ಬೆಂಗಳೂರು: ಬಿಬಿಎಂಪಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಈ ಬಾರಿ 214ನೇ ರ್‍ಯಾಂಕಿಗೆ ತೃಪ್ತಿಪಟ್ಟುಕೊಂಡಿದೆ. ಇಷ್ಟಾದರೂ ಪಾಲಿಕೆಗೆ ಬೆಸ್ಟ್ ಸಸ್ಟೇನೆಬಲ್ (ಉತ್ತಮ ಕಸ ನಿರ್ವಹಣಾ ವ್ಯವಸ್ಥೆ) ವಿಭಾಗದಲ್ಲಿ 37ನೇ ರ್‍ಯಾಂಕ್ ಬಂದಿದೆ. 2019ರಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಪಾಲಿಕೆ 2019ನೇ ಸ ಗಳಿಸಿತ್ತು. ಈ ಬಾರಿ ಅದಕ್ಕಿಂತ 20 ರ್‍ಯಾಂಕ್ ಹಿಂದಕ್ಕೆ ಹೋಗುವ ಮೂಲಕ ಕಳಪೆ ಸಾಧನೆ ಮಾಡಿದೆ.
ಈ ಬಾರಿ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಉತ್ತಮ ಸ್ಥಾನ ಗಳಿಸಲು ಪಾಲಿಕೆ ಅಭಿಯಾನದಲ್ಲಿ ಭಾಗವಹಿಸಿ ಅಭಿಪ್ರಾಯ ತಿಳಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿತ್ತು. ಆದರೆ, ಬೆಂಗಳೂರಿನಲ್ಲಿ 50 ಸಾವಿರ ಜನರಷ್ಟೇ ಈ ಅಭಿಯಾನದಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದ್ದರು. ಈ ಅಂಶವೂ ಅಭಿಯಾನದಲ್ಲಿ ಪಾಲಿಕೆ ಕಳಪೆ ಸಾಧನೆ ಮಾಡಲು ಕಾರಣವಾಗಿದೆ.
ಈ ಬಾರಿ ಅಭಿಯಾನದಲ್ಲಿ ಪಾಲಿಕೆ ಕಳಪೆ ಸಾಧನೆ ಮಾಡಲಿದೆ ಎನ್ನುವುದು ನಿರೀಕ್ಷಿತವಾಗಿಯೇ ಇತ್ತು. ಅಭಿಯಾನದಲ್ಲಿ ಪಾಲ್ಗೊಂಡು ಉತ್ತಮ ಸ್ಥಾನ ಗಳಿಸಲು ಪಾಲಿಕೆ ಪ್ರಯತ್ನ ಮಾಡಿತ್ತಾದರೂ, ಯಾವ ಅಂಶಗಳೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಲಿಲ್ಲ. ಕಳೆದ ವರ್ಷಕ್ಕಿಂತ ಈ ಬಾರಿ ಪಾಲಿಕೆ ಯಶಸ್ಸು ಸಾಧಿಸಿದ್ದು, ಮಾರ್ಷಲ್ ಗಳ ನೇಮಕ ಮಾಡಿಕೊಳ್ಳುವುದರಲ್ಲಿ ಮಾತ್ರ. ವಾರ್ಡ್‌ವಾರು ಮಾರ್ಷಲ್‌ಗಳನ್ನು ನೇಮಕ ಮಾಡಿಕೊಂಡಿರುವುದು ಬಿಟ್ಟರೆ ಉಳಿದಂತೆ ಯಾವ ಅಂಶವನ್ನೂ ಪಾಲಿಕೆ ಅನುಷ್ಠಾನಕ್ಕೆ ತಂದಿರಲಿಲ್ಲ. ಹೀಗಾಗಿ, ಪಾಲಿಕೆಗೆ ತೀವ್ರ ಹಿನ್ನಡೆ ಉಂಟಾಗಿದೆ.
