ಕಲಬುರಗಿ: ಭಾರತ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಚುನಾವಣೆ ಪ್ರಚಾರಕ್ಕಾಗಿ ವಾಹನ ಬಳಕೆ, ರ್ಯಾಲಿ, ಬಹಿರಂಗ ಸಭೆ ಸೇರಿದಂತೆ ಇನ್ನಿತರ ಪ್ರಚಾರ ಸಾಮಗ್ರಿ ಬಳಸಲು ಅನುಮತಿ ಕಡ್ಡಾಯ ಆಗಿರುವುದರಿಂದ ಆನ್‌ಲೈನ್ ಮೂಲಕ ಅನುಮತಿ ಪಡೆಯಲು “ಸುವಿಧಾ’ಎನ್ನುವ ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಈ ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶಕುಮಾರ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳಿಗೆ ಇ.ವಿ.ಎಂ. ಮತ್ತು ವಿವಿಪ್ಯಾಟ್ ಹಾಗೂ ಸುವಿಧಾ ಮತ್ತು ಸಮಾಧಾನ್ ಆನ್‌ಲೈನ್ ಸೇವೆಗಳ ಅರ್ಜಿ ಸಲ್ಲಿಕೆ ಕುರಿತು ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಸುವಿಧಾ ಲಿಂಕ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಿದ ನಂತರ 48 ಗಂಟೆಯೊಳಗಾಗಿ ಅನುಮತಿ ನೀಡಲಾಗುತ್ತದೆ ಎಂದರು.
ಅರ್ಜಿ ಸಲ್ಲಿಕೆ ನಂತರ ಮೊಬೈಲ್ ಗೆ ಸ್ವೀಕೃತಿ ಸಂಖ್ಯೆ ಬರಲಿದೆ. ಸ್ವೀಕೃತಿ ಸಂಖ್ಯೆಯಿಂದ ಅರ್ಜಿ ಸ್ಥಿತಿಗತಿಯನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು. ಅನುಮತಿ ಪತ್ರ ಸಹ ಆನ್‌ಲೈನ್ ಮೂಲಕವೇ ಪಡೆದುಕೊಳ್ಳಬಹುದು. ಒಂದು ವೇಳೆ ರಾಜಕೀಯ ಪಕ್ಷಗಳು ನೇರವಾಗಿ ಕಚೇರಿಗೆ ಬಂದು ಅರ್ಜಿ ಸಲ್ಲಿಸಿದಲ್ಲಿ ಅದನ್ನು ಸ್ವೀಕರಿಸಲಾಗುತ್ತದೆ ಎಂದು ತಿಳಿಸಿದರು.
108 ಪ್ರಕರಣ ದಾಖಲು: ನೀತಿ ಸಂಹಿತೆ ಜಾರಿ ದಿನಾಂಕದಿಂದ ಇಂದಿನ ವರೆಗೆ ಅಕ್ರಮ ಮದ್ಯ ಸಾಗಣೆಯಲ್ಲಿ ಭಾಗಿಯಾದವರ ಮೇಲೆ 108 ಪ್ರಕರಣಗಳು ದಾಖಲಾಗಿದ್ದು, 5 ಲಕ್ಷ ರೂ. ಮೊತ್ತದ 2 ಲಕ್ಷ ಲೀಟರ್ ಅಕ್ರಮ ಮದ್ಯ ಹಾಗೂ 28 ವಿವಿಧ ಮಾದರಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತರು ತಿಳಿಸಿದರು.
ಇ.ವಿ.ಎಂ ಮತ್ತು ವಿವಿ ಪ್ಯಾಟ್ ಕುರಿತು ಡಾ| ಶಶಿಶೇಖರ ರೆಡ್ಡಿ ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಕೆ ಕುರಿತು ಮಹಾಂತೇಶ ಕುಮಾರ ತರಬೇತಿ ನೀಡಿದರು.