Advertisement

ಸುತ್ತೂರಿನ ಸವಿ ತುತ್ತು

09:29 PM Jan 24, 2020 | Lakshmi GovindaRaj |

ಸುತ್ತೂರಿನ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಈಗಾಗಲೇ ಶುರುವಾಗಿದ್ದು, 26ಕ್ಕೆ ಕೊನೆಗೊಳ್ಳಲಿದೆ. ಜಗತ್ತಿಗೆ ಶಾಂತಿ ಬೋಧಿಸಿದ ಈ ಮಠದಲ್ಲಿ ಭೋಜನವೂ ಒಂದು ಸದ್ಗುರು ವಿಶೇಷ…

Advertisement

ಶಿವರಾತ್ರೀಶ್ವರ ಶಿವಯೋಗಿಗಳ ಕೃಪೆಯಿಂದ ನಡೆಯುವ ಸುತ್ತೂರು ಮಠದ ಊಟದ ರುಚಿಯನ್ನು ಹತ್ತೂರು ಬಲ್ಲದು. ಜೀವನದಿ ಕಪಿಲೆಯ ತಟದಲ್ಲಿ ವಿಶಾಲವಾಗಿ ಹಬ್ಬಿರುವ ಮಠದಲ್ಲಿ ಹಸಿವು ನೀಗಿಸುವ ಸಂಪ್ರದಾಯದಲ್ಲೂ ಒಂದು ಶಿಸ್ತು ಎದ್ದು ಕಾಣುತ್ತದೆ. ಶಿವರಾತ್ರೀಶ್ವರರ ಮೇಲಿನ ಮಹೋನ್ನತ ಭಕ್ತಿ, ದಾಸೋಹ ಪರಂಪರೆಗೆ ಅಪೂರ್ವ ಶೋಭೆ ತುಂಬಿದೆ. “ಮಠಕ್ಕೆ ಯಾರೇ ಬಂದರೂ, ಹಸಿದ ಹೊಟ್ಟೆಯಲ್ಲಿ ಮರಳಿ ಹೋಗುವಂತಿಲ್ಲ’ ಎನ್ನುವ ಅಕ್ಕರೆಯ, ಮಾನವೀಯ ಕಳಕಳಿ ಸುತ್ತೂರು ಮಠದ ಈಗಿನ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳದ್ದು.

ಆದಿ ಜಗದ್ಗುರು ಶಿವರಾತ್ರಿ ಶಿವಯೋಗಿಗಳಿಂದ ಮಂತ್ರ ಮಹರ್ಷಿಗಳೂ ಸೇರಿದಂತೆ ಈಗಿನ ಜಗದ್ಗುರುಗಳ ವರೆಗೂ, ಇಲ್ಲಿನ ಅನ್ನದಾಸೋಹಕ್ಕೆ ವಿಶೇಷ ಮಹತ್ವ ಸಿಕ್ಕಿದೆ. ಅದರಲ್ಲೂ ಈಗ ನಡೆಯುತ್ತಿರುವ ಸುತ್ತೂರು ಜಾತ್ರೆಯ ಹೊತ್ತಿನಲ್ಲಿ, ಲಕ್ಷೋಪಲಕ್ಷ ಜನ, ಅನ್ನಸಂತರ್ಪಣೆಗೆ ಪಾತ್ರರಾಗುತ್ತಿದ್ದಾರೆ. ಸುತ್ತೂರು ಮಠದ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ನಡೆಯುವ ದಾಸೋಹ ಎಷ್ಟು ಖ್ಯಾತಿಯೋ, ಹಾಗೆಯೇ ಮೂಲ ಮಠದಲ್ಲಿ ಸದ್ಭಕ್ತರಿಗೆ ನೀಡುವ ಊಟವೂ ಅಷ್ಟೇ ವಿಶೇಷ.

ನಿತ್ಯ ಅನ್ನ ಸಂತರ್ಪಣೆ: ಮಠದ ಸದ್ಭಕ್ತರಲ್ಲದೆ, ಇಲ್ಲಿ ತಂಗಲು ಬರುವ ಪ್ರವಾಸಿಗರಿಗೂ ಇಲ್ಲಿ ನಿತ್ಯ ಭೋಜನ ಕಲ್ಪಿಸಲಾಗುತ್ತದೆ. ದಿನಕ್ಕೆ ಕನಿಷ್ಠ 700 ಮಂದಿ ಮಠದ ಅನ್ನಪ್ರಸಾದ ಸವಿಯುತ್ತಾರೆ.

ಭಕ್ಷ್ಯ ಸಮಾಚಾರ
– ಬೆಳಗ್ಗೆ ಲಘು ಉಪಾಹಾರ, ಪಾನೀಯವಾಗಿ ಕಾಫೀ- ಟೀ, ಹಾಲು ನೀಡಲಾಗುತ್ತದೆ.
– ಮಧ್ಯಾಹ್ನ ಮತ್ತು ರಾತ್ರಿ ಊಟವು ಅನ್ನ- ಸಾಂಬಾರ್‌, ಚಪಾತಿ, ಪೂರಿ, ಹಪ್ಪಳ, ಪಲ್ಯವನ್ನೊಳಗೊಂಡಿದೆ.
– ಹಳೇ ಮೈಸೂರು ಶೈಲಿಯ ಹುರುಳಿ ಸಾರು ಇಲ್ಲಿನ ವಿಶೇಷ.
– ವೀರಶೈವರ ಅಡುಗೆ ರುಚಿಯಲ್ಲಿ ಒಂದಾದ ಕಡ್ಲೆಹುಳಿ ಪಾಯಸಕ್ಕೂ ಭಕ್ತರು ಮನಸೋಲುತ್ತಾರೆ.
– ಚಳಿಗಾಲದಲ್ಲಿ ಅವರೆ ಕಾಳಿನ ಉಪ್ಪಿಟ್ಟು ಇಲ್ಲಿ ಜನಪ್ರಿಯ.
– ಅಲಸಂದೆ ವಡೆ, ಕಜ್ಜಾಯ ಸಿಹಿ ತಿನಿಸು ಇಲ್ಲಿನ ದಾಸೋಹದ ರುಚಿ ಹೆಚ್ಚಿಸಿವೆ.