ಇಂದೋರ್ ಮಾದರಿ ಕಾರಣ? : 2020ನೇ ಸಾಲಿನ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಇಂದೋರ್ ಮಾದರಿಯಲ್ಲಿ ಕಸ ವಿಲೇವಾರಿ ಯೋಜನೆ ಪರಿಚಯಿಸುವುದಾಗಿ ಮೇಯರ್ ಎಂ.ಗೌತಮ್‌ಕುಮಾರ್ ಹೇಳಿದರು. ಈ ಯೋಜನೆ ಪ್ರಾಯೋಗಿಕವಾಗಿ ನಗರದ ಆಯ್ದ 5 ವಾರ್ಡ್‌ಗಳಲ್ಲಿ ಅನುಷ್ಠಾನಕ್ಕೆ ಉದ್ದೇಶಿಸಲಾಯಿತು. ಈ ಪ್ರಾಯೋಗಿಕ ಯೋಜನೆಯೂ ರ್‍ಯಾಂಕಿಂಗ್ ಹಿನ್ನೆಡೆಗೆ ಕಾರಣವಾಗಿದೆ. ಈಗಾಗಲೇ ಹಸಿ ಕಸದ ಟೆಂಡರ್ ಅಂತಿಮ ಹಂತದಲ್ಲಿತ್ತು. ಅಲ್ಲದೆ, ಒಣ ಕಸವನ್ನು ಎನ್‌ಜಿಒ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಸಂಗ್ರಹಿಸುವುದು ಎಂದು ಅಂತಿಮವಾಗಿತ್ತು. ಆದರೆ, ಇದನ್ನು ಅನುಷ್ಠಾನ ಮಾಡದೆ ಇಂದೋರ್ ಮಾದರಿಗೆ ಕೈಹಾಕಿದ ಪಾಲಿಕೆ ಕೈಸುಟ್ಟುಕೊಂಡಿತು. ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಇಂದೋರ್ ಮಾದರಿ ನಿಲ್ಲಿಸಲಾಯಿತು.
ಸಕಾಲದಲ್ಲಿ ಕಾರ್ಯಾದೇಶ ನೀಡಿಲ್ಲ : ಜಿಪಿಎಸ್ ಹಾಗೂ ಕಂಟ್ರೋಲ್ ರೂಮ್ ಮಾಡಲಿಲ್ಲ. ಟೆಂಡರ್ ಹಿನ್ನೆಡೆಯಾದ ಬೆನ್ನಲ್ಲೇ ಎಲ್ಲಾ ಕಾಂಪ್ಯಾಕ್ಟರ್ ಹಾಗೂ ಆಟೋ ಟಿಪ್ಪರ್‌ಗಳಿಗೆ ಜಿಪಿಎಸ್ ಅಳವಡಿಸುವುದು, ಕಂಟ್ರೋಲ್ ರೂಮ್ ಸ್ಥಾಪನೆ ಮಾಡುವುದಕ್ಕೆ ಹಿನ್ನೆಡೆಯಾಯಿತು. ಕಸ ವಿಲೇವಾರಿ ಎಲ್ಲಾ ವಾಹನಗಳಿಗೂ ಜಿಪಿಎಸ್ ಅಳವಡಿಸಲು ಉದ್ದೇಶಿಸಲಾಗಿತ್ತು. ಆದರೆ, ಹೊಸ ಟೆಂಡರ್‌ದಾರರಿಗೆ ಸಕಾಲದಲ್ಲಿ ಕಾರ್ಯಾದೇಶ ನೀಡಲಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.
