ಬೆಂಗಳೂರು: ರಾಜ್ಯದಲ್ಲಿ 2021ನೇ ಸಾಲಿನ ಸ್ವತ್ಛ ಸರ್ವೇಕ್ಷಣ್ ಪ್ರಕ್ರಿಯೆಗಳು ಪ್ರಾರಂಭವಾದ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ (ಬಿಬಿಎಂಪಿ) ಪಾಲಿಕೆ ಸ್ವಚ್ಛ ಸರ್ವೇಕ್ಷಣ್‌ನ “ವಾಟರ್ ಪ್ಲಸ್’ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದೆ.
ಕಳೆದ ಬಾರಿ 214 ರ್‍ಯಾಂಕ್: ಕಳೆದ ಬಾರಿ ಸರ್ವೇಕ್ಷಣ್‌ನಲ್ಲಿ 214ನೇ ರ್‍ಯಾಂಕ್‌ಗೆ ಪಾಲಿಕೆ ತೃಪ್ತಿ ಆಗಿತ್ತು. ಅಲ್ಲದೆ, ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಮಾಡುವಲ್ಲೂ ನಿರೀಕ್ಷಿತ ಅಂಕ ಗಳಿಸಿರಲಿಲ್ಲ. ಹೀಗಾಗಿ, ಈ ಬಾರಿ ವಾಟರ್ ಪ್ಲಸ್‌ಗೆ ಅರ್ಜಿ ಸಲ್ಲಿಸಲು ಜಲಮಂಡಳಿಯೊಂದಿಗೆ ಚರ್ಚೆ ಪ್ರಾರಂಭಿಸಿದೆ.
6 ಸಾವಿರ ಅಂಕ ನಿಗದಿ: ಸರ್ವೇಕ್ಷಣ್‌ನಲ್ಲಿ ಸಾರ್ವಜನಿಕ ಅಭಿಪ್ರಾಯ, ಕಸ ವಿಲೇವಾರಿ ಪ್ರಕ್ರಿಯೆ ಹಾಗೂ ಪ್ರಮಾಣ ಪತ್ರಕ್ಕೆ ಒಟ್ಟು 6 ಸಾವಿರ ಅಂಕಗಳನ್ನು ನಿಗದಿ ಮಾಡಲಾಗಿದೆ. ಸ್ವಚ್ಛತೆ ಸೇರಿದಂತೆ ವಿವಿಧ ಮಾನ ದಂಡಗಳ ಆಧಾರದ ಮೇಲೆ ಒಡಿಎಫ್, ಒಡಿಎಫ್ ಪ್ಲಸ್, ಪ್ಲಸ್ ಹಾಗೂ ವಾಟರ್ ಪ್ಲಸ್ ಪ್ರಮಾಣ ಪತ್ರಕ್ಕೆ 700 ಅಂಕಗಳನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ.
ಏನಿದು ವಾಟರ್ ಪ್ಲಸ್ ಪ್ರಮಾಣ ಪತ್ರ: ಸ್ವಚ್ಛ ಸರ್ವೇಕ್ಷಣ್‌ನಲ್ಲಿ ನಗರದಲ್ಲಿನ ಶೌಚಾಲಯಗಳ ಸ್ವಚ್ಛತೆ, ಗಾರ್ಬೇಜ್ ಫ್ರೀ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಮಾಣ ಪತ್ರ ನೀಡಲಾಗುತ್ತದೆ. ಪ್ರಮಾಣ ಪತ್ರಕ್ಕೆ 1800 ಅಂಕ ನಿಗದಿ ಮಾಡಲಾಗಿದ್ದು, ಪ್ರಮಾಣ ಪತ್ರ ಬಂದರೆ, ರ್‍ಯಾಂಕಿಂಗ್‌ಗೆ ಸಹಕಾರಿಯಾಗಲಿದೆ. ವಾಟರ್‌ಪ್ಲಸ್ ಪ್ರಮಾಣ ಪತ್ರವು ಇವುಗಳಲ್ಲಿ ಒಂದಾಗಿದೆ.
ಉತ್ತಮ ರ್‍ಯಾಂಕ್ ಗಳಿಸಲು ಪ್ರಯತ್ನ: ಈ ಬಗ್ಗೆ ಉದಯವಾಣಿ ಜತೆ ಬಿಬಿಎಂಪಿ ವಿಶೇಷ (ಘನತ್ಯಾಜ್ಯ ನಿರ್ವಹಣೆ) ಆಯುಕ್ತ ಡಿ.ರಂದೀಪ್ ಮಾತನಾಡಿ, ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಈ ಬಾರಿ ಕಳೆದ ಬಾರಿಗಿಂತ ಉತ್ತಮ ರ್‍ಯಾಂಕಿಂಗ್ ಬರುವ ನಿರೀಕ್ಷೆ ಇದೆ. ನಗರದಲ್ಲಿ ಹಸಿಕಸ ಮತ್ತು ಒಣಕಸ ಪ್ರಮಾಣ ಹೆಚ್ಚಳ ಹಾಗೂ ಹೊಸ ಟೆಂಡರ್ ಸಹ ಜಾರಿಯಾಗಿದೆ. ಈ ನಿಟ್ಟಿನಲ್ಲಿ ಜಲಮಂಡಳಿಯ ಆಯುಕ್ತರೊಂದಿಗೆ “ವಾಟರ್ ಪ್ಲಸ್’ ಪ್ರಮಾಣಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ ಒಂದು ಸುತ್ತಿನ ಸಭೆ ನಡೆಸಲಾಗಿದೆ ಎಂದು ತಿಳಿಸಿದರು. ಕಳೆದ ಬಾರಿ ಜನಾಭಿಪ್ರಾಯ ಸಂಗ್ರಹ ಸೇರಿದಂತೆ ಕೆಲವು ನಿರ್ದಿಷ್ಟ ವಿಷಯಗಳಲ್ಲಿ ಹಿನ್ನಡೆ ಉಂಟಾಗಿತ್ತು. ಅಲ್ಲದೆ, ಪಾಲಿಕೆಯ ಕೆರೆ, ರಾಜಕಾಲುವೆ ಹಾಗೂ ಪಾರ್ಕ್ ಸೇರಿದಂತೆ ವಿವಿಧ ವಿಭಾಗದ ವ್ಯಾಪ್ತಿಯ ಮುಖ್ಯ ಅಧಿಕಾರಿಗಳ ಜೊತೆ ಸಹ ಸ್ವತ್ಛತೆಗೆ ಆದ್ಯತೆ ನೀಡಲು ಕೋರಲಾಗಿದೆ ಎಂದು ಮಾಹಿತಿ ನೀಡಿದರು.
