Advertisement

Swamiji ; ಹಿಂದುತ್ವದಿಂದ ಹೊರ ಬರದಿದ್ದರೆ ಲಿಂಗಾಯತರಿಗೆ ಉಳಿಗಾಲವಿಲ್ಲ: ನಿಜಗುಣಾನಂದ ಶ್ರೀ

08:11 PM Nov 09, 2023 | Team Udayavani |

ಧಾರವಾಡ : ಹಿಂದುತ್ವದಿಂದ ಹೊರ ಬಾರದೇ ಇದ್ದರೆ ಲಿಂಗಾಯತರಿಗೆ ಉಳಿಗಾಲವಿಲ್ಲ ಎಂದು ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ, ಬಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

Advertisement

ಚನ್ನಬಸವೇಶ್ವರ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಧಾರವಾಡ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಲಿಂಗಧಾರಣೆ ಸಮಾರಂಭ ಹಾಗೂ ಸಹಜ ಶಿವಯೋಗ ಕಾರ್ಯಕ್ರಮದ ಸಾನಿಧ್ಯವಹಿಸಿ, ಅವರು ಮಾತನಾಡಿದರು.

ಹಿಂದೂ ಶಬ್ಧ ಬಳಸುವ ಲಿಂಗಾಯತರಿಗೆ ಭವಿಷ್ಯವಿಲ್ಲ. ಮೊದಲು ಈ ಬಗ್ಗೆ ಲಿಂಗಾಯತರಲ್ಲಿರುವ ಗೊಂದಲ ನಿವಾರಿಸಬೇಕಿದೆ. ಇದಾದ ಬಳಿಕ ಪ್ರತ್ಯೇಕ ಧರ್ಮ ಬೇಕಾದರೆ, ಲಿಂಗಾಯತರು ಹಿಂದೂ ಪದ ಕೈ ಬಿಡಲೇಬೇಕಿದೆ ಎಂದರು. ಜೈನರು, ಸಿಖ್ ಸಮುದಾಯಕ್ಕೆ ಈಗಾಗಲೇ ಸ್ವತಂತ್ರ್ಯ ಧರ್ಮ ಮಾನ್ಯತೆ ಲಭಿಸಿದೆ. ಲಿಂಗಾಯತ ಧರ್ಮಕ್ಕೂ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವ ವಿಶ್ವಾಸವಿದ್ದು, ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವ ಎಲ್ಲ ಅರ್ಹತೆಗಳಿವೆ. ಹೀಗಾಗಿ ಹಿಂದೂತ್ವಕ್ಕೆ ಅಂಟಿಕೊಳ್ಳದೇ ಲಿಂಗಾಯತರು ಎಚ್ಚೆತ್ತು, ಈ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಈ ಬಗ್ಗೆ ಚಿಂತನೆ ಮಾಡಬೇಕಿದೆ ಎಂದರು.

ಲಿಂಗಾಯತರ ಈಗಿನ ಸ್ಥಿತಿ ಅತಂತ್ರವೇ ಆಗಿದ್ದು, ಮುಂದಿನ 40 ವರ್ಷಗಳಲ್ಲಿ ಲಿಂಗಾಯತರ ಸ್ಥಿತಿಯು ವಿಷಮ ಸ್ಥಿತಿಗೆ ತಲುಪಲಿದೆ. ಹೀಗಾಗಿ ಈಗಲೇ ಲಿಂಗಾಯತರು ಎಚ್ಚೆತ್ತು ಜಾತಿಗೆ ಅಂಟಿಕೊಳ್ಳದೇ ಸ್ವತಂತ್ರ್ಯ ಧರ್ಮದ ಅಸ್ತಿತ್ವಕ್ಕೆ ಕೈ ಜೋಡಿಸಬೇಕು. ಇದೊಂದು ಬಹಳ ಸೂಕ್ಷ್ಮ ವಿಚಾರವಾಗಿದ್ದು, ಹೀಗಾಗಿ ಲಿಂಗಾಯತ ಧರ್ಮದ ಬಗ್ಗೆ ಮೂಲ ಆಶಯಗಳ ಬಗ್ಗೆ ಅರಿವು ಪಡೆದುಕೊಳ್ಳುವ ಅಗತ್ಯವಿದೆ. ಹೀಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವು ನೇತೃತ್ವವಹಿಸಿಕೊಂಡು ಈ ಬಗ್ಗೆ ಮಠಾಧಿಶರ ಚಿಂತನ-ಮಂಥನ ಕೈಗೊಳ್ಳಲು ವೇದಿಕೆ ರೂಪಿಸುವ ಅಗತ್ಯವಿದೆ ಎಂದರು.