Advertisement

ಇಲ್ಲಿನ ವಿಶೇಷಗಳು: ಪ್ರತಿನಿತ್ಯ 3- 4 ಸಾವಿರ ಅತಿಥಿಗಳಿಗೆ ವಸತಿ ಹಾಗೂ 10 ಸಾವಿರ ಭಕ್ತರಿಗೆ ಊಟ ಬಡಿಸುವ ಸಕಲ ವ್ಯವಸ್ಥೆ ಇಲ್ಲಿದೆ. ಸುತ್ತಲೂ ಪ್ರವಾಸಿ ತಾಣಗಳು ಇರುವುದರಿಂದ, ಹಾಗೆ ಮಠಕ್ಕೆ ಬಂದವರಿಗೆ, ಯಾವುದೇ ಕೊರತೆ ಎನ್ನಿಸಿದಂತೆ ಊಟೋಪಚಾರದ ವ್ಯವಸ್ಥೆಗಳಿವೆ. ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆತರುವ ಶಿಕ್ಷಕರು, ಮುಂಚಿತವಾಗಿ ತಿಳಿಸಿದರೆ, ಅಗತ್ಯ ಭೋಜನ ವ್ಯವಸ್ಥೆ ಅಲ್ಲದೆ, ಪಾರ್ಸೆಲ್‌ ಅನ್ನೂ ನೀಡಲಾಗುತ್ತದೆ. ಸದ್ಭಕ್ತರು ಯಾವುದೇ ಸಂದರ್ಭದಲ್ಲಿ ಬಂದರೂ, ಹಸನ್ಮುಖದಿಂದಲೇ ಇಲ್ಲಿ ಭೋಜನ ಬಡಿಸುವುದು ವಿಶೇಷ.

ಊಟದ ಸಮಯ
– ಮಧ್ಯಾಹ್ನ 11ರಿಂದ ರಾತ್ರಿ 10

ಸಂಖ್ಯಾ ಸೋಜಿಗ
4- ಪ್ರಧಾನ ಬಾಣಸಿಗರು
6- ಪರಿಚಾರಕರು
10- ಸ್ವತ್ಛತಾ ಸಿಬ್ಬಂದಿ
700- ಮಂದಿಗೆ ನಿತ್ಯ ಭೋಜನ
10,000- ಭಕ್ತರಿಗೆ ಊಟದ ವ್ಯವಸ್ಥೆ ಸಾಮರ್ಥ್ಯ
1,20,000- ಮಂದಿಗೆ ಕಳೆದ ಡಿಸೆಂಬರ್‌ನಲ್ಲಿ ಅನ್ನಸಂತರ್ಪಣೆ

ಜಾತ್ರೆ ವೇಳೆ 10 ಲಕ್ಷ ಮಂದಿಗೆ ದಾಸೋಹ: ಸುತ್ತೂರು ಜಾತ್ರಾ ಮಹೋತ್ಸವ ಎಷ್ಟು ಪ್ರಸಿದ್ಧಿಯೋ ಶ್ರೀಮಠದ ಮಹಾದಾಸೋಹ ಕೂಡ ಅಷ್ಟೇ ಹೆಸರು ವಾಸಿಯಾಗಿದೆ. ದಾಸೋಹದಲ್ಲಿ ಭಕ್ತರಿಗೆ ಸೇವಾ ಮನೋಭಾವದಿಂದ ಉಣಬಡಿಸಲು ವಿವಿಧ ಗ್ರಾಮಗಳ ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳುತ್ತಾರೆ. ಆರು ದಿನಗಳ ಅವಧಿಯಲ್ಲಿ ಸುಮಾರು 10 ಲಕ್ಷ ಭಕ್ತರಿಗೆ ದಾಸೋಹ ಕಲ್ಪಿಸಲಾಗಿರುತ್ತದೆ.

ಬಾಣಸಿಗರು ಮಾಡಿಟ್ಟ ಶುಚಿ-ರುಚಿಯಾದ ಭೋಜನವನ್ನು ಭಕ್ತರಿಗೆ ಬಡಿಸುವ ಕೈಂಕರ್ಯಕ್ಕೆ ಸೇವಾಕಾಂಕ್ಷಿಗಳ ದಂಡೇ ಇಲ್ಲಿ ಜಮಾವಣೆಯಾಗುತ್ತದೆ. ಸೇವೆಗಾಗಿ ಜೆಎಸ್‌ಎಸ್‌ನ 350ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕ ವೃಂದ ಹಾಗೂ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸದಾ ಟೊಂಕಕಟ್ಟಿ ನಿಲ್ಲುತ್ತಾರೆ. ಇವರೊಂದಿಗೆ ಸುತ್ತೂರಿನ ಸುತ್ತಲಿನ ಹತ್ತೂರಿನ ಗ್ರಾಮಸ್ಥರೂ ಸಹಕಾರ ನೀಡುತ್ತಾರೆ.

* ಶ್ರೀಧರ ಭಟ್‌, ನಂಜನಗೂಡು

Advertisement

Udayavani is now on Telegram. Click here to join our channel and stay updated with the latest news.

Next