ಬೆಸ್ಟ್ ಸಸ್ಟೇನೆಬಲ್ ಪ್ರಶಸ್ತಿ : ಪಾಲಿಕೆಗೆ ಈ ಬಾರಿ ಬೆಸ್ಟ್ ಸಸ್ಟೇನೆಬಲ್ ಸಿಟಿ ಎಂಬ ವಿಭಾಗದಲ್ಲಿ ಪ್ರಶಸ್ತಿ ಲಭಿಸಿರುವುದು ಕಹಿಯ ನಡುವೆಯೂ ಸಿಹಿ ಸಿಕ್ಕಂತಾಗಿದೆ. 10 ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆ ಇರುವ 47 ನಗರ ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಪಾಲಿಕೆಗೆ 37ನೇ ರ್‍ಯಾಂಕಿಂಗ್ ಲಭ್ಯವಾಗಿದೆ. ಕಸ ವಿಲೇವಾರಿಯಲ್ಲಿ ಯಶಸ್ಸು ಸಾಧಿಸಲು ಶ್ರಮಿಸುತ್ತಿರುವ ಹಾಗೂ ಹಸಿಕಸ ಸಂಸ್ಕರಣೆ, ಶೌಚಾಲಯ ವ್ಯವಸ್ಥೆ ಸೇರಿ ವಿವಿಧ ಮಾನದಂಡಗಳ ಆಧಾರದ ಮೇಲೆ ಈ ಸ್ಥಾನ ಲಭ್ಯವಾಗಿದೆ.
ವ್ಯವಸ್ಥೆ ಸರಿಪಡಿಸಿಕೊಳ್ಳುತ್ತೇವೆ: ರಂದೀಪ್ : ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಈ ಬಾರಿ ಪಾಲಿಕೆಗೆ ಹಿನ್ನೆಡೆ ಉಂಟಾಗಿದೆ. ಈಗ ಇರುವ ಲೋಪದೋಷ ಸರಿಪಡಿಸಿಕೊಳ್ಳುತ್ತೇವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್ ಹೇಳಿದರು. ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿ, ಈ ಬಾರಿ ಗಾರ್ಬೇಜ್ ಫ್ರೀ ಸಿಟಿಯಲ್ಲಿ ಪಾಲಿಕೆ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಇದರಲ್ಲಿ ಪಾಲಿಕೆಗೆ 1 ಸಾವಿರ ಅಂಕ ನಷ್ಟವಾಗಿದೆ. ಈ ಲೋಪದೋಷ ಸರಿಪಡಿಸಿಕೊಂಡು ಮುಂದಿನ ಬಾರಿ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಉತ್ತಮ ಸಾಧನೆ ಮಾಡಲಿದ್ದೇವೆ. ಅಭಿಯಾನದಲ್ಲಿ ಎಲ್ಲೆಲ್ಲಿ ಅಂಕ ಕಳೆದುಕೊಳ್ಳುತ್ತಿದ್ದೇವೆ ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಿದ್ದು, ಇದನ್ನು ಸರಿಪಡಿಸಿಕೊಂಡು ಮುಂದಿನ ವರ್ಷ ಉತ್ತಮ ರ್‍ಯಾಂಕಿಂಗ್ ಗಳಿಸುತ್ತೇವೆ ಎಂದು ಹೇಳಿದರು.
ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಪಾಲಿಕೆಗೆ ಹಿನ್ನೆಡೆಯಾಗಲು ಆಡಳಿತ ಪಕ್ಷದ ನಿರ್ಲಕ್ಷ್ಯ ಹಾಗೂ ವೈಫಲ್ಯವೇ ಕಾರಣ. ಹಸಿ ಕಸ ಟೆಂಡರ್‌ದಾರರಿಗೆ ಸಕಾಲದಲ್ಲಿ ಕಾರ್ಯಾದೇಶ ನೀಡಿದ್ದರೆ ಪಾಲಿಕೆಗೆ ಉತ್ತಮ ಸ್ಥಾನ ಬರುತ್ತಿತ್ತು.
–ಅಬ್ದುಲ್ ವಾಜಿದ್,ವಿರೋಧ ಪಕ್ಷದ ನಾಯಕ, ಬಿಬಿಎಂಪಿ