ಮಾಜಿ ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ವೀರಶೈವ-ಲಿಂಗಾಯತ ಸಮಾಜ ವೈಜ್ಞಾನಿಕ ತಳಹದಿ ಮೇಲೆ ಸ್ಥಾಪಿಸಲ್ಪಟ್ಟಿದೆ. ಇದಕ್ಕೆ ಧರ್ಮ ಮಾನ್ಯತೆ ಸಿಗಬೇಕಿದೆ. ಸಮಾಜ ಆರ್ಥಿಕ ಅಭಿವೃದ್ಧಿಗೆ ಬ್ಯಾಂಕ್ ಸ್ಥಾಪಿಸುವ ಚಿಂತನೆ ಇದೆ ಎಂದರು.

Advertisement

ಮಾಜಿ ಸಚಿವೆ ಡಾ.ಲೀಲಾದೇವಿ ಆರ್ ಪ್ರಸಾದ ಮಾತನಾಡಿ, ಕರ್ನಾಟಕದಲ್ಲಿ ವೀರಶೈವ ಶಕ್ತಿ ಹೊರತರುವ ಕಾರ್ಯ ವೀರಶೈವ-ಲಿಂಗಾಯತ ಮಹಾಸಭಾ ಮಾಡುತ್ತಿದೆ. ನಮ್ಮ ಯುವ ಜನಾಂಗ ಸಮಾಜದ ಅಭಿವೃದ್ದಿಗೆ ಶ್ರಮಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿ, ಮಠಾಧಿಶರು ಹಾಗೂ ರಾಜಕಾರಣಿಗಳು ಲಿಂಗಾಯತ ಸಮಾಜವನ್ನು ಲಿಂಗಾಯತ, ಸಾದರ, ಬಣಜಿಗ, ಗಾಣಿಗ ಹೀಗೆ ಒಡೆದು ಹಾಳು ಮಾಡುತ್ತಿರುವುದಾಗಿ ವಿಷಾದಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನೀಲಾ ಕೊಡ್ಲಿ, ನಿಜಗುಣಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು. ಇದಲ್ಲದೇ ಶೇ.90 ರಷ್ಟು ಅಂಕ ಪಡೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ 125 ಮಕ್ಕಳಿಗೆ 2,500 ರೂ. ನಗದು ಪುರಸ್ಕಾರ ನೀಡಲಾಯಿತು. ಈ ಸಂದರ್ಭದಲ್ಲಿ ಕೆಎಂಎಫ್ ಮಾಜಿ ಅಧ್ಯಕ್ಷ ನೀಲಕಂಠ ಅಸೂಟಿ, ಶಿವಶರಣ ಕಲಬಶೆಟ್ಟರ, ರಾಜಶೇಖರ ಉಪ್ಪಿನ, ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ, ಸಂಧ್ಯಾ ಅಂಬಡಗಟ್ಟಿ, ಮಂಜುನಾಥ ಇದ್ದರು.

ಲಿಂಗಾಯತ ಸಮಾಜದ ಮಕ್ಕಳು ಬರೀ ಅಂಕಗಳಿಗೆ ಗಂಟು ಬೀಳದೇ ಲಿಂಗಾಯತ ಸಂಸ್ಕಾರದ ಜತೆ ಉನ್ನತ ಸ್ಥಾನ ಪಡೆಯುವತ್ತ ಕಠಿಣ ಶ್ರಮ ಹಾಕಬೇಕು. ಇದರ ಜತೆಗೆ ಲಿಂಗಾಯತ ಸಮಾಜದ ಏಳ್ಗೆಗೆ ಯುವ ಸಮುದಾಯ ಕೈ ಜೋಡಿಸಬೇಕು.
-ಕುಮಾರ ವಿರೂಪಾಕ್ಷ ಸ್ವಾಮೀಜಿ, ಮೂರು ಸಾವಿರ ವಿರಕ್ತಮಠ, ಉಪ್ಪಿನಬೆಟಗೇರಿ.

Advertisement

Udayavani is now on Telegram. Click here to join our channel and stay updated with the latest news.

Next