದಲ್ಲೂ- “ಈ ಶತಮಾನದ ಮಾದರಿಹೆಣ್ಣು’. ಈ ಸಾಧಕಿಗೆ ಅಭಿನಂದನೆ ಹೇಳಬೇಕೆಂದರೆ-
swargafoundation1@gmail.com..

– ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next