ವಾಟರ್ ಪ್ಲಸ್ ಪ್ರಮಾಣ ಪತ್ರ ಸಿಗುವುದು ಅನುಮಾನ? : ಬಿಬಿಎಂಪಿ ಹಾಗೂ ಜಲಮಂಡಳಿ ಜಂಟಿಯಾಗಿ ವಾಟರ್‌ಪ್ಲಸ್ ಸರ್ಟಿಫಿಕೇಟ್‌ಗೆ ಅರ್ಜಿ ಸಲ್ಲಿಸಲು ಮುಂದಾಗಿದೆಯಾದರೂ, ಇದನ್ನು ಗಳಿಸಲು ಇರಬೇಕಾದ ಅರ್ಹತೆಗಳಲ್ಲಿ ಕನಿಷ್ಠ ಪ್ರಮಾಣದ ಸಿದ್ಧತೆ ಅಥವಾ ವ್ಯವಸ್ಥೆಯೂ ಆಗಿಲ್ಲ. ಹೀಗಾಗಿ, ವಾಟರ್ ಪ್ಲಸ್ ಸಿಗುವುದು ಅನುಮಾನ ಎಂದು ಹೆಸರು ಹೇಳಲು ಇಚ್ಛಿಸದ ಘನತ್ಯಾಜ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.
ವಾಟರ್ ಪಸ್ ಗಳಿಸಲು ಇರಬೇಕಾದ ಪ್ರಮುಖ ಅರ್ಹತೆಗಳು :
- ರಾಜಕಾಲುವೆಗೆ ಕೊಳಚೆ ತ್ಯಾಜ್ಯ ನೀರು, ಕಸ, ಪ್ಲಾಸ್ಟಿಕ್ ಸೇರಿದಂತೆ ಯಾವುದೇ ತ್ಯಾಜ್ಯ ಸೇರ ದಂತೆ ತಡೆಯಬೇಕು ಹಾಗೂ ಪ್ರತಿದಿನ ಇದನ್ನು ತೆರವು ಮಾಡಬೇಕು.
- ವ್ಯರ್ಥವಾದ ಕೊಳಚೆ ನೀರು ಕೊಳಚೆ ನೀರು ಸಂಸ್ಕರಣಾ ಘಟಕದ ಮೂಲಕ ಸಂಸ್ಕರಣೆ ಮಾಡಿದ ಶೇ.25 ಪ್ರಮಾಣದ ನೀರು ನಗರದಲ್ಲಿನ ರಸ್ತೆಗಳ ಸ್ವತ್ಛತೆ, ಕೈಗಾರಿಕೆ, ಕೃಷಿ ಹಾಗೂ ವಿವಿಧ ಕಾಮಗಾರಿಗಳಲ್ಲಿ ಕಡ್ಡಾಯವಾಗಿ ಬಳಸಬೇಕು.
- ನಗರದಲ್ಲಿ ಉತ್ಪತ್ತಿಯಾಗುವ ಒಳಚರಂಡಿ ನೀರು ಹರಿದು ಹೋಗಲು ನಿರ್ದಿಷ್ಟ ಪೈಪ್ ಮಾರ್ಗ ಇರಬೇಕು ಅಥವಾ ಸೋಪ್ ಪಿಟ್ ವ್ಯವಸ್ಥೆ ಇರಬೇಕು. (ರಾಜಕಾಲುವೆಗೆ ಬಿಡಬಾರದು).
- ಒಳಚರಂಡಿ ನೀರು ಯಾವುದೇ ಕಾರಣಕ್ಕೂ ರಸ್ತೆ ಅಥವಾ ರಾಜಕಾಲುವೆಗೆ ಹರಿಯಲು ಬಿಡಬಾರದು.
- ಕುಡಿಯುವ ನೀರು, ಒಳಚರಂಡಿ ನೀರು ರಸ್ತೆ ಅಥವಾ ಮೋರಿಯಲ್ಲಿ ಹರಿದು ಹೋಗಬಾರದು. ಸರ್ವೀಸ್ ಲೆವೆಲ್ ಸಮಯದಲ್ಲಿ ಇದು ಪೂರ್ಣಗೊಳ್ಳಬೇಕು.
–ಹಿತೇಶ್ ವೈ